ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಕೈಲಾಜೆ ಎಂಬಲ್ಲಿ ಸಾರ್ವಜನಿಕರಿಗೆ ರಸ್ತೆಗಾಗಿ ಕೃಷಿಕರೊಬ್ಬರ ನಾಲ್ಕು ವರ್ಷಗಳಷ್ಟು ದೊಡ್ಡ ಸುಮಾರು 50 ರಬ್ಬರ್ ಗಿಡಗಳನ್ನು ಕಡಿದು ಹಾಕಿದ ಘಟನೆ ಶುಕ್ರವಾರ ನಡೆದಿದೆ.
ನಡ ಗ್ರಾಪಂ ವ್ಯಾಪ್ತಿಯ ಕನ್ಯಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಉದ್ಧೇಶದಿಂದ ಕೈಲಾಜೆ ಎಂಬಲ್ಲಿಂದ ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿಗೆ ಸಂಪರ್ಕ ಸಂಪರ್ಕ ಕಲ್ಪಿಸುವುದಕ್ಕಾಗಿ ಸ್ಥಳೀಯ ನಿವಾಸಿ ಕುಂಞಣ್ಣ ಗೌಡ ಎಂಬವರು ನೆಟ್ಟಿದ್ದ ಸುಮಾರು 4 ವರ್ಷದ ಸುಮಾರು 50 ರಬ್ಬರ್ ಗಿಡಗಳನ್ನು ಬೆಳ್ತಂಗಡಿ ಕಂದಾಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಮಸಕ್ಷಮದಲ್ಲೇ ಕಡಿದು ಹಾಕಿದ್ದು, ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೇ ಹಣ ನೀಡಿದ್ದು, ಈ ಸಂದರ್ಭದಲ್ಲಿ ಪ್ರತಿರೋಧ ಒಡ್ಡಿದ ಕುಂಞಣ್ಣ ಗೌಡ ಮನೆಯವರಿಗೆ ಬೆದರಿಕೆ ಹಾಕಲಾಗಿದೆ. ಈ ರಸ್ತೆ ಮುಂದೆ ಅರಣ್ಯ ಇಲಾಖೆಯ ಜಾಗದಲ್ಲಿ ಹಾದುಹೋಗಲಿದ್ದು, ಅರಣ್ಯ ಇಲಾಖೆಯವರು ಈಗಾಗಲೇ ರಸ್ತೆ ನಿರ್ಮಿಸದಂತೆ ನೋಟೀಸು ಮಾಡಿದ್ದಾರೆ.
ಬೆಳಿಗ್ಗೆ ಏಕಾಏಕಿ ಜೆಸಿಬಿ ಮೂಲಕ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಸೇರಿಕೊಂಡು ರಬ್ಬರ್ ಗಿಡಗಳನ್ನು ಕಡಿದು ಹಾಕಿ ಜೆಸಿಬಿ ಮೂಲಕ ರಸ್ತೆ ನಿರ್ಮಿಸಿದ್ದಾರೆ. ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಇವರ ಕೃತ್ಯಕ್ಕೆ ಸಾತ್ ನೀಡಿದ್ದಾರೆ. ಕಂದಾಯ ಅಧಿಕಾರಿಗಳಲ್ಲಿ ರಸ್ತೆಗೆ ಸಂಬಂಧಿಸದ ಅನುಮತಿಪತ್ರ, ಜಾಗದ ನಕ್ಷೆಯನ್ನು ನೀಡುವಂತೆ ಕೇಳಿದರೂ ಮರುಮಾತನಾಡದೆ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ. ಆ ಭಾಗದ ಸಾರ್ವಜನಿಕರಿಗೆ ಈಗಾಗಲೇ ಪಂಚಾಯತ್ ರಸ್ತೆಯಿದ್ದು, ಇದೀಗ ಹೊಸ ರಸ್ತೆಯನ್ನು ಯಾರದ್ದೋ ಒತ್ತಡದಿಂದ ನಿಮಿಸಿದ್ದು, 4 ವರ್ಷಗಳ ಕಾಲ ಬೆಳೆಸಿದ ಗಿಡಗಳನ್ನು ಕಡಿದು ಉರುಳಿಸಿದಾಗ ಕುಂಞಣ್ಣ ಗೌಡ ಕಣ್ಣೀರಿಟ್ಟಿದ್ದಾರೆ. ಗಿಡಿಗಳು ಇಷ್ಟು ದೊಡ್ಡದಾಗುವ ತನಕ ರಸ್ತೆಗೆ ಬೇಡಿಕೆ ಇಲ್ಲದವರು ಈಗ ಏಕಾಏಕಿ ರಸ್ತೆ ನಿರ್ಮಿಸಲು ಹೊರಟಿರುವುದ ಉದ್ಧೇಶವೇನು ತಿಳಿಯುತ್ತಿಲ್ಲ. ಇದರ ಹಿಂದ ರಾಜಕೀಯ ಒತ್ತಡವಿದೆ ಎಂದಿದ್ದಾರೆ.