News Kannada
Thursday, September 29 2022

ಕರಾವಳಿ

ನಾಗರಿಕರ ಮೂಲಭೂತ ಹಕ್ಕಿಗಾಗಿ ಹೋರಾಟ ಅಗತ್ಯ:ನಿತ್ಯಾನಂದ ಸ್ವಾಮಿ - 1 min read

Photo Credit :

ನಾಗರಿಕರ ಮೂಲಭೂತ ಹಕ್ಕಿಗಾಗಿ ಹೋರಾಟ ಅಗತ್ಯ:ನಿತ್ಯಾನಂದ ಸ್ವಾಮಿ

ಕಾರ್ಕಳ: ಮೂಲಭೂತ ಸೌಕರ್ಯಗಳು ನಾಗರಿಕರ ಹಕ್ಕು ಆಗಿರಬೇಕೆ ಹೊರತು ಭಿಕ್ಷೆಯಾಗಬಾರದು. ಮೂಲಭೂತ ಹಕ್ಕುಗಳ ಹೋರಾಟವು ಸಂವಿಧಾನ ಬದ್ಧವಾಗಿದೆ. ಅದಕ್ಕೆ ಸರಕಾರವು ಮನ್ನಣೆ ನೀಡಿ ಸಕರಾತ್ಮಕವಾಗಿ ಸ್ವಂದಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಲು 84 ಸಿ  ಮತ್ತು 94ಸಿಸಿ ಅಡಿ ಅರ್ಜಿದಾರ ಫಲಾನುಭವಿಗಳಿಗೆ ಭೂಮಿ ಹಕ್ಕು ಪತ್ರ ಕೂಡಲೇ ಮಂಜೂರು ಮಾಡಲು ಒತ್ತಾಯಿಸಿ ಸಲ್ಲಿಸುವ ಸಾಮೂಹಿಕ ಮನವಿ ಮತ್ತು ಮನೆ ನಿವೇಶನಕ್ಕಾಗಿ ಸಾಮೂಹಿಕ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಮನೆ ನಿವೇಶನ ಕೊಡಲು ಒತ್ತಾಯಿಸಿ ಕಾರ್ಕಳ ತಾಲೂಕು ಸಮಿತಿ ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ ಆಯೋಜಿಸಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಸರಕಾರದ ಹಿಡಿತದಲ್ಲಿ ಜಾಗ ಖಾಲಿ ಇದ್ದು ಅದನ್ನು ಬಡವರ ಪಾಲಿಗೆ ಗಗನಕುಸುಮವಾದರೆ ಶ್ರೀಮಂತರಿಗೆ ವರವಾಗಿ ಪರಿಣಮಿಸಿರುವುದರಿಂದ ಬಡವರು ಬೀದಿಗಿಳಿದು ಹೋರಾಟ ನಡೆಸಬೇಕಾದ ದುರವಸ್ಥೆ ಉಂಟಾಗಿದೆ. ಜನಪರ ಹೋರಾಟ ನಡೆಸಿ ಜೈಲು ಪಾಲಾದರೆ ಆತನೊಬ್ಬ ಹೋರಾಟಗಾರನಾಗುತ್ತಾನೆ. ಆದರೆ ಪ್ರಸಕ್ತ ದಿನಗಳಲ್ಲಿ ಭ್ರಷ್ಟಾಚಾರ ನಡೆಸಿ ಜೈಲು ಪಾಲಾದ ರಾಜಕರಣಿಗಳ ಹಿಡಿತದಲ್ಲಿ ಪಕ್ಷ ಇರುವುದು ದೇಶದ ದುರಂತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.
 
ಸರಕಾರಿ ಜಾಗಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು 94 ಸಿ ಕಲಂನಂತೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕು ಪತ್ರ ಮಂಜೂರು ಮಾಡಬೇಕು. ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯಿದೆ 1964 ರ ಕಲಂ 94 ಸಿ ಅಡಿ ಅರ್ಜಿದಾರ ಫಲಾನುಭವಿಗಳೆಲ್ಲರೂ ಯಾವುದೇ ದಂಡನೆ ಶುಲ್ಕ ವಿಧಿಸದೇ ಉಚಿತವಾಗಿ ಹಕ್ಕು ಪತ್ರ ಕೊಡಬೇಕು. 94 ಸಿ ಕಲಂ ಅಡಿ ಭೂಮಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ತ್ವರಿತವಾಗಿ ಸ್ಥಳ ಮಂಜೂರು ಮಾಡುವುದಕ್ಕೆ ಪ್ರತಿ ಗ್ರಾಮಕ್ಕೊಬ್ಬ ಗ್ರಾಮ ಲೆಕ್ಕಾಧಿಕಾರಿ ಪ್ರತಿ ಗ್ರಾಮ ಪಂಚಾಯತ್ ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಮತ್ತು ಸಾಕಷ್ಟು ಸಂಖ್ಯೆ ಸರ್ವೇಯರನ್ನು ಹೆಚ್ಚಿಗೆ ನೇಮಿಸಲು ಕ್ರಮ ಕೈಗೊಳ್ಳಬೇಕು.
 
ಕಂದಾಯ ಇಲಾಖಾಧಿಕಾರಿಗಳಾದ ಕಂದಾಯ ನಿರೀಕ್ಷಕರು ಮತ್ತು ಸರ್ವೇಯರ್ಗಳನ್ನೊಳಗೊಂಡಂತೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಮ್ಮ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳೊಂದಿಗೆ 94 ಸಿ ಅರ್ಜಿದಾರರರಿಗೆ ಹಕ್ಕು ಪತ್ರ ಮಂಜೂರಾತಿ ಪ್ರಗತಿಯ ಮಾಹಿತಿ ಬಗ್ಗೆ ಕನಿಷ್ಟ 2 ತಿಂಗಳಿಗೊಮ್ಮೆ ಜಂಟೀ ಸಭೆಯನ್ನು ಕರೆಯಬೇಕು. ಸರಕಾರಿ ಜಮೀನಿನಲ್ಲಿ ಮನೆ ಕಟ್ಟಡ,ಕೃಷಿ,ತೋಟ,ನೀರಾವರಿ ಬಾವಿ ಇತ್ಯಾದಿ ಅಭಿವೃದ್ಧಿ ಪಡಿಸಿ ಸ್ಥಳ ಸ್ವಾದೀನತಾ ಅನುಭವ ಹೊಂದಿರುವ ಎಲ್ಲಾ ಭೂಮಿಯನ್ನು ಯಾವುದೇ ವಿಸ್ತೀರ್ಣಕ್ಕೆ ಮಿತಿ ಹೇರದೇ 94 ಸಿ ಅರ್ಜಿದಾರ ಫಲಾನುಭವಿಗಳಿಗೆ ಸಂಪೂರ್ಣ ಸ್ಥಳ ಮಂಜೂರು ಮಾಡಬೇಕು.

See also  ಸಿಂಹ ಸಂಕ್ರಮಣ: ವೀರೇಂದ್ರ ಹೆಗ್ಗಡೆಯವರಿಂದ ತೈಲ ದಾನ, ಪಡಿಕಾಳು ವಿತರಣೆ

ಕುಮ್ಕಿ, ಗೋಮಾಳ, ಗೋಚರಾವು,ಡೀಮ್ಡ್ಫಾರೆಸ್ಟ್  ಇತ್ಯಾದಿ ಕಂದಾಯ ಮೀಸಲು ಸ್ಥಳಗಳಲ್ಲಿ ಮನೆ ಕಟ್ಟಿ ಕುಳಿತ 94 ಸಿ ಅರ್ಜಿದಾರ ಫಲಾನುಭವಿಗಳಿಗೆ ಯಾವುದೇ ಕಾನೂನು ನೆಪ ಹೇಳದೇ ಭೂಮಿ ಹಕ್ಕು ಮಂಜೂರು ಮಾಡಬೇಕು ಎಂಬ ಬೇಡಿಕೆಗಳು ಮನವಿ ಪತ್ರದಲ್ಲಿ ಉಲ್ಲೇಖಗೊಂಡಿತು. ಬಂಡೀಮಠ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆ ಆಯೋಜಿಸಿದ್ದು ಅಲ್ಲಿಂದ ಹೊರಟ ಮೆರವಣಿಯೂ ತಾಲೂಕು ಕಚೇರಿಯ ಮುಂಭಾಗದಲ್ಲಿ ಸೇರಿ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು.

ಸಿಐಟಿಯು ಜಿಲ್ಲಾಧ್ಯಕ್ಷ ವಿಠಲ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಕ್ಷರ ದಾಸೋಹ ಮುಖಂಡೆ ಜಯಶ್ರೀ, ನಿವೇಶನ ರಹಿತ ಹೋರಾಟ ಸಮಿತಿಯ ಸಂಚಾಲಕರಾದ ಸುನೀತಾಶೆಟ್ಟಿ,ಶೇಖರ್ ಕುಲಾಲ್, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಕವಿರಾಜ್ ಎಸ್ ಮೊದಲಾದವರು ನೇತೃತ್ವವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು