News Kannada
Thursday, September 29 2022

ಕರಾವಳಿ

ಚದುರಿ ಹೋದ ಐತಿಹಾಸಿಕ ಪುತ್ತೂರು ಸಂತೆ..! - 1 min read

Photo Credit :

ಚದುರಿ ಹೋದ ಐತಿಹಾಸಿಕ ಪುತ್ತೂರು ಸಂತೆ..!

ಪುತ್ತೂರು: ಜಿಲ್ಲೆಯಲ್ಲೆ ಅತ್ಯಂತ ಹಿರಿದಾದ, 90 ವರ್ಷಗಳ ಇತಿಹಾಸ ಇರುವ ಪುತ್ತೂರು ಸಂತೆ ಎಪಿಎಂಸಿಗೆ ಸ್ಥಳಾಂತರಗೊಂಡು ಆರು ವಾರ ಕಳೆದಿದೆ. ಆದರೆ ಸಂತೆ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಈ ಹಿಂದಿನ ಸಂತೆಯ ಅನುಭವ ಆಗೇ ಇಲ್ಲ. ಇನ್ನೂ ಒಟ್ಟಾಗಿ ಇರದೆ, ಚೆಲ್ಲಾಪಿಲ್ಲಿಯಾದ ಸ್ಥಿತಿ ಪುತ್ತೂರು ಸಂತೆಯದ್ದು. ವಾರ-ವಾರವೂ ವಾದ-ವಿವಾದಗಳಿಂದಲೇ ಸುದ್ದಿಯಾಗುವ ಸಂತೆ ಉಳಿದರೂ, ಹಿಂದಿನ ವೈಭವ ಇತಿಹಾಸ ಪುಟ ಸೇರುವ ಭೀತಿ ಜನರದ್ದು. ಹಾಗಾಗಿ ಅಂತೆ-ಕಂತೆಗಳ ಹೊಯ್ದಾಟದಲ್ಲಿ ಪುತ್ತೂರು ಸಂತೆಗೆ ಪೂರ್ಣ ಸ್ವಾತಂತ್ರ್ಯ ಇನ್ನೂ ಪ್ರಾಪ್ತಿ ಆಗಿಲ್ಲ.!

ಸಂತೆ ಕಟ್ಟೆ

1996 ರ ತನಕ ಪುತ್ತೂರಿನ ವಾರದ ಸಂತೆಗೆ ನಗರದ ಕೋರ್ಟ್ ಬಳಿ ಸಂತೆ ಕಟ್ಟೆಯಿತ್ತು. ಎಡಿಬಿ ಯೋಜನೆಯಡಿ ಪುತ್ತೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಂತೆ ಕಟ್ಟೆಯನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಸಂತೆ ಕಟ್ಟೆ ಸ್ಥಳದಲ್ಲಿ ಹಾಲಿ ನಗರಸಭಾ ಕಟ್ಟಡ ನಿರ್ಮಾಣವಾಯಿತು. ಇದರ ಕೆಳಗಡೆ ಸಂತೆಗಾಗಿ ಬೆಂಗಳೂರು ಮಾದರಿಯಲ್ಲಿ ವ್ಯವಸ್ಥೆ ಮಾಡಲಾಯಿತಾದರೂ ಇಲ್ಲಿಗೆ ಮತ್ತೆ ಸಂತೆ ಸ್ಥಳಾಂತರ ಆಗಲಿಲ್ಲ.

ಈ ಪರಿಣಾಮದಿಂದ 1996 ರಲ್ಲಿ ವಾರದ ಸಂತೆ ತನ್ನ ಕಟ್ಟೆಯನ್ನು ಬಿಟ್ಟು ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಸ್ಥಳಾಂತರವಾಯಿತು. ಅಲ್ಲಿಂದ ಇಲ್ಲಿಯ ತನಕ ಪುತ್ತೂರಿನ ವಾರದ ಸಂತೆಗೆ ಕಟ್ಟೆ ನಿರ್ಮಾಣವಾಗಲಿಲ್ಲ. ಇದರ ಪರಿಣಾಮ ವರ್ಷಾನುಗಟ್ಟಲೆಯಿಂದ ಪುತ್ತೂರಿನ ಸಂತೆ ನಗರಸಭಾ ಕಚೇರಿ ಪರಿಸರದ ರಸ್ತೆಯಲ್ಲಿ ಮತ್ತು ಕಿಲ್ಲೆ ಮೈದಾನದಲ್ಲಿ ಪ್ರತಿ ಸೋಮವಾರ ನಡೆಯುತ್ತಿತ್ತು.

ಸಮಸ್ಯೆಯ ಮೂಲ..!

ಕಿಲ್ಲೆ ಮೈದಾನದ ಸಂತೆಯಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ, ಟ್ರಾಫಿಕ್ ಸಮಸ್ಯೆ ಮೊದಲಾದ ಕಾರಣಕ್ಕೆ ಸಂಚಾರ ಠಾಣೆಯ ವರದಿ ಆಧರಿಸಿ ಆ.15 ರ ಸಂತೆಯನ್ನು ಉಪವಿಭಾಗ ದಂಡಾಕಾರಿ ಅವರು ಸಂತೆ ಎಪಿಎಂಸಿಗೆ ಸಂತೆ ವರ್ಗಾವಣೆಗೊಳಿಸಿ ಆದೇಶ ನೀಡಿದ್ದರು. ಅಲ್ಲಿಂದ ಕಿಲ್ಲೆ ಸಂತೆ, ಎಪಿಎಂಸಿ ಸಂತೆ ಎಂಬ ಚರ್ಚೆ ಬೀದಿ-ಬೀದಿಯಲ್ಲೂ ಗರಿಗೆದರಿತ್ತು. ಕೆಲವರು ನಗರದಲ್ಲೆ ಸಂತೆ ಎಂಬ ಪರ ನಿಂತರೆ, ಇನ್ನೂ ಕೆಲವರು ಎಪಿಎಂಸಿ ಸೂಕ್ತ ಅಂದರು. ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂತು. ಎಪಿಎಂಸಿಯಲ್ಲಿ ಸಂತೆ ಸ್ಥಳಾಂತರಗೊಂಡ ಎರಡು ವಾರದ ಅನಂತರ ನಗರದ ಅಲ್ಲಲ್ಲಿ ತರಕಾರಿ ಬಜಾರ್ ಆರಂಭಗೊಂಡಿತ್ತು. ಆ ಬಳಿಕ ನಗರಸಭೆಯ ಆಡಳಿತ-ಪ್ರತಿಪಕ್ಷದ ಸದಸ್ಯರ ಮಧ್ಯೆ ಪರ-ವಿರೋಧ ಹೇಳಿಕೆ, ಅಕ್ರಮ, ಅನಕೃತ ಕಟ್ಟಡದ ಸುದ್ದಿ, ಪಾರ್ಕಿಂಗ್ ಸಮಸ್ಯೆ ಹೊರ ಬರುತ್ತಲೆ ಇದೆ. ಹೀಗೆ ಸಂತೆ ಸ್ಥಳಾಂತರ ವಿಚಾರ ಹಲವು ಆಯಾಮಗಳಲ್ಲಿ ಚರ್ಚೆಗೆ ವಸ್ತುವಾಯಿತೆ ಹೊರತು ತಾರ್ಕಿಕ ಅಂತ್ಯ ಕಂಡುಕೊಳ್ಳಲು ಸಫಲವಾಗಲಿಲ್ಲ.

ನಿಮ್ಮ ಚರ್ಚೆ ನಮಗೆ ಬೇಡ..!

ಭವಿಷ್ಯತ್ತಿನ ಪುತ್ತೂರಿನ ವಿಸ್ತರಣೆಗೆ ಸಂತೆ ಸ್ಥಳಾಂತರ ಕೂಡ ಒಂದು ಸಹಕಾರಿ ಎಂಬ ವಾದ, ನಗರದ ಕೇಂದ್ರ ಸ್ಥಾನದಲ್ಲಿದ್ದ ಸಂತೆಯನ್ನು ಮೂರು ಕಿ.ಮೀ.ದೂರದ ಸಾಲ್ಮರಕ್ಕೆ ಸ್ಥಳಾಂತರಿಸಿದರೆ ಗ್ರಾಹಕರು, ಸಂತೆ ವ್ಯಾಪಾರಿಗಳಿಗೆ ಸಮಸ್ಯೆ ಎಂಬ ಎರಡು ವಾದಗಳು ಇಲ್ಲಿನ ಚರ್ಚೆಗೆ ಹೆಚ್ಚು ಪ್ರಸ್ತುತ. ಆದರೆ ನಗರದ ಖಾಸಗಿ ಬಜಾರ್ನಿಂದ ಎಪಿಎಂಸಿ ಸಂತೆ ಭಣಗುಟ್ಟಿದ್ದೂ ಸತ್ಯ. ಯಾಕೆಂದರೆ ಸೆ.5 ಮತ್ತು 12 ರ ಸಂತೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಆಗಲು, ಹಬ್ಬ ಕಾರಣ ಎಂದು ವ್ಯಾಖ್ಯಾನಿಸಲಾಗಿತ್ತು. ತದನಂತರ ನಡೆದ ಎರಡು ಸಂತೆಗಳಲ್ಲೂ ಜನ ವಿರಳವಾಗಿತ್ತು. ಹಾಗಾಗಿ ನಗರದ ಖಾಸಗಿ ಸಂತೆಯ ಎಫೆಕ್ಟ್ ಎಪಿಎಂಸಿ ಸಂತೆಯಲ್ಲಿ ಬೀರಿದೆ.

See also  ಹೆಬ್ಬಾವನ್ನು ಕೊಂದ ಆರೋಪದಡಿ ಏಳು ಜನರ ಬಂಧನ

ಇಲ್ಲಿ ಜನಪ್ರತಿನಿಗಳು, ಅಧಿಕಾರಿಗಳು ಕಿಲ್ಲೆ ಸಂತೆ, ಎಪಿಎಂಸಿ ಸಂತೆ ಎಂಬ ವಾದ ಮುಂದಿಟ್ಟುಕೊಂಡು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದರೂ, ಇಲ್ಲಿ ನಿಜವಾಗಿ ಬೀದಿಗೆ ಬಿದ್ದವರು ಸಂತೆ ವ್ಯಾಪಾರಿಗಳು ಮತ್ತು ಗ್ರಾಹಕರು. ಯಾಕೆಂದರೆ ಅತ್ತ ಎಪಿಎಂಸಿಯಲ್ಲೂ ವ್ಯಾಪಾರ ಇಲ್ಲ. ಇಲ್ಲಿ ನಗರದಲ್ಲಿ ಬಾಡಿಗೆ ಕೊಟ್ಟು ವ್ಯವಹರಿಸುವ ಅನಿವಾರ್ಯತೆ. ಎರಡು ಕಡಗಳಲ್ಲಿ ನಾವು ಎಲ್ಲಿ ಹೋಗುವುದು ಎಂಬ ಗ್ರಾಹಕರ ತಿಣುಕಾಟ. ಇದರ ಮಧ್ಯೆ ಹಳ್ಳಿ ವ್ಯಾಪಾರಿಗಳಿಗೆ ಇವೆರಡೂ ಸಾಧ್ಯವಾಗದೆ, ಮನೆಯಲ್ಲಿಯೇ ಕೂರಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಯಾರೋ ಮಾಡಿದ ತಪ್ಪು..!

ನಗರದ ತರಕಾರಿ ಮಾರುಕಟ್ಟೆ ಇರುವುದು ಈಗಿನ ನಗರಸಭಾ ಕಟ್ಟಡದ ತಳಭಾಗದಲ್ಲಿ. ಈ ಹಿಂದೆ ಅಲ್ಲಿ ನಡೆಯುತ್ತಿದ್ದ ಮಾರಾಟವನ್ನು ಹೊಸ ಕಟ್ಟಡ ಕಟ್ಟುವ ನೆಪದಲ್ಲಿ ಕಿಲ್ಲೆ ಮೈದಾನಕ್ಕೆ ತರಲಾಗಿತ್ತು. ಅಲ್ಲಿಂದ ಬೀದಿಗೆ ಬಂದ ಸಂತೆ ಮತ್ತೆ ಮೂಲ ಸ್ಥಾನ ಸೇರಲೇ ಇಲ್ಲ. ಕಿಲ್ಲೆ ಮೈದಾನದ ಸಂತೆ ಅನುಕೂಲ ಎಂದು ವಾದಿಸುವ ಮುನ್ನ, ಮಳೆಗಾಲದಲ್ಲಿ ಕೆಸರುಗದ್ದೆಯಿಂದ ಅಲ್ಲಿ ಪರದಾಟ ನಡೆಸುವ ಸ್ಥಿತಿ ಕೂಡ ಗಂಭೀರವಾದುದೇ. ಒಟ್ಟು ಚೆಲ್ಲಾಪಿಲ್ಲಿಯಾದ ಸಂತೆಯಿಂದ ಸಂತೆ ವ್ಯಾಪಾರಿಗಳಿಗೆ, ಗ್ರಾಹಕರಿಗೆ ನೆಮ್ಮದಿ ಸಿಕ್ಕಿಲ್ಲ.

ಸಂತೆ ವ್ಯಾಪಾರಿಗಳಿಗಾಗಲಿ, ಗ್ರಾಹಕರಿಗಾಗಲಿ ಸಂತೆ ಎಲ್ಲಿರಬೇಕು ಎಂಬ ವಿಚಾರ ಮುಖ್ಯ ಅಲ್ಲ. ಬದಲಾಗಿ ಎಲ್ಲರೂ ಸೇರುವ ವ್ಯವಸ್ಥೆ ಬೇಕು ಅಷ್ಟೆ. ಸಂತೆಗೂ ನ್ಯಾಯ, ಗ್ರಾಹಕನಿಗೂ ನ್ಯಾಯ ಸಿಗಬೇಕು. ಜತೆಗೆ ನಗರದ ವಾಹನ ದಟ್ಟಣೆ ನಿಯಂತ್ರಣಕ್ಕೂ, ಭವಿಷ್ಯತ್ತಿನ ಪುತ್ತೂರಿನ ವಿಸ್ತರಣೆಗೂ ಅವಕಾಶ ಬೇಕು. ಅದಕೋಸ್ಕರ ವಾರವಿಡೀ ಶ್ರಮ ವಹಿಸಿ ದುಡಿದು, ದಿನವಿಡಿ ಮಾರುಕಟ್ಟೆಯಲ್ಲಿ ಕುಳಿತು ಮಾರಾಟ ಮಾಡುವ ರೈತನಿಗೆ ನ್ಯಾಯಾಲಯ, ಪೊಲೀಸ್ ಇಲಾಖೆಯ ಮೊರೆ ಹೋಗುವ ಸಾಮರ್ಥ್ಯವೂ ಇಲ್ಲ.

20 ವರ್ಷದಿಂದ ಸಂತೆ ವ್ಯಾಪಾರ ನಡೆಸುತ್ತಿದ್ದೇನೆ. ಬೇರೆ ಬೇರೆ ಜಿಲ್ಲೆ, ರಾಜ್ಯದಲ್ಲೂ ಸಂಚರಿಸಿದ್ದೇನೆ. ಈ ಹಿಂದೆ ಈಗಿನ ನಗರಸಭೆ ಕಟ್ಟಡದ ತಳ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಸಂತೆಯಲ್ಲಿ ಒಳ್ಳೆಯ ವ್ಯಾಪಾರ ಇತ್ತು. ಆ ಬಳಿಕ ಬೀದಿಗೆ ಬಂದ ಸಂತೆ ಇವತ್ತು ನೆಲೆ ಇಲ್ಲದಂತಿದೆ. ಬದುಕಿಗೆ ಆಸರೆಯೆನಿಸಿದ ವ್ಯಾಪಾರ ಕೈ ಬಿಡಬೇಕಾದ ಸ್ಥಿತಿ ನಮ್ಮದು.

ಮಹಮ್ಮದ್ ಸಂತೆ ವ್ಯಾಪಾರಿ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು