News Kannada
Saturday, October 01 2022

ಕರಾವಳಿ

ಜಾನುವಾರುಗಳ ಆಹಾರವಾಗುತ್ತಿದೆ “ಬಹುಧಾನ್ಯ ನ್ಯೂಟ್ರಿಮಿಕ್ಸ್” - 1 min read

Photo Credit :

ಜಾನುವಾರುಗಳ ಆಹಾರವಾಗುತ್ತಿದೆ

ಬಂಟ್ವಾಳ:  ಕಂದಮ್ಮಗಳ ಹೊಟ್ಟೆಗೆ ಸೇರಬೇಕಾದ ಪೌಷ್ಠಿಕ ಆಹಾರಗಳಿಲ್ಲಿ ಜಾನುವಾರುಗಳ  ಹೊಟ್ಟೆ ಸೇರುತ್ತಿದೆ. ರುಚಿ ಇಲ್ಲ, ಮಕ್ಕಳು ತಿನ್ನುವುದಿಲ್ಲ, ನಮಗದು ಬೇಡ ಎಂಬ ಪೋಷಕರ ಅಸಮಾಧಾನದ ನಡುವೆಯೂ ಅಂಗನವಾಡಿಗಳ ಮೂಲಕ ಒತ್ತಾಯದಲ್ಲಿ ಪೋಷಕರ ಕೈ ಸೇರುತ್ತಿರುವ “ಬಹುಧಾನ್ಯ ನ್ಯೂಟ್ರಿಮಿಕ್ಸ್” ಮಕ್ಕಳ ಹೊಟ್ಟೆ ಸೇರದೆ ಶೇ.70 ರಷ್ಟು ಪ್ರಮಾಣ ಜಾನುವಾರುಗಳಿಗೆ ಆಹಾರವಾಗುತ್ತಿದೆ..

Nutrimix meant for anganwadi kids becomes fodder for cattle!-1ಏನಿದು ನ್ಯೂಟ್ರಿಮಿಕ್ಸ್..
ಮಹಿಳಾ ಮತು ಮಕ್ಕಳ ಅಭಿವೃದ್ದಿ ಇಲಾಖೆ  ತನ್ನ ಅಂಗನವಾಡಿಗಳ ಮೂಲಕ ಆರು ತಿಂಗಳಿನಿಂದ 3 ವರ್ಷದವರೆಗಿನ ಮಕ್ಕಳಲ್ಲಿನ ಅಪೌಷ್ಠಿಕತೆ ದೂರಮಾಡಲು ಬಹುಧಾನ್ಯ ನ್ಯೂಟ್ರಮಿಕ್ಸ್ ಅನ್ನು ವಿತರಣೆ ಮಾಡುತ್ತಿದೆ. ನ್ಯೂಟ್ರಿಮಿಕ್ಸ್ ಬಹುಧಾನ್ಯಗಳಾದ ಹುರಿದ ಗೋಧಿ, ಹುರಿದ ಅಕ್ಕಿ, ಹುರಿದ ಹೆಸರುಕಾಳು, ಹುರಿಗಡಲೆ, ಸಕ್ಕರೆ ಮತ್ತು  ಏಲಕ್ಕಿಯ ಮಿಶ್ರಣವಾಗಿದ್ದು, ಒಂದು ಕೆ.ಜಿ. ತೂಕದ ಪ್ಯಾಕೇಟ್ ಗಳಲ್ಲಿ   ಜಿಲೆಯ  ವಿವಿಧ ಪೌಷ್ಟಿಕ ಆಹಾರ ತಯಾರಿಕಾ ಘಟಕಗಳಲ್ಲಿ ಇದನ್ನು ತಯಾರಿಸಲಾಗುತ್ತಿದೆ.ಆರು ತಿಂಗಳಿನಿಂದ 1 ವರ್ಷದವರೆಗಿನ ಮಕ್ಕಳಿಗೆ ನ್ಯೂಟ್ರಿಮಿಕ್ಸ್ ಅನ್ನು  ಮಣ್ಣಿಯ ರೂಪದಲ್ಲಿ ಹಾಗೂ 1 ರಿಂದ ಮೂರು ವರ್ಷದ ಮಕ್ಕಳಿಗೆ ಉಂಡೆಯ ರೂಪದಲ್ಲಿ  ನೀಡಬೇಕೆನ್ನುವುದು  ಇಲಾಖೆಯ ಯೋಜನೆ. ಅದರಂತೆ  ಅಂಗನವಾಡಿ ವ್ಯಾಪ್ತಿಯಲ್ಲಿ ಗುರುತಿಸಲಾದ ಮಕ್ಕಳಿಗೆ ತಿಂಗಳಿಗೆ ಮೂರು ಕಿಲೋದಂತೆ  ವಿತರಿಸಲಾಗುತ್ತಿದೆ.
ಮಿಕ್ಸ್ ಸರಿಯಿಲ್ಲ..!
 ನ್ಯೂಟ್ರಿಮಿಕ್ಸ್ ನಲ್ಲಿ ಬಳಸಲಾಗುವ  ಬಹುಧಾನ್ಯಗಳ ಮಿಕ್ಸಿಂಗ್ ನಲ್ಲಿ ಲೋಪವಿರುವುದು ಇದು ಬಾಯಿಗೆ ರುಚಿಸದಿರಲು ಕಾರಣ ಎಂದು ಕೆಲ ಅಂಗನವಾಡಿ ಕಾರ್ಯಕರ್ತೆಯರು ದೂರಿದ್ದಾರೆ. ನಿಯಮದಂತೆ ಗೋಧಿ, ಅಕ್ಕಿ, ಹೆಸರುಕಾಳು  ಹಾಗೂ ಕಡಲೆಯನ್ನು  ಹುರಿದು ಬಳಸಬೇಕು. ಆದರೆ ಈಗ ಸರಬರಾಜಾಗುತ್ತಿರುವ ನ್ಯೂಟ್ರಿಮಿಕ್ಸ್ ನಲ್ಲಿ  ಗೋಧಿ ಹಾಗೂ ಅಕ್ಕಿಯನ್ನು ನಿಗದಿತ ಪ್ರಮಾಣದಲ್ಲಿ ಹುರಿಯುತ್ತಿಲ್ಲ. ಹಸಿಹಸಿಯಾಗಿರುವುದರಿಂದ  ಆಹಾರದ ರುಚಿಯೂ ಕೆಡುತ್ತದೆ, ನಾಲ್ಕು ತಿಂಗಳು ಬಳಸಬಹುದು ಎಂದು  ಪ್ಯಾಕೇಟ್ ನಲ್ಲಿ ಉಲ್ಲೇಖವಿದ್ದರೂ,  ಹತ್ತೇ ದಿನದಲ್ಲಿ ಅದರ ಘಾಟು ಬದಲಾಗುತ್ತದೆ, ಹೀಗಾಗಿ ಅದನ್ನು ಬಳಸಲು ಪೋಷಕರು ಇಷ್ಟಪಡುತ್ತಿಲ್ಲ ಎನ್ನುತ್ತಾರೆ ಕಾರ್ಯಕರ್ತೆಯರು. ನ್ಯೂಟ್ರಿಮಿಕ್ಸ್ ನಲ್ಲಿನ ನ್ಯೂನ್ಯತೆಗಳ ಬಗ್ಗೆ ಬಿ.ಸಿ.ರೋಡಿನಲ್ಲಿ ಇತ್ತೀಚೆಗೆ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸದಸ್ಯ ಉಮೇಶ್ ಬೋಳಂತೂರು ಅವರು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯವರ ಗಮನಸೆಳೆದಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತಾಗಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.

 ನಮಗದು ಬೇಡ..
 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ  ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರ ಹಾಗೂ ಬೆಳ್ತಂಗಡಿಯ ಆಯ್ದ ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ಆಹಾರ ತಯಾರಿಕಾ ಘಟಕಗಳಲ್ಲಿ ಈ ಬಹುಧಾನ್ಯ ನ್ಯೂಟ್ರಿಮಿಕ್ಸ್ ಅನ್ನು ತಯಾರಿಸಲಾಗುತ್ತಿದೆ. ಕಳೆದ ಕೆಲವು ಸಮಯಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪೋಷಕರು ವ್ಯಕ್ತಪಡಿಸುವ ಈ ನ್ಯೂಟ್ರಿಮಿಕ್ಸ್ ನ ಕುರಿತಾಗಿ ಅಸಮಾಧಾನದ ಬಗ್ಗೆ ಇಲಾಖೆಯ ಗಮನ ಸೆಳೆಯುತ್ತಿದ್ದಾರೆ. ಮಕ್ಕಳಿಗೆ ಪೌಷ್ಠಿಕಾಂಶ ನೀಡಬೇಕೆನ್ನುವ  ಇಲಾಖೆಯಉದ್ದೇಶದಂತೆ  ನೀಡಲಾಗುವ ನ್ಯೂಟ್ರಿಮಿಕ್ಸ್ ನಲ್ಲಿ ಎಲ್ಲಾ ಬಗೆಯ ಪೌಷ್ಠಿಕಾಂಶಗಳು ಇವೆಯಾದರೂ, ಬಾಯಿಗೆ ರುಚಿಯಾಗುತ್ತಿಲ್ಲ, ಹಾಗಾಗಿ ನಮಗದು ಬೇಡ ಎನ್ನುವುದು ಪೋಷಕರ ಮಾತು.

See also  ಶಾಲೆ ಮೇಲೆ ಉರುಳಿಬಿದ್ದ ಕಂಟೈನರ್: ಅದೃಷ್ಟವಶಾತ್ ಮಕ್ಕಳು ಪಾರು

ಕೊಂಡೊಯ್ದು ದನಕ್ಕೆ ಹಾಕುತ್ತಾರೆ..!
ಇಲಾಖೆಯಿಂದ ನಮಗೆ ಕೊಡುತ್ತಾರೆ, ಅದನ್ನು ಮಕ್ಕಳಿಗಾಗಿ ಪೋಷಕರಲ್ಲಿ ಕೊಡುತ್ತೇವೆಯಾದರೂ, ಮಕ್ಕಳು ತಿನ್ನುವುದಿಲ್ಲವೆಂದು ಬೇಡ ಎನ್ನುತ್ತಾರೆ. ಆದರೂ ನಮ ಲೆಕ್ಕಕ್ಕೆ ಟ್ಯಾಲಿ ಬರಬೇಕಲ್ಲಾ, ಹಾಗಾಗಿ ದನ ಇರುವವರಿಗೆ ಒತ್ತಾಯದಲ್ಲಿ  ನೀಡುತ್ತೇವೆ, ಅವರು ದನಕ್ಕೆ ಹಾಕಿ ಖಾಲಿ ಮಾಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ರುಚಿಕರ ತಯಾರಿಯೊಂದೇ ಮದ್ದು..
ನ್ಯೂಟ್ರಿಮಿಕ್ಸ್ ಅನ್ನು ಜಿಲ್ಲೆಯ ವಿವಿಧ ಆಹಾರ ತಯಾರಿಕಾ ಘಟಕಗಳಲ್ಲಿಯೇ ತಯಾರಿಸಲಾಗುತ್ತಿದೆ. ಹೀಗಾಗಿ ಉಂಟಾಗಿರುವ ರುಚಿಯ ಲೋಪವನ್ನು ತಯಾರಿ ಘಟಕದಲ್ಲೇ ಬದಲಾಯಿಸಿಕೊಂಡರೆ ಆಗಿರುವ ಎಡವಟ್ಟನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಮಕ್ಕಳಿಗೆ ಇಷ್ಟವಾಗುವ ಹಾಗೆ ರುಚಿಯನ್ನು ನೀಡಿದರೆ, ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕೆನ್ನುವ ಸರಕಾರದ ಉದ್ದೇಶವೂ ಈಡೇರುತ್ತದೆ. ಮಕ್ಕಳ ಹೆಸರಿನಲ್ಲಿ ಆಹಾರ ಜಾನುವಾರುಗಳ ಪಾಲಾಗುವುದೂ ತಪ್ಪುತ್ತದೆ. ಯಾವುದಕ್ಕೂ ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಮನಸು ಮಾಡಬೇಕು.

ಅಂಗನವಾಡಿಗಳಿರುವುದು ಮಕ್ಕಳನ್ನು ಪೋಷಿಸುವ ಉದ್ದೇಶಕ್ಕೆ. ಅಲ್ಲಿ ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ದೊರಕಬೇಕು. ತಿನ್ನಲಾಗದ ರೀತಿಯಲ್ಲಿ ಪೌಷ್ಠಿಕ ಆಹಾರಗಳಿದ್ದರೆ ಈ ಕುರಿತು ಅಧಿಕಾರಿಗಳು ಪುನರ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
-ಬಿ.ರಮಾನಾಥ ರೈ
ಜಿಲ್ಲಾ ಉಸ್ತುವಾರಿ ಸಚಿವರು

ಮಕ್ಕಳಿಗೆ ನೀಡಲಾಗುವ ನ್ಯೂಟ್ರಿಮಿಕ್ಸ್ ಅನ್ನು ಯಾರೂ ಕೊಂಡೊಯ್ಯಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಕಾರ್ಯಕರ್ತೆಯರ  ಒತ್ತಾಯಕ್ಕೆ ಮಣಿದು ಪಡೆದುಕೊಂಡ ಆಹಾರವನ್ನು ದನ, ಮೇಕೆಗಳಿಗೆ ಹಾಕುವುದು ಸಾಮಾನ್ಯವಾಗಿದೆ.
-ಸುಲೈಮಾನ್
ಅಧ್ಯಕ್ಷರು-ಬಾಲವಿಕಾಸ ಸಮಿತಿ
ನೆಹರು ನಗರ ಅಂಗನವಾಡಿ ಕೇಂದ್ರ
ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಪೌಷ್ಠಿಕ ಆಹಾರ ತಯಾರಿಕಾ ಘಟಕವಿದೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನ್ಯೂಟ್ರಿಮಿಕ್ಸ್ ಮಕ್ಕಳು ನೇರವಾಗಿ ಸೇವಿಸುವ ಆಹಾರವಲ್ಲ. ತಾಯಂದಿರು ಅದನ್ನು  ಬೇಯಿಸಬೇಕು, ರುಚಿಗೆ ತಕ್ಕಷ್ಟು ಸಕ್ಕರೆಯನ್ನೂ ಬೆರೆಸಬಹುದಾಗಿದೆ. ಹುರಿದುದರಲ್ಲಿ ದೋಷವಿದ್ದರೆ ಸರಿಪಡಿಸುವಂತೆ ಘಟಕಗಳ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ.
– ಸುಂದರ ಪೂಜಾರಿ
ಜಿಲ್ಲಾ ಉಪನಿರ್ದೇಶಕರು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
ದ.ಕ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು