ಪುತ್ತೂರು: ಝೈಲೋ ಕಾರಲ್ಲಿ ಬಂದವರು ಒಂಟಿ ಮನೆಯಲ್ಲಿದ್ದ ಮಹಿಳೆಯರಿಬ್ಬರನ್ನು ಕೈಕಾಲು ಕಟ್ಟಿ,ಬಾಯಿಗೆ ಪ್ಲಾಸ್ಟರ್ ಸುತ್ತಿ ಮನೆ ದರೋಡೆ ನಡೆಸಿದ ಘಟನೆ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಪಟ್ಟೆ ಸಮೀಪದ ಪಾದೆಕರ್ಯ ಎಂಬಲ್ಲಿ ಮಂಗಳವಾರ ಸುಮಾರಿಗೆ ನಡೆದಿದೆ.
ಮಟಮಟ ಮಧ್ಯಾಹ್ನವೇ ಈ ಘಟನೆ ನಡೆದಿದ್ದು, ಝೈಲೋ ಕಾರಲ್ಲಿ ಬಂದ ತಂಡ ಪಾದೆಕರ್ಯ ವಿಷ್ಣು ಭಟ್ ಎಂಬವರ ಮನೆಗೆ ಬಂದು ಮನೆಯಲ್ಲಿದ್ದ ಮನೆಯೊಡತಿ ಸಾವಿತ್ರಿ(50ವ) ಹಾಗೂ ಕೆಲಸದಾಕೆ ಶ್ರೀಲತಾ ಎಂಬವರನ್ನು ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಪ್ಲಾಸ್ಟರ್ ಮತ್ತು ಬಟ್ಟೆ ಸುತ್ತಿ, ಬೆದರಿಸಿ ಮನೆಯಲ್ಲಿದ್ದ ಸುಮಾರು 50 ಸಾವಿರ ರುಪಾಯಿ ನಗದು, ಸುಮಾರು 40 ಗ್ರಾಂ( 5ಪವನ್) ಚಿನ್ನದ ದೈವ ದೇವರುಗಳ ಆಭರಣಗಳು ಹಾಗೂ ಸುಮಾರು ಅರ್ಧ ಕಿಲೋ ಗ್ರಾಂ ತೂಕದ ಬೆಳ್ಳಿಯ ವಿವಿಧ ಆಭರಣಗಳನ್ನು ಕಳವು ಮಾಡಿದ್ದಾರೆ. ಕಳವು ಮಾಡಿದ ಸೊತ್ತುಗಳ ಒಟ್ಟು ಮೌಲ್ಯ 2.5 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ವಿಷ್ಣು ಭಟ್ರವರ ಪತ್ನಿ ಸಾವಿತ್ರಿ ಭಟ್ರವರು ನೀಡಿದ ದೂರಿನಂತೆ ಸಂಪ್ಯ ಗ್ರಾಮಾಂತರ ಠಾಣಾ ಎಸ್.ಐ. ಅಬ್ದುಲ್ ಖಾದರ್ರವರು ದೂರು ದಾಖಲಿಸಿಕೊಂಡಿದ್ದಾರೆ.
ದೆಪ್ಪುಲೆ, ದೊರಿಪ್ಪುಲೆ, ಪುಡಪ್ಪುಲೆ…ತುಳು ಮಾತನಾಡುತ್ತಿದ್ದ ದರೋಡೆಕೋರರು: ದರೋಡೆಕೋರರು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಮನೆಯೊಡತಿ ಸಾವಿತ್ರಿ ಹಾಗೂ ಕೆಲಸದಾಕೆ ಶ್ರೀಲತಾ ತಿಳಿಸಿದ್ದಾರೆ. ಬಂಗಾರ್, ದುಡ್ಡು ಒಲ್ಪ ಉಂಡು ಪನ್ಲೆ ಎಂದು ತುಳುವಿನಲ್ಲಿ ಕೇಳಿದರು, ಅಲ್ಲದೆ ಕೋಣೆಯೊಳಗೆ ಅವರುಗಳೇ ತುಳುವಿನಲ್ಲಿ ಮಾತನಾಡಿಕೊಳ್ಳುತ್ತಿದ್ದದ್ದು ಕೇಳುತ್ತಿತ್ತು. ದೊರಿಪ್ಪುಲೆ, ಪುಡಪ್ಪುಲೆ, ದೆಪ್ಪುಲೆ ಎಂಬಿತ್ಯಾದಿ ಶಬ್ದಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು ಎಂದು ಸಾವಿತ್ರಿ ಭಟ್ರವರು ತಿಳಿಸಿದ್ದಾರೆ. ಪಾದೆಕರ್ಯ ವಿಷ್ಣು ಭಟ್ರವರ ತರವಾಡು ಮನೆ: ಬಡಗನ್ನೂರು ಗ್ರಾಮದ ಪಾದೆಕರ್ಯ ವಿಷ್ಣು ಭಟ್ರವರದ್ದು ಪುರಾತನ ತರವಾಡು ಮನೆಯಾಗಿದೆ. ಇವರ ಮನೆಯೊಳಗೆ ದೇವರ ಕೋಣೆಯೊಂದಿದೆ. ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಇದಾಗಿದೆ. ಪ್ರತಿದಿನ ಎರಡು ಹೊತ್ತು ಪೂಜೆ ಪುನಸ್ಕಾರ ಕೂಡ ನಡೆಯುತ್ತಿತ್ತು. ಅಲ್ಲದೆ ರಕ್ತೇಶ್ವರಿ ಸಹಿತ ಅನೇಕ ದೈವಗಳ ಸಾನ್ನಿಧ್ಯ ಕೂಡ ಇದ್ದು, ದೈವಗಳಿಗೆ ನೇಮನಡಾವಳಿ ಕೂಡ ನಡೆಯುತ್ತಿತ್ತು. ದೇವರಿಗೆ ಮತ್ತು ದೈವಗಳಿಗೆ ವಿಶೇಷ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕೂಡ ಮಾಡಿಕೊಂಡಿದ್ದರು.
ದರೋಡೆಕೋರರ ಪಾಲಾಯಿತು ದೈವ,ದೇವರ ಚಿನ್ನ, ಬೆಳ್ಳಿ ಆಭರಣಗಳು: ದರೋಡೆಕೋರರು ನೇರವಾಗಿ ದೇವರ ಕೋಣೆಗೆ ನುಗ್ಗಿದ್ದು, ದೇವರ ಕೋಣೆಯಲ್ಲಿ ಮರದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಆಭರಣಗಳಿಗೆ ಕೈಹಾಕಿದ್ದಾರೆ. ಪೆಟ್ಟಿಗೆಯನ್ನು ಒಡೆಯಲು ಕಬ್ಬಿಣದ ರಾಡ್ ಅನ್ನು ಬಳಸಲಾಗಿದೆ. ಎರಡು ಕಪಾಟುಗಳನ್ನು ಕೂಡ ತಡಕಾಡಿದ್ದಾರೆ. ಒಟ್ಟು 50 ಸಾವಿರ ನಗದು, 28 ಗ್ರಾಂ ತೂಕದ ಚಿನ್ನದಿಂದ ತಯಾರಿಸಿದ ದೇವರ ತಲೆಪಟ್ಟಿ, ಚಿನ್ನದ ಹೂ ಹಾಗೂ ಸುಮಾರು 12 ಗ್ರಾಂ.ನ ಕಿವಿಯ ಬೆಂಡೋಲೆ ಮತ್ತು 2 ಉಂಗುರಗಳು, ಇನ್ನುಳಿದಂತೆ ರಕ್ತೇಶ್ವರಿ ದೈವದ ತಲೆ ಪಟ್ಟಿ, ಕಿವಿಪಟ್ಟಿ,ಕೇದಗೆ,ಕಲಶ,ಕೊಂಬು,ಚವಲ ಇತ್ಯಾದಿ ಸುಮಾರು ಅರ್ಧ ಕಿಲೋ ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ.
ವೆನಿಲ್ಲಾ ಬಳ್ಳಿ ಕೇಳಿಕೊಂಡು ಕೆಲವರು ಬಂದಿದ್ದರು: ವಿಷ್ಣು ಭಟ್ರವರ ಮನೆ ಪಾದೆಕರ್ಯ ರಸ್ತೆ ಬದಿಯಿಂದ ದೂರವಿದ್ದು, ಇಲ್ಲಿಗೆ ಪರಿಚಯಸ್ಥರೇ ಬರಬೇಕೇ ವಿನಹ ಶುರುವಿಗೆ ಬರುವವರಿಗೆ ಅಷ್ಟು ಸುಲಭದಲ್ಲಿ ದಾರಿ ಸಿಗಲು ಸಾಧ್ಯವಿಲ್ಲ. ಕಳೆದ ಐದು ದಿನಗಳ ಹಿಂದೆ ಇದೇ ಮನೆಗೆ ಕಾರೊಂದರಲ್ಲಿ ಬಂದ 3 ಮಂದಿ ವೆನಿಲ್ಲಾ ಬಳ್ಳಿಯ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕೂಡ ಸಾವಿತ್ರಿ ಭಟ್ರವರು ಇದ್ದು, ಮಲೆಯಾಳ ಭಾಷೆಯಲ್ಲಿ ಮಾತನಾಡಿದ ಅವರುಗಳು ವೆನಿಲ್ಲಾ ಬಳ್ಳಿ ಇದೆಯಾ? ಬೇಕಿತ್ತು ಎಂದು ಕೇಳಿದ್ದಾರೆ ಎಂದು ಸಾವಿತ್ರಿ ಭಟ್ರವರು ತಿಳಿಸಿದರು. ಇದಲ್ಲದೆ 2 ವರ್ಷಗಳ ಹಿಂದೆ ಹುಲ್ಲು ಕತ್ತರಿಸುವ ಮೆಷಿನ್ ಮತ್ತು ಹಿಂಡಿ ಕಳಸುವ ಪಾತ್ರೆಯನ್ನು ಕಳವು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಣಿಯಾರು-ಕೆಯ್ಯೂರು ರಸ್ತೆಯಾಗಿ ಕಾರು ಹೋಗಿದೆ?!: ಝೈಲೋ ಕಾರು ಬಂದಿರುವುದನ್ನು ಕೌಡಿಚ್ಚಾರ್ನಲ್ಲಿ ಕೂಡ ಕೆಲವು ಮಂದಿ ಗಮನಿಸಿರುವ ಬಗ್ಗೆ ತಿಳಿದುಬಂದಿದೆ. ಕೌಡಿಚ್ಚಾರು ವೈನ್ ಶಾಪ್ ನಿಂದ ಸ್ವಲ್ಪ ಮುಂದೆ ಕಾರು ನಿಂತಿದ್ದನ್ನು ಕೆಲವರು ಗಮನಿಸಿದ್ದಾರೆ. ದರೋಡೆ ಮುಗಿಸಿ ಬಂದ ಕಾರು ನೇರವಾಗಿ ಕೌಡಿಚ್ಚಾರ್ ಗೆ ಬಂದು ಕಣಿಯಾರು-ಕೆಯ್ಯೂರು ರಸ್ತೆಯಲ್ಲಿ ಸಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಗ್ರಾ.ಪಂ ಅಧ್ಯಕ್ಷ, ತಾ.ಪಂ ಸದಸ್ಯರ ಸಹಿತ ಅನೇಕರ ಆಗಮನ: ಘಟನಾ ಸ್ಥಳಕ್ಕೆ ತಾ.ಪಂ ಸದಸ್ಯ ರಾಧಾಕೃಷ್ಣ ಬೋರ್ಕರ್, ಬಡಗನ್ನೂರು ಗ್ರಾ.ಪಂ ಅಧ್ಯಕ್ಷ ಕೇಶವ ಗೌಡ, ಸದಸ್ಯ ಗುರುಪ್ರಸಾದ್ ರೈ ಅಲ್ಲದೆ ಕೆ.ಪಿ ಸಂಜೀವ ರೈ ಪಡುಮಲೆ, ಶಿಕ್ಷಕ ದೇವಿಪ್ರಸಾದ್ ಪಡುಮಲೆ, ಅರಿಯಡ್ಕ ಗ್ರಾ.ಪಂ ಸದಸ್ಯ ರಾಜೇಶ್ ಮಣಿಯಾಣಿ ತ್ಯಾಗರಾಜೆ, ಉದಯ ಕುಮಾರ್ ಸಹಿತ ಅನೇಕರು ಭೇಟಿ ನೀಡಿದ್ದರು.
ಶ್ವಾನದಳ, ಬೆರಳಚ್ಚು, ಸಿಸಿಬಿ ತಂಡ ಆಗಮನ: ಘಟನೆ ನಡೆದ ಸ್ಥಳಕ್ಕೆ ಶ್ವಾನದಳ, ಕ್ರೈಂ ಬ್ರಾಂಚ್ ಪೊಲೀಸ್, ಬೆರಳಚ್ಚು ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನವು ಮನೆಯಿಂದ ಮುಖ್ಯರಸ್ತೆ ತನಕ ಓಡಿದ್ದು, ಬಳಿಕ ನಿಂತಿದೆ ಎಂದು ತಿಳಿದುಬಂದಿದೆ. ಬೆರಳಚ್ಚು ತಂಡದವರಿಗೆ ಬೆರಳಚ್ಚು ಸಿಕ್ಕಿದ್ದು, ಇದು ದರೋಡೆಕೋರರದ್ದೇ ಅಥವಾ ಮನೆಯವರದ್ದೇ ಎಂದು ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ. ಬೆರಳಚ್ಚು ತಂಡದ ಡಿಎಸ್ಪಿ ಗೌರೀಶ್, ಶ್ವಾನದಳದ ಪಿಸಿ ಯಮುನಪ್ಪ, ಕ್ರೈಬ್ರಾಂಚ್ ನ ಅಮಾನುಲ್ಲಾ ಮತ್ತು ತಂಡದವರು ತನಿಖೆ ನಡೆಸಿದ್ದಾರೆ. ಎಸ್.ಪಿ, ಎ.ಎಸ್ಪಿ ಆಗಮನ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ.ಬೊರಸೆ, ಅಡಿಷನಲ್ ಎಸ್ಪಿ ಡಾ.ವೇದಮೂರ್ತಿ, ಪುತ್ತೂರು ಎಎಸ್ಪಿ ರಿಷ್ಯಂತ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಸಂಪ್ಯ ಗ್ರಾಮಾಂತರ ಠಾಣಾ ಎಸ್.ಐ ಅಬ್ದುಲ್ ಖಾದರ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸಂಪ್ಯ ಗ್ರಾಮಾಂತರ ಠಾಣೆ ಮತ್ತು ಈಶ್ವರಮಂಗಲ ಹೊರಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೂರ್ವಯೋಜಿತ ಕೃತ್ಯ ಶಂಕೆ: ಪಾದೆಕರ್ಯ ವಿಷ್ಣು ಭಟ್ರವರ ಮನೆ ಇಂಟಿರಿಯಲ್ ಪ್ರದೇಶದಲ್ಲಿದ್ದು, ಒಂಟಿಮನೆಯಾಗಿದೆ. ಪಟ್ಟೆಯಿಂದ ಮುಂದಕ್ಕೆ ಮಣ್ಣಿನ ರಸ್ತೆಯಲ್ಲಿ ಇವರ ಮನೆಗೆ ಹೋಗಬೇಕಾಗಿದೆ. ಇಲ್ಲಿಗೆ ಬರಬೇಕಾದರೆ ಗೊತ್ತಿದ್ದವರೇ ಬರಬೇಕೇ ವಿನಹ ಅಪರಿಚಿತರು ಅಷ್ಟು ಸುಲಭದಲ್ಲಿ ಬರಲು ಸಾಧ್ಯವಿಲ್ಲ. ದರೋಡೆಕೋರರು ಕೂಡ ಕೃಷ್ಣ ಡಾಕ್ಟರ್ ಇದ್ದಾರಾ? ಎಂದು ಕೇಳಿದ್ದು, ವಿಷ್ಣು ಭಟ್ರವರ ಪುತ್ರ ಕೃಷ್ಣಾನಂದಾರವರು ವೆನ್ಲಾಕ್ ಆಸ್ಪತ್ರೆಯಲ್ಲಿ ಪಿ.ಆರ್.ಓ ಆಗಿ ಕರ್ತವ್ಯ ಮಾಡುತ್ತಿದ್ದಾರೆ. ಅಲ್ಲದೆ ಕೆಲವರು ಇವರನ್ನು ಡಾಕ್ಟರ್ ಎಂದೇ ಕರೆಯುತ್ತಾರೆ ಎಂಬ ಮಾಹಿತಿಯೂ ಇದೆ. ಕೃಷ್ಣ ಡಾಕ್ಟರ್ ರವರು ಇಲ್ಲ ಎಂದಾಗ ನಮಗೆ ಭಟ್ರಲ್ಲಿ ಮಾತನಾಡಲು ಇದೆ ಎಂದು ದರೋಡೆಕೋರರು ಹೇಳಿದ್ದು ಇದು ಕೂಡ ಗೊತ್ತಿದ್ದದವರೇ ಈ ಕೃತ್ಯ ನಡೆಸಿರುವುದಕ್ಕೆ ಮತ್ತಷ್ಟು ಸಾಕ್ಷಿ ನೀಡುತ್ತದೆ. ದರೋಡೆಕೋರರು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದದ್ದು ಮತ್ತು ಮನೆಯೊಡತಿ ಸಾವಿತ್ರಿ ಭಟ್ ಮತ್ತು ಕೆಲಸದಾಕೆಯ ಮೈಮೇಲಿನ ಚಿನ್ನಾಭರಣವನ್ನು ಮುಟ್ಟದಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ವಿಷ್ಣು ಭಟ್ರವರು ಹಿಂದಿನ ದಿನ ಅಡಿಕೆ ಕೂಡ ಮಾರಾಟ ಮಾಡಿ ಬಂದಿದ್ದರು ಎನ್ನುವುದು ಮತ್ತು 6.25ರಂದು ಅವರ ಮನೆಯಲ್ಲಿ ಇಲ್ಲದ ವೇಳೆಯೇ ಕೃತ್ಯ ಎಸಗಿರುವುದಕ್ಕೆ ಗಮನಿಸಿದರೆ ಇದು ಪರಿಚಿತರಿಂದಲೇ ನಡೆದ ಪೂರ್ವಯೋಜಿತ ಕೃತ್ಯ ಎಂಬುದನ್ನು ಪುಷ್ಠಿ ಕರಿಸುತ್ತದೆ ಎಂಬ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ. ಒಟ್ಟಿನಲ್ಲಿ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಈ ರೀತಿಯಲ್ಲಿ ಹಾಡಹಗಲೇ ದರೋಡೆ ನಡೆದಿರುವುದು ನಾಗರಿಕರನ್ನು ಭಯಭೀತರನ್ನಾಗಿಸಿದೆ.