News Kannada
Sunday, October 02 2022

ಕರಾವಳಿ

ಕಾಡುಹಂದಿ ಬಲೆಗೆ ಬಿದ್ದ ಚಿರತೆ - 1 min read

Photo Credit :

ಕಾಡುಹಂದಿ ಬಲೆಗೆ ಬಿದ್ದ ಚಿರತೆ

ಪುತ್ತೂರು: ಕಾಡುಹಂದಿಗೆಂದು ಇಟ್ಟ ಉರುಳಿಗೆ ಚಿರತೆಯೊಂದು ಬಿದ್ದು ಜನರಲ್ಲಿ ಆತಂಕ ಸೃಷ್ಟಿಸಿ,ಕೊನೆಯಲ್ಲಿ ಅರಣ್ಯ ಇಲಾಖೆಯವರ ಯಶಸ್ವಿ ಕಾರ್ಯಾಚರಣೆ, ಪಿಲಿಕುಳ ಮತ್ತು ನಾಗರಹೊಳೆ ಹುಣಸೂರು ರಾಷ್ಟ್ರೀಯ ಉದ್ಯಾನವನ ವೈದ್ಯರು ಮತ್ತು ಅರಿವಳಿಕಾ ತಜ್ಞರ ಸಹಕಾರದೊಂದಿಗೆ ಚಿರತೆಯನ್ನು ಸೆರೆಹಿಡಿದ ಬುಧವಾರ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಮೀಪದ ಮಾಲೆತ್ತೋಡಿ ಎಂಬಲ್ಲಿ ನಡೆದಿದೆ.

ಸುಮಾರು 7 ವರ್ಷ ಪ್ರಾಯದ, ಸಾಧಾರಣ 45 ರಿಂದ 50 ಕೆ.ಜಿ ತೂಕದ ಗಂಡು ಚಿರತೆಯಾಗಿದೆ. ಚಿರತೆಯ ಸೊಂಟಕ್ಕೆ ಉರುಳು ಸಿಕ್ಕಿಕೊಂಡಿದ್ದು ಯಾವುದೇ ಗಾಯಗಳಾಗಿರದೇ ಇರುವುದರಿಂದ ವೈದ್ಯರ ಸಲಹೆಯಂತೆ ಚಿರತೆಯನ್ನು ಚಾರ್ಮಾಡಿ ಬಿಸಿಲೆ ಘಾಟಿಗೆ ಕೊಂಡೊಯ್ಯಲಾಗಿದೆ. ಹಂದಿಗೆ ಇಟ್ಟ ಉರುಳಿಗೆ ಚಿರತೆ ಸಿಕ್ಕಿಕೊಂಡಿತು. ಮಾಲೆತ್ತೋಡಿ ಬಾಲಕೃಷ್ಣ ಕೆದಿಲಾಯ ಎಂಬವರ ತೋಟದ ಬದಿಯಲ್ಲಿ ಇಳಿಜಾರು ಪ್ರದೇಶದಲ್ಲಿ ಯಾರೋ ಕಾಡು ಹಂದಿ ಹಿಡಿಯಲೆಂದು ವಾಹನದ ಗೇರ್ ವಯರ್ ಅನ್ನು ಬಳಸಿ ಉರುಳು ಇಟ್ಟಿದ್ದರು. ಈ ಉರುಳಿಗೆ ಚಿರತೆ ಬಿದ್ದಿದ್ದು ಚಿರತೆಯ ಸೊಂಟದಲ್ಲಿ ಉರುಳು ಸಿಕ್ಕಿಕೊಂಡಿತ್ತು. ಉರುಳು ಇಟ್ಟ ಜಾಗದಿಂದ ಕೆಳಕ್ಕೆ ಸ್ವಲ್ಪ ಇಳಿಜಾರು ಇದ್ದು, ಚಿರತೆಯು ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ ಇಳಿಜಾರಿಗೆ ಬಿದ್ದರೂ ಮತ್ತೆ ಕೊಸರಿಕೊಂಡು ಮೇಲಕ್ಕೆ ಹತ್ತಿ ಗುಂಡಿಯೊಳಗೆ ಅವಿತು ಕುಳಿತಿತ್ತು. ಚಿರತೆಯ ಕುತ್ತಿಗೆಗೆ ಎಲ್ಲಾದರೂ ಉರುಳು ಸಿಕ್ಕಿಕೊಳ್ಳುತ್ತಿದ್ದರೆ ಸಾಯುವ ಸಂಭವ ಇತ್ತು. ಅದೃಷ್ಟವಶಾತ್ ಚಿರತೆ ಅಪಾಯದಿಂದ ಪಾರಾಗಿದೆ.

ತೋಟಕ್ಕೆ ನೀರು ಬಿಡಲು ಬಂದಾಗ ಚಿರತೆ ಕಂಡಿತ್ತು: ಬಾಲಕೃಷ್ಣ ಕೆದಿಲಾಯರ ಪುತ್ರ ಮಧು ಕೆದಿಲಾಯರವರು ನ.23ರಂದು ಬೆಳಿಗ್ಗೆ ತೋಟಕ್ಕೆ ನೀರು ಬಿಡಲು ಬಂದಾಗ ಅವರೊಂದಿಗೆ ಬಂದ ನಾಯಿಯು ಚಿರತೆಯನ್ನು ನೋಡಿ ಬೊಗಳಿದೆ. ಈ ವೇಳೆ ಚಿರತೆ ಘರ್ಜಿಸಿದ್ದನ್ನು ಕಂಡ ಮಧುರವರು ಚಿರತೆ ಉರುಳಿಗೆ ಬಿದ್ದಿರುವುದನ್ನು ಖಾತ್ರಿಪಡಿಸಿಕೊಂಡು ಬಂದು ತಂದೆಗೆ ವಿಷಯ ತಿಳಿಸಿದ್ದರು. ಚಿರತೆಯ ಘರ್ಜನೆಯನ್ನು ಕಂಡ ಮಧುರವರು ಇದು ಹುಲಿಯಾಗಿರಬಹುದು ಎಂದುಕೊಂಡಿದ್ದರು. ಬಾಲಕೃಷ್ಣರವರು ಕೂಡಲೇ ಕೊಳ್ತಿಗೆ ಗ್ರಾ.ಪಂ ಸದಸ್ಯ ಶಿವರಾಮ ಭಟ್ರವರಿಗೆ ವಿಷಯ ತಿಳಿಸಿದ್ದರು. ಮೊದಲಿಗೆ ಹುಲಿ ಉರುಳಿಗೆ ಬಿದ್ದಿದೆ ಎಂದೇ ಗಾಸಿಪ್ ಆಗಿತ್ತು. ಶಿವರಾಮ ಭಟ್ರವರು ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಬಿದ್ದಿರುವುದು ಕಂಡು ಬಂದಿದ್ದು ಕೂಡಲೇ ಅವರು ಅರಣ್ಯಾಕಾರಿಗಳಿಗೆ ವಿಷಯ ತಿಳಿಸಿದ್ದರು.

3 ಗಂಟೆಗಳ ಕಾರ್ಯಾಚರಣೆ/ಹುಣಸೂರು, ಪಿಲಿಕುಳದಿಂದ ವೈದ್ಯರ ಆಗಮನ:  ಚಿರತೆ ಉರುಳಿಗೆ ಬಿದ್ದದ್ದ ವಿಷಯ ತಿಳಿದು ನೂರಾರು ಮಂದಿ ಸ್ಥಳಕ್ಕೆ ಆಗಮಿಸಿದ್ದರು. ಚಿರತೆಯನ್ನು ಹಿಡಿಯಲು ಸುಮಾರು 3 ಗಂಟೆಗಳ ಕಾರ್ಯಾಚರಣೆ ನಡೆಯಿತು. ಬೆಳಿಗ್ಗೆಯಿಂದಲೇ ಅರಣ್ಯಾಕಾರಿಗಳು ಮತ್ತು ಬೆಳ್ಳಾರೆ ಅರಕ್ಷಕ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸ್ಥಳಕ್ಕೆ ಬಂದ ಪಿಲಿಕುಳ ಹುಲಿ ನಿಸರ್ಗಧಾಮದ ಡಾ. ದೀಪಿಕಾ ಮತ್ತು ಸಹಾಯಕ ದಿನೇಶ್ ರವರು ಚಿರತೆಯ ದೇಹಸ್ಥಿತಿಯನ್ನು ಅರಿತುಕೊಂಡರು. ಚಿರತೆ ಎಷ್ಟು ಭಾರ ಇರಬಹುದು ಮತ್ತು ಎಷ್ಟು ಪ್ರಾಯವಾಗಿದೆ ಹಾಗೂ ಅದಕ್ಕೆ ಎಷ್ಟು ಡೋಸ್ ಅರಿವಳಿಕೆ ಮದ್ದು ಕೊಡಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಲಾಯಿತು.

See also  ಅಮ್ಮ ಮಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ

ಹುಣಸೂರಿನ ಕರುಂಬಯ್ಯ ಅರಿವಳಿಕೆ ನೀಡಿ ಚಿರತೆಯನ್ನು ಮಲಗಿಸಿದರು: ಮಂಗಳೂರಿನ ಪಿಲಿಕುಳದ ಅರಿವಳಿಕಾ ವೈದ್ಯರು ಪರಿಶೀಲನೆ ನಡೆಸುತ್ತಿರುವಾಗಲೇ ಸ್ಥಳಕ್ಕೆ ಬಂದ ನಾಗರಹೊಳೆ ಹುಣಸೂರು ರಾಷ್ಟ್ರೀಯ ಉದ್ಯಾನವನದ ಡಾ.ಉಮಾಶಂಕರ್ರವರ ಸಹಾಯಕ, ಈಗಾಗಲೇ ಬಹಳಷ್ಟು ಆನೆಗಳನ್ನು ಅರಿವಳಿಕೆ ಮದ್ದು ನೀಡಿ ಹಿಡಿದಿರುವ ಕರುಂಬಯ್ಯರವರು ಆಗಮಿಸಿದರು. ಇವರು ಬರುವಾಗಲೇ ಗನ್ ಗೆ ಔಷಧ ತುಂಬಿಸಿಕೊಂಡೇ ಬಂದಿದ್ದರು. ಬಂದವರೇ ಚಿರತೆಯನ್ನು ನೋಡಿ ಒಂದಿಷ್ಟೂ ಭಯವಿಲ್ಲದೆ ಅದರ ಹಿಂಬದಿಗೆ ಹೋದರು. ಕರುಂಬಯ್ಯರವರನ್ನು ನೋಡಿದ ಚಿರತೆಯು ಕೋಪದಿಂದ ಎಗರಾಡಿತು ಆದರೂ ವಿಚಲಿತಗೊಳ್ಳದ ಕರುಂಬಯ್ಯರವರು ಒಂದೇ ನೋಟಕ್ಕೆ ಚಿರತೆಯ ತೊಡೆಗೆ ಅರಿವಳಿಕಾ ಔಷಯನ್ನು ಗನ್ ಮೂಲಕ ಶೂಟ್ ಮಾಡಿದರು.

ಮೂರು ಬಾರಿ ಚುಚ್ಚುಮದ್ದು ನೀಡಲಾಯಿತು: ಮಂಗಳೂರು ಪಿಲಿಕುಳದ ವೈದ್ಯರು ಚಿರತೆಯ ದೇಹ ಸ್ಥಿತಿ ನೋಡಿ ಔಷ ರೆಡಿ ಮಾಡಿದ್ದರು. ಆದರೆ ಕರುಂಬಯ್ಯರವರು ತಾವು ರೆಡಿ ಮಾಡಿಕೊಂಡೇ ಬಂದಿದ್ದ ಔಷಧಿಯನ್ನು ಶೂಟ್ ಮಾಡಿದ್ದರು. ಇದರಲ್ಲಿ ಸ್ವಲ್ಪಮಟ್ಟಿನ ಡೋಸ್ ಕಡಿಮೆ ಇದ್ದುದರಿಂದ ಸುಮಾರು 25 ನಿಮಿಷದಲ್ಲಿ ಕೋಮಾ ಸ್ಥಿತಿಗೆ ಹೋಗಬೇಕಾಗಿದ್ದ ಚಿರತೆ ಮುಕ್ಕಾಲು ಗಂಟೆ ಕಳೆದರೂ ನಿದ್ದೆಗೆ ಜಾರಲಿಲ್ಲ. ಬಳಿಕ ಚಿರತೆಗೆ ಕೈಯಿಂದಲೇ ಒಂದು ಇಂಜೆಕ್ಷನ್ ಕೊಡಲಾಯಿತು. ಆದರೂ ಕೋಮಾಕ್ಕೆ ಜಾರದೇ ಇರುವುದರಿಂದ ಮತ್ತೆ ಅರ್ಧ ಗಂಟೆ ಕಳೆದ ಬಳಿಕ ಇನ್ನೊಂದು ಇಂಜೆಕ್ಷನ್ ಮಾಡಲಾಯಿತು. ಕೊನೆಗೆ ಚಿರತೆ ನಿದ್ದೆಗೆ ಜಾರಿತು.
ಬಲೆ ಹಾಕಿ ಗೂಡಿಗೆ ಹಾಕಿ ಬಿಸಿಲೆಗೆ ರವಾನೆ: ಕೋಮಾ ಸ್ಥಿತಿಗೆ ಜಾರಿದ ಮೇಲೆ ಚಿರತೆಯನ್ನು ಸ್ಥಳೀಯರ ನೆರವಿನೊಂದಿಗೆ ಬಲೆ ಹಾಕಿ ಬಲೆಯ ಮೂಲಕ ಬೋನಿಗೆ ತುಂಬಿಸಲಾಯಿತು. ಬೋನಿಗೆ ತುಂಬಿಸಿದ ಬಳಿಕ ಅದನ್ನು ಪರೀಕ್ಷೆ ನಡೆಸಿದ ವೈದ್ಯರು ಚಿರತೆಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಅದು ಆರೋಗ್ಯದಿಂದಿದೆ ಎಂದು ವರದಿ ಕೊಟ್ಟ ಬಳಿಕ ಅದಕ್ಕೆ ಮತ್ತು ಬರುವ ಔಷಧಿಯನ್ನು ನೀಡಲಾಯಿತು. ಅರ್ಧ ಗಂಟೆ ಕಳೆದ ಬಳಿಕ ಚಿರತೆಗೆ ಮತ್ತೆ ಮತ್ತು ಬರಲಿದೆ, ಗೂಡಿಗೆ ಹಾಕಿದ ಬಳಿಕ ಪಿಕ್ಅಪ್ ವಾಹನ ಮೂಲಕ ಚಿರತೆಯನ್ನು ಚಾರ್ಮಾಡಿ ಬಿಸಿಲೆ ಘಾಟಿಗೆ ಕೊಂಡೊಯ್ಯಲಾಯಿತು.
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು