ಸುಳ್ಯ: ನಿರೀಕ್ಷೆಯನ್ನು ಹುಸಿಯಾಗಿಸಿ ಬಲು ಬೇಗನೇ ಮಾಯವಾದ ಮತ್ತು ಲೆಕ್ಕಕ್ಕಿಂತ ಕಡಿಮೆ ಸುರಿದ ಮಳೆ ಹಾಗು ಹೆಚ್ಚುತ್ತಿರುವ ಉರಿ ಧಗೆ ಕೃಷಿ ವಲಯಕ್ಕೆ ಮಾರಕವಾಗಬಹುದೆಂಬ ಆತಂಕ ಕೃಷಿಕರನ್ನು ಮತ್ತೆ ತಲ್ಲಣಗೊಳಿಸುತಿದೆ. ಅತೀ ಕಡಿಮೆ ಮಳೆ ಸುರಿದ ತಿಂಗಳು ಎಂಬ ದಾಖಲೆಯೊಂದಿಗೆ ಅಕ್ಟೋಬರ್ ಮತ್ತು ನವೆಂಬರ್ ಸರಿದು ಹೋಗುತ್ತಿದ್ದರೆ ಮಳೆಯಿಲ್ಲದೆ ಬಿಸಿಲ ಧಗೆಗೆ ಇಳೆ ಒಣಗುತಿದೆ. ನೀರಿನ ಮೂಲಗಳು ನಿಧಾನವಾಗಿ ಬತ್ತುತ್ತಿರುವುದು ಮತ್ತು ಕೃಷಿ ಬಾಡುತ್ತಿರುವುದು ಕೃಷಿಕರನ್ನು ಆತಂಕಕ್ಕೆ ತಳ್ಳಿದೆ.
ಇದರಿಂದ ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಎರಡು ತಿಂಗಳ ಮೊದಲೇ ಅಡಕೆ ತೋಟ ಮತ್ತು ಇತರ ಕೃಷಿಗೆ ನೀರುಣಿಸಲು ಪ್ರಾರಂಭಿಸಬೇಕಾಗಿ ಬಂದಿದೆ. ಸಾಮಾನ್ಯವಾಗಿ ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿ ಮಧ್ಯದಲ್ಲಿ ಅಡಕೆ ತೋಟಗಳಿಗೆ ನೀರು ಹಾಯಿಸಲು ಪ್ರಾರಂಭಿಸಲಾಗುತ್ತದೆ. ಆದರೆ ಮಳೆ ಮರೆಯಾಗಿ ತಿಂಗಳುಗಳೇ ಕಳೆದ ಕಾರಣ ಅಕ್ಟೋಬರ್ ತಿಂಗಳ ಕೊನೆಯಿಂದಲೇ ತೋಟಕ್ಕೆ ನೀರುಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಉಷ್ಣಾಂಶದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಕಾಸರಗೋಡು ಜಿಲ್ಲೆಯ ಗ್ರಾಮೀಣ ಭಾಗದ ಕೃಷಿಕರು ಇದೀಗ ದಿನಂಪ್ರತಿ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಅಡಕೆ, ತೆಂಗು ಮತ್ತಿತರ ತೋಟಗಾರಿಕಾ ಬೆಳೆ ಮಾತ್ರವಲ್ಲದೆ ಮಳೆಯ ಕೊರತೆಯ ಬಿಸಿ ಭತ್ತದ ಕೃಷಿಕರಿಗೂ ತಟ್ಟಿದೆ. ಹಲವು ಕಡೆಗಳಲ್ಲಿ ಮಳೆ ಇಲ್ಲದೆ ಭತ್ತದ ಗದ್ದೆಗಳು ಒಣಗಿ ಹೋಗಿರುವುದಾಗಿ ಕೃಷಿಕರು ಹೇಳುತ್ತಾರೆ. ಕೆಲವು ಕಡೆಗಳಲ್ಲಿ ಬೇರೆಡೆಯಿಂದ ನೀರನ್ನು ಪಂಪ್ ಮಾಡಿ ಗದ್ದೆಗಳಿಗೆ ಹಾಕಿ ಭತ್ತದ ಪೈರನ್ನು ರಕ್ಷಿಸಿದ ಪ್ರಸಂಗವೂ ಉಂಟಾಗಿತ್ತು.
ಬತ್ತುತ್ತಿರುವ ನೀರಿನ ಮೂಲಗಳು:
ಮಳೆ ಇಲ್ಲದೆ ತಿಂಗಳುಗಳೇ ಕಳೆದ ಕಾರಣ ನದಿ, ಹಳ್ಳ, ಕೊಳ್ಳ, ಬಾವಿ, ಕೆರೆಗಳು ಬತ್ತಲು ಆರಂಭಿಸಿದೆ. ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿಯದೇ ಆಗೊಮ್ಮೆ ಈಗೊಮ್ಮೆ ಮಳೆ ಸುರಿದ ಕಾರಣ ಹೊಸ ಒರತೆಗಳು ಎದ್ದು ಪಸಂದಾಗಿ ನೀರು ಹರಿದಿಲ್ಲ. ನದಿ ಹಳ್ಳ ಕೊಳ್ಳಗಳಲ್ಲಿ ಇದ್ದಂತಹ ನೀರು ಸ್ವಲ್ಪ ಹೆಚ್ಚಾಗಿ ಹರಿದದ್ದು ಬಿಟ್ಟರೆ ತುಂಬಿ ತುಳುಕಿ ಭೋರ್ಗರೆದು ಹರಿಯಲೇ ಇಲ್ಲ. ಪಯಸ್ವಿನಿ ನದಿ ಸೇರಿದಂತೆ ಎಲ್ಲೆಡೆ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತಿದೆ. ಸಾಮಾನ್ಯವಾಗಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕಂಡು ಬರುತ್ತಿದ್ದ ನೀರಿನ ಪ್ರಮಾಣದಷ್ಟು ಮಾತ್ರ ಈಗ ಪಯಸ್ವಿನಿ ನದಿಯಲ್ಲಿ ಹರಿಯುತಿದೆ. ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಲು ಆರಂಭಿಸಿರುವುದಾಗಿ ಜನರು ಆತಂಕ ತೋಡಿ ಕೊಳ್ಳುತ್ತಿದ್ದಾರೆ.
ಶೇ.25 ಮಳೆ ಕಡಿಮೆ:
ಈ ವರ್ಷ ಎಲ್ಲೆಡೆ ಮಳೆಯ ಪ್ರಮಾಣದಲ್ಲಿ ತೀವ್ರ ಇಳಿಮುಖ ಉಂಟಾಗಿದೆ. ಸುಳ್ಯ ತಾಲೂಕಿನಲ್ಲಿ ಮಾತ್ರ ಶೇ.25ಕ್ಕಿಂತಲೂ ಹೆಚ್ಚು ಮಳೆ ಕಡಿಮೆಯಾಗಿದೆ. 4490 ಮಿ.ಮಿ. ಸರಾಸರಿ ಮಳೆ ಸುರಿಯುತ್ತಿದ್ದ ಮಲೆ ನಾಡಾದ ಸುಳ್ಯದಲ್ಲಿ ಈ ಬಾರಿ ಸುರಿದ ಮಳೆ 3500 ಮಿ.ಮಿ.ಗಿಂತಲೂ ಕಡಿಮೆ. ನೀರಿನ ಲಭ್ಯತೆ ಕೊನೆಯವರೆಗೂ ಉಳಿಸಲು ಸಹಾಯಕವಾಗುತ್ತಿದ್ದ ಹಿಂಗಾರು ಮಳೆ ಈ ಬಾರಿ ಈ ಇತ್ತ ಸುಳಿಯಲೇ ಇಲ್ಲ. ಅತೀ ಕನಿಷ್ಠ ಮಳೆಯಾದ ಅಕ್ಟೋಬರ್ ತಿಂಗಳು ಎಂದು ಈ ವರ್ಷ ದಾಖಲೆ ಬರೆದಿದೆ. ಅಕ್ಟೋಬರ್ ತಿಂಗಳಲ್ಲಿ ಸರಾಸರಿ 362 ಮಿ.ಮಿ. ಮಳೆಯಾಗುತ್ತಿದ್ದ ಪ್ರದೇಶದಲ್ಲಿ ಈ ಬಾರಿ ಸುರಿದ ಮಳೆ 50.ಮಿ.ಮಿ.ಗಿಂತಲೂ ಕಡಿಮೆ. 1988ರಲ್ಲಿ 119 ಮಿ.ಮಿ.ಮಳೆಯಾಗಿದ್ದದು ಈ ಹಿಂದಿನ ಕನಿಷ್ಠ ಮಳೆಯ ದಾಖಲೆಯಾಗಿತ್ತು. 1999ರಲ್ಲಿ 955 ಮಿ.ಮಿ.ಮಳೆ ಸುರಿದಿರುವುದು ಅಕ್ಟೋಬರ್ ತಿಂಗಳ ಗರಿಷ್ಠ ದಾಖಲೆಯಾಗಿದೆ. ನವೆಂಬರ್ ತಿಂಗಳಲ್ಲೂ ಪ್ರತಿ ವರ್ಷ 100 ಮಿ.ಮಿ.ಗಿಂತಲೂ ಹೆಚ್ಚು ಮಳೆ ಸುರಿಯುತ್ತಿದ್ದರೂ ಈ ವರ್ಷ ಮಾತ್ರ ನವೆಂಬರ್ ಮಳೆಯೂ ನಾಪತ್ತೆಯಾಗಿದೆ.
ಬರಗಾಲದ ಕರಿ ನೆರಳು:
ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ ಕಳೆದ ಬೇಸಿಗೆಯಲ್ಲಿ ಈ ಭಾಗದಲ್ಲಿ ಭೀಕರ ಬರಗಾಲವೇ ಅಪ್ಪಳಿಸಿತ್ತು. ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು ಜೊತೆಗೆ ಹಲವಾರು ಎಕ್ರೆ ಅಡಕೆ ತೋಟಗಳು ಬಿಸಿಲ ಕೆನ್ನಾಲಿಗೆಗೆ ತುತ್ತಾಗಿ ಒಣಗಿ ಕರಟಿ ಹೋಗಿತ್ತು. ಇದು ಈ ಬಾರಿಯ ಅಡಕೆಯ ಫಸಲಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು. ಮಳೆಯ ಪ್ರಮಾಣ ತೀವ್ರ ಕಡಿಮೆಯಾಗಿರುವುದರಿಂದ ಮುಂದಿನ ಬೇಸಿಗೆಯಲ್ಲಿ ಮತ್ತೆ ಭೀಕರ ಬರಗಾಲ ಅಪ್ಪಳಿಸುವ ಭೀತಿ ಎದುರಾಗಿದೆ. ಆದುದರಿಂದ ಮುಂದೆ ಎದುರಾಗಬಹುದಾದ ಬರಗಾಲದ ಹೊಡೆತವನ್ನು ಎದುರಿಸಲು ನೀರಿನ ಮಿತವ್ಯಯ ವೊಂದೇ ದಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
“ಈ ವರ್ಷ ಮಳೆಯ ಪ್ರಮಾಣದ ಸರಾಸರಿಗಿಂತ ತುಂಬಾ ಕಡಿಮೆಯಾಗಿತ್ತು. ಮಳೆಯ ಕೊರತೆ ಮತ್ತು ಏರುತ್ತಿರುವ ಉಷ್ಣಾಂಶದಿಂದಾಗಿ ಈಗಾಗಲೇ ನೀರಿನ ಅಭಾವ ತಲೆದೋರಿದೆ. ಕೃಷಿಕರು ಸಾಕಷ್ಟು ಮುಂಚೆಯೇ ತೋಟಕ್ಕೆ ನೀರನ್ನು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಡಿಸೆಂಬರ್ ತಿಂಗಳಲ್ಲಿ ಮಳೆ ಬಾರದಿದ್ದರೆ ಬರಗಾಲ ಅಪ್ಪಳಿಸುವ ಭೀತಿ ಎದುರಾಗಿದೆ”
-ಪಿಜಿಎಸ್ಎನ್ ಪ್ರಸಾದ್
ಕೃಷಿಕ. ಬಾಳಿಲ
“ಮಳೆ ಕಡಿಮೆಯಾಗಿರುವುದರಿಂದ ಭತ್ತದ ಕೃಷಿಗೆ ದೊಡ್ಡ ಹೊಡೆತ ಉಂಟಾಗಿದೆ. ಹಲವು ಕಡೆಯಲ್ಲಿ ಗದ್ದೆಗಳು ಒಣಗಿ ಕರಟಿ ಹೋಗಿದೆ. ಕೆಲವೆಡೆ ನೀರನ್ನು ಪಂಪ್ ಮಾಡಿ ಗದ್ದೆಗಳಿಗೆ ಹಾಯಿಸಿ ಭತ್ತದ ಪೈರನ್ನು ರಕ್ಷಿಸಲಾಗಿತ್ತು”
-ನವೀನ್ ಕುಮಾರ್ ಮೇನಾಲ
ಜಿ.ಪಂ.ಮಾಜಿ ಸದಸ್ಯ