ಬೆಳ್ತಂಗಡಿ: ಜನಪ್ರಿಯತೆಯ ವ್ಯಾಮೋಹದಿಂದಾಗಿ ಕಾವ್ಯ ಸಾಹಿತ್ಯದಲ್ಲಿ ಮೌಲ್ಯಗಳು ಮಾಯವಾಗುತ್ತಿವೆ. ಅಕ್ಷರದ ಸೊಬಗನ್ನು ಸಾಹಿತ್ಯಕ್ಕೆ ತರುವುದೇ ಕವಿಯ ಕೆಲಸ ಎಂದು ಕವಿ, ಕಾದಂಬರಿಗರ ಎಂ.ಎನ್. ವ್ಯಾಸರಾವ್ ಹೇಳಿದರು.
ಸೋಮವಾರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭ ನಡೆದ 84 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ಸಾಹಿತ್ಯ ಎಂಬುದು ಜನಜೀವನಕ್ಕೆ ಹತ್ತಿರವಿರುವಂತಹದು. ಕವಿಗೆ ಆತ್ಮ ವಿಶ್ವಾಸ, ಅನುಭವ ಮುಖ್ಯ. ಲೋಕಾನುಭವವನ್ನು ಕಾವ್ಯಾನುಭವವನ್ನಾಗಿ ಅಭಿವ್ಯಕ್ತಿಸುವ ಶಕ್ತಿಯನ್ನು ಕವಿ ಹೊಂದಿರುತ್ತಾನೆ. ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದಿರುವ ಹಲವಾರು ಸೇವಾ ಚಟುವಟಿಕೆಗಳು ಕಾವ್ಯ, ಸಾಹಿತ್ಯಕ್ಕೆ ಪ್ರೇರಣೆ ನೀಡಬಲ್ಲುದು. ಇಲ್ಲಿನ ಕಾರ್ಯಗಳು ಹೊಸತನದ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾವೆ ಎಂದರು.
ಇಂದು ಸಾಹಿತ್ಯದ ಮಟ್ಟ, ಭಾಷಾ ಪ್ರಯೋಗ ಎತ್ತ ಸಾಗಿದೆ ಎಂಬುದನ್ನು ಚಿಂತಿಸುವ ಅಗತ್ಯವಿದೆ. ಗದ್ಯವನ್ನು ತುಂಡಾಗಿಸಿ, ಕೆಟ್ಟ ಪದ್ಯಗಳನ್ನು ಸ್ವಂತ ಅಥವಾ ಸ್ನೇಹಿತರ ಹಣವನ್ನು ಉಪಯೋಗಿಸಿ ಅದನ್ನು ಪ್ರಕಾಶಿಸಿಸುವ ಪ್ರವೃತ್ತಿಯಿಂದಾಗಿ ಕವಿತ್ವ ನಾಶವಾಗಿದೆ. ತಾಲೀಮಿಲ್ಲದ, ಸ್ವಗತದಂತಿರುವ ಸಂಭಾಷಣೆಯಿಂದಾಗಿ ಮತ್ತು ಅತಿ ಶೀಘ್ರ ಜನಪ್ರಿಯತೆಯ ಮೋಹದಿಂದಾಗಿ ಮೌಲ್ಯ ಮಾಯವಾಗುತ್ತಿದೆ. ಹೀಗಾಗಿ ಕಾವ್ಯ, ಸಾಹಿತ್ಯ, ನಾಟಕ ಕ್ಷೇತ್ರ ಮತ್ತೆ ಮೌಲ್ಯಾಧಾರಿತದ ಹಂತಕ್ಕೆ ಮುಟ್ಟಬೇಕು ಎಂದು ಅವರು ಅಭಿಪ್ರಾಯಪಟ್ಟರು. ದ.ಕ. ಉಡುಪಿ ಜಿಲ್ಲೆಯಲ್ಲಿ ಹುಟ್ಟಿದ ಕವಿ, ಸಾಹಿತ್ಯಕಾರರ ಹೆಸರುಗಳನ್ನು ಉಲ್ಲೆಖಿಸಿದ ವ್ಯಾಸ ರಾವ್ ಅವರು, ಇಲ್ಲಿನವರ ಸಾಹಿತ್ಯ ಕೊಡಗೆ ಅಪಾರ. ಕನ್ನಡ ಮಾತ್ರವಲ್ಲದೆ ತುಳು ಭಾಷೆಯ ಬೆಳವಣಿಗೆಯಲ್ಲೂ ಮುಖ್ಯ ಪಾತ್ರ ವಹಿಸಿದ್ದಾರೆ. ಹೀಗಾಗಿ ಇಲ್ಲಿನ ಕವಿಗಳು, ಸಾಹಿತಿಗಳು ಕರ್ನಾಟಕದ ಮುಖವಾಗಿದ್ದಾರೆ ಎಂದ ಅವರು, ಹೊರನಾಡಿನಲ್ಲಿರುವ ಇಲ್ಲಿನ ಕನ್ನಡಿಗರು ತಮ್ಮ ಮಕ್ಕಳಿಗೆ ತುಳು, ಬ್ಯಾರಿ, ಕೊಂಕಣಿ ಇತ್ಯಾದಿ ಮಾತೃಭಾಷೆಯ ಜೊತೆಗೆ ಕನ್ನಡದ ಅರಿವನ್ನೂ ಉಂಟು ಮಾಡಬೇಕು ಎಂದು ಸಲಹೆಯಿತ್ತರು.
ಸಮ್ಮೇಳನವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರು, ಇಂಗ್ಲೀಷ್ನ ಅಬ್ಬರದ ದಾಳಿಯಲ್ಲಿ ಕನ್ನಡ, ಭಾಷೆ, ಸಂಸ್ಕೃತಿ ಅನೂಚಾನವಾಗಿ ಬೆಳೆದು ಬರಲು ಮುಖ್ಯ ಕಾರಣ ಧರ್ಮಸ್ಥಳ ಕ್ಷೇತ್ರದ ಸಾಂಸ್ಕೃತಿಕ ಸಾಹಿತ್ಯ ಚಟುವಟಿಕೆಗಳು. ಇಲ್ಲಿನ ಸಾಹಿತ್ಯ ಪರಿಚಾರಿಕೆ ಶ್ಲಾಘನೀಯವಾದುದು. ಅಳಿವಿನಂಚಿಗೆ ಜಾರುತ್ತಿರುವ ರಾಜ್ಯದ ಮೂಲ ಕಲೆಗಳನ್ನು, ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳಿಸುವ ಕಾರ್ಯ ಇಂತಹ ಕ್ಷೇತ್ರಗಳದ್ದು, ಕಸಾಪದ್ದು ಹಾಗು ಸರಕಾರದ್ದಾಗಿದೆ. ಕ್ಷೇತ್ರವು ಸರ್ವ ಸಂಸ್ಕೃತಿಯ ಸಮ್ಮಿಳನವಾಗಿದೆ ಎಂದು ಶ್ಲಾಘಿಸಿದರು.
ಬದುಕು ಸಾಹಿತ್ಯಕ್ಕಿಂತಲೂ ದೊಡ್ಡದು. ಇಂದು ಜೀವನ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸವರಿರುವ ಅನೇಕ ಸಾಹಿತಿಗಳಿದ್ದಾರೆ. ಸಾಹಿತಿಯಾದವನಿಗೆ ಸಾಮಾಜಿಕ ಜವಾಬ್ದಾರಿ ಅವಶ್ಯಕವಾಗಿದೆ. ಪಂಪ, ಬಸವಣ್ಣನವರು ಇದಕ್ಕೆ ನಿದರ್ಶನರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಸಮನ್ವಯತೆಯನ್ನು ಅರ್ಥ ಮಾಡಿಕೊಂಡು ಸಾಹಿತಿಗಳು ಸಮಾಜ ವಿಚ್ಛಿದ್ರವಾಗದೆ ಇರುವಂತೆ ನೋಡಿಕೊಳ್ಳಬೇಕು. ಧರ್ಮಸ್ಥಳದ ನೂರಾರು ಸೇವೆಗಳಿಂದ ಸ್ಪೂರ್ತಿ ಪಡೆದರೆ ಫಲಕಾರಿಯಾದ ಸಾಹಿತ್ಯ ಉಗಮವಾಗಲು ಸಾಧ್ಯ ಎಂದ ಅವರು ಕರಾವಳಿಯ ಜನತೆ ತುಳು, ಕನ್ನಡ ಎರಡೂ ಮಾತೃಭಾಷೆಗಳಾಗಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಅಭಿನಂದಿಸಿದರು.
ಸ್ವಾಗತಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು, ಸಾಹಿತ್ಯಾಭಿರುಚಿ ಮೂಡಬೇಕಾದರೆ ಸಾಹಿತಿಗಳ ಹಾಗೂ ಅವರ ಸಾಹಿತ್ಯದ ಪರಿಚಯ ಜನಸಾಮಾನ್ಯರಿಗೆ ಮಾಡುವುದು ಮುಖ್ಯವಾಗುತ್ತದೆ. ಹಿತದಿಂದ ಕೂಡಿದ ವ್ಯಕ್ತಿಗೆ ಹಾಗು ಸಮಾಜಕ್ಕೆ ಹಿತವನ್ನುಂಟು ಮಾಡುವ ಸಾಹಿತ್ಯಕ್ಕೆ ಸಾರ್ವತ್ರಿಕವಾದ ಬೆಂಬಲ ಅತ್ಯಾವಶ್ಯಕವಾಗಿದೆ. ಇಂದು ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಮಾತೃಭಾಷೆಯಾದ ಕನ್ನಡವು ಬಹುಮತ್ವದ ಪಾತ್ರವನ್ನು ವಹಿಸುತ್ತದೆ. ಮಾತೃಭಾಷಾ ಪ್ರೇಮ ನಮ್ಮ ಮನೆಗಳಲ್ಲಿ, ಸಾಮಾಜಿಕ ಸಂಘಟನೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವತ್ರಿಕವಾಗಿ ಬೆಳೆಯಬೇಕಾಗಿದೆ. ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸಬಲ್ಲ ಉತ್ತಮ ಸಾಹಿತಿಗಳು ಹಾಗೂ ಉತ್ತಮ ಕೃತಿಗಳನ್ನು ಓದಿ ಆಸ್ವಾದಿಸಬಲ್ಲ ಸಾಹಿತ್ಯ ಪ್ರೇಮಿಗಳ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಸಮಾರಂಭದಲ್ಲಿ ವ್ಯಾಸರಾವ್ ರಚಿಸಿದ ನೀನಿಲ್ಲದೆ ನನಗೇನಿದೆ ಎಂಬ ಭಾವಗೀತೆಯನ್ನು ಅನನ್ಯಾ ಭಟ್ ಹಾಡಿದರೆ, ಸೂರ್ಯಂಗೂ ಚಂದ್ರಂಗೂ ಎಂಬ ಚಲನಚಿತ್ರ ಗೀತೆಯನ್ನು ಸುಬ್ರಹ್ಮಣ್ಯ ಭಟ್ ಉಜಿರೆ ಹಾಡಿ ಸಭೆಯ ಅಂದವನ್ನು ಹೆಚ್ಚಿಸಿದರು. ಸಾಹಿತಿ ವಸುಧೇಂದ್ರ, ಸ್ತ್ರೀ ರೋಗ ತಜ್ಞೆ ಡಾ.ವೀಣಾ ಸುಳ್ಯ ಹಾಗೂ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಸಾಹಿತ್ಯಕ್ಕೆ ಸಂಬಂಧಪಟ್ಟ ಉಪನ್ಯಾಸವನ್ನು ನೀಡಿದರು. ಉದ್ಘಾಟಕರ ಸನ್ಮಾನ ಪತ್ರವನ್ನು ಜಿತೇಶ್, ಅಧ್ಯಕ್ಷರ ಸನ್ಮಾನ ಪತ್ರವನ್ನು ಡಿ. ಶ್ರೇಯಸ್ ಕುಮಾರ್ ವಾಚಿಸಿದರು. ಉಪನ್ಯಾಸಕರನ್ನು ಡಿ. ಹರ್ಷೇಂದ್ರ ಕುಮಾರ್ ಸನ್ಮಾನಿಸಿದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಕಾರ್ಕಳ ಪ್ರೋ. ಎಂ. ರಾಮಚಂದ್ರ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಮಂಜುನಾಥ ಸ್ವಾಮಿಯ ದೀಪೋತ್ಸವದ ಕೊನೆಯ ದಿನವಾದ ಸೋಮವಾರ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಸಂಭ್ರಮದಲ್ಲಿ ಪಾಲ್ಗೊಂಡರು. 1600 ವಾಲಗ, 20 ಬ್ಯಾಂಡ್ ಸೆಟ್, ಶಂಕ, ಡೊಳ್ಳು, ಕರಡಿ, ವೀರಗಾಸೆ ಹೀಗೆ 2345 ವಿವಿದ ಕಲಾವಿದರು ತಮ್ಮ ಸೇವೆಯನ್ನು ಸಲ್ಲಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮನಸೂರೆಗೊಳಿಸಿದವು. ಕ್ಷೇತ್ರದಲ್ಲಿ ದೀಪೋತ್ಸವದ ಕೊನೆಯ ದಿನ ಭೋಜನ ಪ್ರಸಾದ ಸೇವೆಗೆ ವಿರಾಮವಿರುವುದರಿಂದ ಬೆಂಗಳೂರಿನ ಸುಮಾರು 20 ತಂಡಗಳು ಸುಮಾರು 1 ಲಕ್ಷ ಜನರಿಗೆ ಸಾಕಾಗಾವುಷ್ಟು ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಸುಮಾರು 3000 ಕ್ವಿಂ. ಅಕ್ಕಿ, ತರಕಾರಿ, ವಸ್ತುಗಳನ್ನು ತಂದು ಏರ್ಪಾಡು ಮಾಡಿದ್ದರು. ಹೂವಿನ ಅಲಂಕಾರಗಳನ್ನೂ ಮಾಡಿದ್ದರು.
ಇನ್ನು ಕೆಲವೇ ದಿನಗಳಲ್ಲಿ ರಾಯಚೂರಿನಲ್ಲಿ 82 ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅಲ್ಲಿ ಊಟೋಪಚಾರ ಇತ್ಯಾದಿಗಳನ್ನು ಶಿಸ್ತು ಬದ್ಧವಾಗಿ ಹೇಗೆ ನಿರ್ವಹಿಸುವುದು ಎಂಬುದನ್ನು ಕಲಿತುಕೊಳ್ಳಲೂ ನಾನು ಧರ್ಮಸ್ಥಳಕ್ಕೆ ಬಂದಿದ್ದೇನೆ- ಮನು ಬಳಿಗಾರ್
ಉತ್ತಮ ಸಾಹಿತ್ಯವನ್ನು ರಚಿಸುವ ಲೇಖಕರನ್ನು, ಅಂಥ ಸಾಹಿತ್ಯವನ್ನು ಪ್ರಕಟಿಸುವ ಪ್ರಕಾಶಕರನ್ನು, ಬೆಂಬಲಿಸುವ ಓದುಗರನ್ನೂ ನಮ್ಮ ನಾಡು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ- ಡಾ. ಹೆಗ್ಗಡೆ