ಸುಳ್ಯ: ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವಿತರಿಸುವ ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾಗುತ್ತಿರುವ ಪ್ರಸಂಗ ಗ್ರಾಹಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಠಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾದ ಉಪ್ಪಿನ ಪ್ಯಾಕೆಟ್ ನಲ್ಲಿ ಬರುವ ಉಪ್ಪನ್ನು ಬಳಸಿದಾಗ ಆಹಾರದ ಬಣ್ಣದ ಬದಲಾವಣೆಯ ಪ್ರಸಂಗ ಉಂಟಾಗಿದೆ. ದ್ವಿಗುಣ ಬಲವರ್ಧಿತ ಕಬ್ಬಿಣಾಂಶಯುಕ್ತ ಅಯೋಡಿನ್ಯುಕ್ತ ಉಪ್ಪನ್ನು ಬಳಸಿದಾಗ ಆಹಾರ ವಸ್ತುಗಳ ಬಣ್ಣ ಕೆಲವೇ ಕ್ಷಣದಲ್ಲಿ ನೀಲಿ ಬಣ್ಣಕ್ಕೆ ತಿರುಗುತಿದೆ. ಸುಳ್ಯ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಅಜ್ಜಾವರ ಶಾಖೆಯ ನ್ಯಾಯ ಬೆಲೆ ಅಂಗಡಿಯಿಂದ ಉಪ್ಪಿನ ಪೊಟ್ಟಣ ಖರೀದಿಸಿದ್ದ.
ಗೋಪಾಲ ಮೇನಾಲ ಅವರ ಮನೆಯಲ್ಲಿ ಸೋಮವಾರ ಬೆಳಿಗ್ಗೆ ಹಿಟ್ಟಿನ ಅಕ್ಕಿ ಕಡೆದು ಅದಕ್ಕೆ ಉಪ್ಪು ಹಾಕಿದಾಗ ಅದು ನಿಲಿ ಬಣ್ಣಕ್ಕೆ ತಿರುಗಿತು. ಇದರಿಂದ ಆತಂಕಗೊಂಡ ಅವರು ಉಪ್ಪಿನ ಪೊಟ್ಟಣವನ್ನು ಸಿಎ ಬ್ಯಾಂಕಿನ ನ್ಯಾಯ ಬೆಲೆ ಅಂಗಡಿಗೆ ತಂದರು. ಅಲ್ಲಿಯೂ ಅಕ್ಕಿ ಹುಡಿಗೆ ಉಪ್ಪನ್ನು ಹಾಕಿ ಪರೀಕ್ಷಿಸಿದಾಗ ಅದು ನಿಲಿ ಬಣ್ಣಕ್ಕೆ ತಿರುಗಿತು. ಕಂದು ಬಣ್ಣದ ಪ್ಯಾಕೆಟ್ನಲ್ಲಿ ಬಂದ ದ್ವಿಗುಣ ಬಲವರ್ಧಿತ ಕಬ್ಬಿಣಾಂಶದ ಉಪ್ಪು ಬಣ್ಣ ಬದಲಾವಣೆಯ ಆತಂಕ ಸೃಷ್ಠಿಸಿದೆ.
ಈ ವಿಚಾರವನ್ನು ಸಿಎ ಬ್ಯಾಂಕ್ ನ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಅವರು ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಸುಳ್ಯದ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸೂಚನೆ ಬರುವವರೆಗೆ ನ್ಯಾಯ ಬೆಲೆ ಅಂಗಡಿಯಲ್ಲಿರುವ ಉಪ್ಪಿನ ಪೊಟ್ಟಣವನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಸಿಎ ಬ್ಯಾಂಕ್ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ.
ಬಣ್ಣ ಬದಲಾಗುವುದಾಗಿ ಪೊಟ್ಟಣದಲ್ಲಿಯೇ ಸೂಚನೆ:
ದ್ವಿಗುಣ ಬಲವರ್ಧಿತ ಕಬ್ಬಿಣ ಮತ್ತು ಅಯೋಡಿನ್ ಯುಕ್ತ ಉಪ್ಪನ್ನು ಉಪಯೋಗಿಸುವಾಗ ಕೆಲವು ಪ್ರಕರಣದಲ್ಲಿ ಸಿದ್ಧಪಡಿಸಿದ ಆಹಾರ ಕಂದು ಬಣ್ಣಕ್ಕೆ ಬದಲಾಗಬಹುದು. ಆದರೆ ಆಹಾರ ಸುರಕ್ಷಿತವಾಗಿರುತ್ತದೆ. ಆಹಾರವನ್ನು ಪೂರ್ಣ ಸಿದ್ಧಪಡಿಸಿದ ಕೊನೆಯಲ್ಲಿ ಉಪ್ಪು ಸೇರಿಸಿದರೆ ಕಂದು ಬಣ್ಣವಾಗುವುದನ್ನು ಕಡಿಮೆ ಮಾಡಬಹುದು ಎಂಬ ಸೂಚನೆಯನ್ನು ಉಪ್ಪಿನ ಪೊಟ್ಟಣದಲ್ಲಿಯೇ ನೀಡಲಾಗಿದದೆ. ಆದರೆ ಕಂದು ಬಣ್ಣಕ್ಕೆ ಅಲ್ಲ ಬದಲಾಗಿ ನೀಲಿ ಬಣ್ಣಕ್ಕೆ ತಿರುಗುವುದಾಗಿ ಗ್ರಾಹಕರು ಹೇಳುತ್ತಿದ್ದಾರೆ.