ಮೂಡುಬಿದಿರೆ: ಸೂಕ್ಷ್ಮವಾಗಿ ಗಮನಿಸಿದಾಗ ಸೇಮ್ ಸ್ಕೈ ಅವರ ಬ್ಲೂಸ್ ಚಾಕಲೇಟ್ ರ್ಯಾಪರೊಳಗೆ ಜೀವಂತ ಹುಳು ಚಾಕಲೇಟ್ ನಲ್ಲಿ ಓಡಾಡುತ್ತಿದ್ದ ಘಟನೆಯೊಂದು ಗ್ರಾಹಕರ ಗಮನಕ್ಕೆ ಬಂದಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ಈ ಬಗ್ಗೆ ಪರಿಶೀಲಿಸುವಂತೆ ಮಾಧ್ಯಮದ ಮುಂದಿಟ್ಟಿರುವ ಪ್ರಕರಣ ಮಂಗಳವಾರ ಸಂಜೆ ನಡೆದಿದೆ.
ಇಲ್ಲಿನ ಕಲ್ಸಂಕ ರಸ್ತೆ ಬಳಿಯಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯೊಂದರಲ್ಲಿ ಎರಡು ಪ್ರತ್ಯೇಕ ದಿನ ಖರೀದಿಸಿದ ಚಾಲಕೇಟ್ ಗಳಲ್ಲಿ ಜೀವಂತ ಹುಳು ಇರುವುದು ಗಮನಕ್ಕೆ ಬಂದಿದೆ. ಸೋಮವಾರ ಸಂಜೆ ಶಿಕ್ಷಕರೊಬ್ಬರು ಈ ಅಂಗಡಿಯಿಂದ ರೂ 5ರ ಬೆಲೆಯ ಸೇಮ್ಸ್ಕೈ ಕಂಪೆನಿಯ ಎರಡು ‘ಬ್ಲೂಸ್’ ಚಾಕಲೇಟು ಖರೀದಿಸಿದ್ದರು. ಮಧ್ಯಾಹ್ನ ಶಾಲೆಯ ಬಿಡುವಿನ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಕ್ಷಮ ಚಾಕಲೇಟಿನ ರ್ಯಾಪರನ್ನು ಬಿಡಿಸಿ ನೋಡಿದಾಗ ಒಂದು ಚಾಕಲೇಟಿನಲ್ಲಿ ಜೀವಂತ ಹುಳಗಳು ಪತ್ತೆಯಾದವೆನ್ನಲಾಗಿದೆ.
ಭಾನುವಾರ ಇದೇ ಅಂಗಡಿಯಿಂದ ಈ ಶಾಲೆಯ ಸಿಬಂದಿಯೊಬ್ಬರು ಖರೀದಿಸಿದ್ದ 5 ಬ್ಲೂಸ್ ಚಾಕಲೇಟ್ ಗಳ ಪೈಕಿ 2 ಚಾಕಲೇಟುಗಳಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಈ ಬಗ್ಗೆ ಶಿಕ್ಷಕರು ಸೋಮವಾರ ಸಂಜೆ ಸದ್ರಿ ಅಂಗಡಿಯವರಿಗೆ ಸಾಕ್ಷಿ ಸಮೇತ ವಿಷಯವನ್ನು ತಿಳಿಸಿದಾಗ ಚಾಕಲೇಟು ವಾಪಾಸು ಕೊಡಿ ಕಂಪೆನಿಗೆ ದೂರು ಕೊಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಚಾಕಲೇಟಿನ ರ್ಯಾಪರಲ್ಲಿರುವ ಮಾಹಿತಿಯಂತೆ ಕರ್ನಾಟಕದ ಕಂಪೆನಿಯೊಂದರ ಈ ಆಹಾರ ಉತ್ಪನ್ನದಲ್ಲಿ ಹೀಗೇಕಾಯಿತು ಎನ್ನುವುದನ್ನು ತುರ್ತಾಗಿ ಸಂಬಂಧಿತರು ಪರಿಶೀಲಿಸುವ ಅಗತ್ಯವಿದೆ. ಎಳೆಯ ಮಕ್ಕಳು, ಕೆಲವೊಮ್ಮೆ ಹಿರಿಯರು ಕೂಡಾ ರ್ಯಾಪರ್ ಬಿಡಿಸಿ ಚಾಕಲೇಟನ್ನು ಬಾಯಿಗೆ ಹಾಕಿಕೊಳ್ಳುವುದೇ ಸಾಮಾನ್ಯವಾಗಿರುವಾಗ ಹೀಗೆ ಹುಳ ಓಡಾಡಿದರೆ ಅದರ ಅಡ್ಡ ಪರಿಣಾಮಗಳು, ಅಪಾಯದ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.