ಬೆಳ್ತಂಗಡಿ: ರಾಜ್ಯ ಸರಕಾರದ ಎತ್ತಿನ ಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಡಿ. 10ರಿಂದ ನಡೆಯುವ ರಥಯಾತ್ರೆಯು ಮೊದಲ ಹಂತವಾಗಿದೆ. ಸರಕಾರ ಸ್ಪಂದಿಸದಿದ್ದರೆ ಮುಂದಿನ ಹಂತವಾಗಿ ಕ್ರಾಂತಿಕಾರಕ ಹೆಜ್ಜೆಯನ್ನು ಇಡಲಿದ್ದೇವೆ. ಸಂದರ್ಭ ಬಂದರೆ ರಾಜೀನಾಮೆಗೂ ಸಿದ್ದ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ, ರಥಯಾತ್ರೆಯ ಗೌರವಾಧ್ಯಕ್ಷ ನಳೀನ್ ಕುಮಾರ್ ಕಟೀಲು ಎಚ್ಚರಿಕೆ ಸಹಿತ ಸ್ಪಷ್ಟಪಡಿಸಿದರು.
ಅವರು ಶನಿವಾರ ಬೆಳ್ತಂಗಡಿ ಸನಿಹ ಲಾಯಿಲ ಗ್ರಾ.ಪಂ. ಸಭಾಭವನದಲ್ಲಿ ಬೆಳ್ತಂಗಡಿಯಲ್ಲಿ ರಥಯಾತ್ರೆ ಹಾದುಹೋಗುವ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಭಾವನಾತ್ಮಕ ಜನಜಾಗೃತಿಗಾಗಿ ಡಿ.10, 11, 12 ರಂದು ಜಿಲ್ಲೆಯಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ಸು ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ. ಜಾತಿ, ಮತ, ಪಂಥ ಮರೆತು ಒಂದಾಗಬೇಕಾಗಿದೆ ಮತ್ತು ಎಲ್ಲಾ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಿಯೇ ಮುಂದಡಿಯಿಡುತ್ತಿದ್ದೇವೆ. ಈಗಾಗಲೇ ಮಾಜಿ ಸಚಿವ ಜನಾರ್ದನ ಪೂಜಾರಿ, ಶಾಸಕರಾದ ಲೋಬೊ, ವಸಂತ ಬಂಗೇರ ಬೆಂಬಲ ಸೂಚಿಸಿದ್ದಾರೆ. ಬೀದಿ ಹೋರಾಟ, ಕಾನೂನು ಹೋರಾಟಗಳು ಕಳೆದ ಕೆಲ ಸಮಯಗಳಿಂದ ನಡೆಯುತ್ತಿದೆ. ಕಾನೂನು ಹೋರಾಟದ ವಿಚಾರದಲ್ಲಿ ತೀರ್ಪುಗಳು ನಮ್ಮ ಪರವಾಗಿಯೇ ಬರಲಿವೆ. ಹೀಗಾಗಿ ಕಾನೂನಿನ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
ಎತ್ತಿನಹೊಳೆ ವಿರೋಧಿಸಿ, ಜೀವನದಿ ನೇತ್ರಾವತಿ ಉಳಿಸಿ ಎಂಬ ಘೋಷಣೆಯೊಂದಿಗೆ ತೀರ್ಥ-ಕ್ಷೇತ್ರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಾರುವ ತೀರ್ಥಕಲಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಯೆಂದು ಹೆಸರಿಸಲಾಗಿದೆ. ಡಿ.10 ರಂದು ಬೆಳಿಗ್ಗೆ ಸುಬ್ರಹ್ಮಣ್ಯದಲ್ಲಿ ಅಲ್ಲಿನ ಕುಮಾರಧಾರೆಯಿಂದ ತೀರ್ಥ ಸಂಗ್ರಹ, ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಸಭಾ ಕಾರ್ಯಕ್ರಮದ ಮೂಲಕ ಯಾತ್ರೆ ಆರಂಭವಾಗಲಿದೆ. ಅಂದೇ ಸಂಜೆ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಪ್ರವೇಶ ಮಾಡಲಿದೆ. ಬಳಿಕ ಧರ್ಮಸ್ಥಳದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಉಜಿರೆಯಲ್ಲಿ ವಾಸ್ತವ್ಯವಿರುತ್ತದೆ. ಡಿ.11 ರಂದು ಉಜಿರೆಯಿಂದ ಹೊರಟು ಬೆಳ್ತಂಗಡಿ, ಗುರುವಯಾನಕೆರೆಗೆ ತೆರಳಿ ಉಪ್ಪಿನಂಗಡಿಗೆ ಯಾತ್ರೆ ಸಾಗಲಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ನಾಲ್ಕು ಯೋಜನೆಗಳನ್ನು ಹೋರಾಟದ ಮೂಲಕ ನಿಲ್ಲಿಸಲಾಗಿದೆ. ಎತ್ತಿನಹೊಳೆ ವಿಚಾರದಲ್ಲಿಯೂ ನಾವು ಪ್ರಜ್ಞಾವಂತಿಕೆಯಿಂದ ಕೆಲಸ ಮಾಡಬೇಕಾಗಿದೆ. ಇದು ಮೊದಲ ಹಂತದ ಕಾರ್ಯಕ್ರಮ. ಜ 26 ರೊಳಗೆ ಸರಕಾರ ಸಭೆ ಕರೆಯದಿದ್ದರೆ ಬಳಿಕ ಕ್ರಾಂತಿಕಾರಕ ಹೋರಾಟ ನಡೆಸಲಾಗುವುದು. ಹೋರಾಟ ಕೈ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ವಿರೋಧ ವೈಚಾರಿಕತೆಗೆ ಹೆಚ್ಚು ಒತ್ತು ನೀಡಿ ಮಾಡಲಾಗುತ್ತದೆಯೇ ಹೊರತು ಯಾರದೇ ವೈಯಕ್ತಿಕ ದ್ವೇಷಕ್ಕಲ್ಲ. ಸರಕಾರದ ನೀತಿಯ ವಿರುದ್ದ ನಮ್ಮ ಹೋರಾಟ ಎಂದರು.
ಜಿಲ್ಲೆಯ ಸಂಸದ, ಶಾಸಕರಿಂದ ಹಿಡಿದು ಎಪಿಎಂಸಿಯ ಜನಪ್ರತಿನಿಧಿಗಳವರೆಗೆ ಎಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೇ ನೀಡಿ ಹೋರಾಟದಲ್ಲಿ ಭಾಗಿಯಾದರೆ ಸರಕಾರಕ್ಕೆ ಬಿಸಿ ಮುಟ್ಟಿಸಬಹುದಾಗಿದೆ. ಬೆಳ್ತಂಗಡಿ ಶಾಸಕರು ಈಗಾಗಲೇ ರಾಜೀನಾಮೆ ನೀಡಲು ಸಿದ್ಧ ಎಂದು ಪ್ರಕಟಿಸಿದ್ದಾರೆ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ದೇವಿಪ್ರಸಾದ್ ಗಮನ ಸೆಳೆದಾಗ ಅನಿವಾರ್ಯವಾದರೆ ನಾವೂ ಕೂಡ ಅದಕ್ಕೆ ಸಿದ್ದ ಎಂದರು.
ವಕೀಲ ಧನಂಜಯ ರಾವ್ ಅವರು, ಯೋಜನೆಯ ವಿಚಾರದಲ್ಲಿ ಗ್ರಾಮೀಣ ಭಾಗದ ಜನತೆಗೆ ಅರಿವೇ ಆಗಿಲ್ಲ. ಅಷ್ಟೇ ಅಲ್ಲ ವಕೀಲ, ವೈದ್ಯ, ಇಂಜಿನಿಯರ್ ಮೊದಲಾದ ವೈಟ್ಕಾಲರ್ ವ್ಯಕ್ತಿಗಳೂ ಇದರ ಬಗ್ಗೆ ಮೃದು ಧೋರಣೆ ಹೊಂದಿರುವುದೂ ಇದೆ. ಯೋಜನೆಯ ಕೆಡುಕಿನ ಬಗ್ಗೆ ಮನೆ ಮನೆಗೆ ತಿಳಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಸಲಹೆ ನೀಡಿದರು.
ಉದಯವಾಣಿ ವರದಿಗಾರ ಲಕ್ಷ್ಮೀ ಮಚ್ಚಿನ ಅವರು ತಮ್ಮ ಬರಹಗಳ ಮೂಲಕ ಜಾಗೃತಿ ಮೂಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ನಳಿನ್ ಬೆಳ್ತಂಗಡಿಯಲ್ಲಿ ಹೋರಾಟದ ಕಹಳೆ ಪರಿಣಾಮಕಾರಿಯಾಗಿ ಮೂಡಿದೆಯಲ್ಲದೆ ಸ್ವರೂಪ ನೀಡಿರುವುದನ್ನು ಸ್ಮರಿಸಿದರು.
ಸಂಚಾಲಕ ಮೋನಪ್ಪ ಭಂಡಾರಿ ಪ್ರಸ್ತಾವಿಸಿದರು. ಯಾತ್ರೆಯ ಅಧ್ಯಕ್ಷ ಸಂಜೀವ ಮಠಂದೂರು, ಉಪಾಧ್ಯಕ್ಷರುಗಳಾದ ಪ್ರಭಾಕರ ಬಂಗೇರ, ಪೀತಾಂಬರ ಹೆರಾಜೆ, ಹೋರಾಟಗಾರರಾದ ಪುಷ್ಪರಾಜ ಶೆಟ್ಟಿ, ಶೈಲೇಶ್, ಪ್ರಭಾಕರ ಉಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.