ಬೆಳ್ತಂಗಡಿ: ಸ್ವಚ್ಛ ಭಾರತ ಯೋಜನೆಗೆ ಎಲ್ಲರೂ ಸಾಥ್ ನೀಡಬೇಕಾಗಿರುವುದು ಇಂದಿನ ತುರ್ತು ಆವಶ್ಯಕತೆಗಳಲ್ಲಿ ಒಂದು. ಆದರೆ ಇಲ್ಲಿನ ಮೈದಾನವೊಂದರ ದೃಶ್ಯವನ್ನು ನೋಡುವಾಗ ಯೋಜನೆಯನ್ನು ನಿರಾಕರಿಸಲಾಗುತ್ತಿದೆಯೇ ಎಂಬ ಭಾವನೆ ಉಂಟಾಗುತ್ತಿದೆ.
ಈ ಮೈದಾನ ಗುರುವಾಯನಕರೆ ಸನಿಹದ ಶಕ್ತಿನಗರ ಎಂಬಲ್ಲಿದೆ. ಗುರುವಾಯನಕರೆ ಕಾರ್ಕಳ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ವಿಶಾಲವಾದ ಈ ಶಕ್ತಿ ಕ್ರೀಡಾಂಗಣವು ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳಿಂದ ತುಂಬಿ ತುಳುಕಾಡುತಿದ್ದು ಸ್ವಚ್ಛ ಭಾರತ ಕಲ್ಪನೆಯನ್ನು ಅಣಕಿಸುವಂತೆ ಕಾಣುತ್ತಿದೆ.
ಶುಕ್ರವಾರದ ತನಕ ಅತ್ಯಂತ ಸ್ವಚ್ಛವಾಗಿದ್ದ ಕ್ರೀಡಾಂಗಣ ದ.ಕ.ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ ನಡೆದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಪ್ರೊ ಮಾದರಿಯ ಸಾಯಿರಾಮ್ ಟ್ರೊಫಿ ಕಬಡ್ಡಿ ಲೀಗ್ ಪಂದ್ಯಾಟದ ನಂತರ ಪ್ಲಾಸ್ಟಿಕ್ ಮಯವಾಗಿ ಹೋಗಿದೆ. ಸಂಘಟಕರು ಪಂದ್ಯಾಟ ನಡೆದ ಕೂಡಲೇ ಕ್ರೀಡಾಂಗಣವನ್ನು ಸ್ವಚ್ಚಗೊಳಿಸಬೇಕಾಗಿತ್ತು. ಆದರೆ ಕಸವನ್ನು ನಿರ್ಲಕ್ಷಿಸಿರುವುದು ವಿಷಾದನೀಯ. ಕಸಕಡ್ಡಿಯ ರಾಶಿಯಾಗಿರುವ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚು. ಪ್ರಬಲವಾದ ಗಾಳಿಯೇನಾದರೂ ಬೀಸಿದಲ್ಲಿ ಪ್ಲಾಸ್ಟಿಕ್ ಎಲ್ಲವೂ ಊರಿಡೀ ಹಬ್ಬುವುದು ನಿಶ್ಚಿತ. ಇನ್ನಾದರೂ ಸಂಘಟಕರು ಎಚ್ಚೆತ್ತು ಶೀಘ್ರವಾಗಿ ಸ್ವಚ್ಛಗೊಳಿಸಿದಲ್ಲಿ ದುರ್ನಾತ ಬೀರುವುದನ್ನು ತಪ್ಪಿಸಬಹುದಾಗಿದೆ.