ಬಂಟ್ವಾಳ: ಬೆಲ್ಟ್ ಆಪರೇಟ್ ಆ್ಯಂಡ್ ಟ್ರಾನ್ಸ್ಫರ್(ಬಿಒಟಿ) ಯೋಜನೆಯಡಿ ಬಿ.ಸಿ.ರೋಡು ಬ್ರಹ್ಮಶ್ರೀ ವೃತ್ತದ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಸೋಮವಾರ ಸಂಜೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣಕ್ಕೆ ಮೀಸಲಿಟ್ಟ ನಿವೇಶನ ಹಾಗೂ ಮೆಲ್ಕಾರ್ ಪೇಟೆ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಪುರಸಭೆಗೆ ಸೇರಿದ 47 ಸೆಂಟ್ಸ್ ಖಾಲಿ ನಿವೇಶನವಿದ್ದು ಇಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಪುತ್ತೂರಿನಲ್ಲಿ ಪಿಪಿಪಿ ಯೋಜನೆಯಡಿ ಬಸ್ ನಿಲ್ದಾಣ ನಿರ್ಮಿಸಿರುವ ಗುತ್ತಿಗೆದಾರ ಡಾ. ಮುಹಮ್ಮದ್ ಇಬ್ರಾಹಿಂ ಪಾವೂರು ಅವರು ಬಿಒಟಿ ಯೋಜನೆಯಡಿ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಮುಂದೆ ಬಂದಿದ್ದಾರೆ. ಶೀಘ್ರದಲ್ಲೇ ಯೋಜನೆಯನ್ನು ತಯಾರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ ಜಮೀನಿಗೆ ತಾಗಿಕೊಂಡು 10 ಸೆಂಟ್ಸ್ ಹೆಚ್ಚು ಪರಂಬೋಕು ಜಾಗವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುಧಾಕರ್ ಸಚಿವರಿಗೆ ಮಾಹಿತಿ ನೀಡಿದರು. ಎಲ್ಲ ಜಾಗವನ್ನು ಸರ್ವೇ ನಡೆಸಿ ಗಡಿ ಗುರುತು ಮಾಡುವಂತೆ ಸಚಿವರು ಇದೇ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಸೂಚಿಸಿದರು. ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿರುವ ಜಮೀನಿಗಿಂತ ಹೆಚ್ಚು ಅನುಕೂಲತೆಯ ಸ್ಥಳ ಇಲ್ಲಿ ಬೇರೆ ಇಲ್ಲ. ಸದ್ರಿ ಜಮೀನಿನಲ್ಲಿ ವಾಣಿಜ್ಯ ಸಂಕಿರಣ ಸಹಿತ ಆಧುನಿಕ ಮಾದರಿಯ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ನಕ್ಷೆ ರೂಪಿಸುವಂತೆ ಈ ಸಂದರ್ಭ ಹಾಜರಿದ್ದ ಗುತ್ತಿಗೆ ಸಂಸ್ಥೆಯ ಚೇರ್ ಮನ್ ಡಾ. ಮುಹಮ್ಮದ್ ಇಬ್ರಾಹೀಂ ಅವರಿಗೆ ಸಚಿವ ರಮಾನಾಥ ರೈ ಸೂಚಿಸಿದರು.
ಮೆಲ್ಕಾರ್ ಗೆ ಬೆಂಗಳೂರು ಲುಕ್: ಮೆಲ್ಕಾರ್ ನಿಂದ ಮಾರ್ನಬೈಲ್ವರೆಗೆ ಸರಕಾರದ ಅಪೆಂಡಿಕ್ಸ್ ಯೋಜನೆಯನ್ವಯ ಚತುಷ್ಪಥ ಕಾಮಗಾರಿ ಭರದಿಂದ ಸಾಗಿದ್ದು ಇಕ್ಕೆಲಗಳ ರಸ್ತೆಗಳಿಗೂ ದಾರಿ ದೀಪ ಅಳವಡಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಮೆಲ್ಕಾರ್ ನ ಈ ರಸ್ತೆ ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.
ರಾಜ್ಯ ಹೆದ್ದಾರಿ ಯೋಜನೆಯಡಿ 1.75 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಗಡಿವರೆಗಿನ ರಸ್ತೆಯನ್ನು ಮರು ಡಾಮರೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಸಿ ಆರ್ ಎಫ್ ಯೋಜನೆಯಡಿ ಬಿ.ಸಿ.ರೋಡ್ ಸರ್ಕಲ್ ನಿಂದ ಪಾಣೆಮಂಗಳೂರು ಪೇಟೆಮೂಲಕ ನಂದಾವರದವರೆಗೆ ಹಾಗೂ ಅಲ್ಲಿಂದ ಮಾರ್ನಬೈಲ್ ತನಕ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಕಾಂಕ್ರೆಟ್ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಸಚಿವ ರೈ ವಿವರಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯೆ ಮಂಜುಳ ಮಾವೆ, ಪುರಸಭಾ ಸದಸ್ಯರಾದ ಜೆಸಿಂತ, ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ತಹಶೀಲ್ದಾರ್ ಪುರಂದರ ಹೆಗ್ಡೆ, ಪಿಡಬ್ಯೂಡಿ ಎಂಜಿನಿಯರ್ ಉಮೇಶ್ ಭಟ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.