ಕಾಸರಗೋಡು: ಬಸ್ಸುಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಘಟನೆ ಸೋಮವಾರ ರಾತ್ರಿ ಉಪ್ಪಳ ಪರಿಸರದಲ್ಲಿ ನಡೆದಿದ್ದು, ಘಟನೆ ಹಿನ್ನಲೆಯಲ್ಲಿ ದುಷ್ಕರ್ಮಿಗಳ ಪತ್ತೆಗೆ ಮಂಜೇಶ್ವರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಉಪ್ಪಳದಿಂದ ಬಾಯಾರು ಕಡೆಗೆ ತೆರಳುತ್ತಿದ್ದ ಖಾಸಗಿ ಮತ್ತು ಉಪ್ಪಳದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ಸಿನ ಮೇಲೆ ಉಪ್ಪಳ ಸಮೀಪದ ಪೈವಳಿಕೆ ಮತ್ತು ಸೋಂಕಾಲ್ ಎಂಬಲ್ಲಿ ಬೈಕ್ ನಲ್ಲಿ ಮುಸುಕುಧಾರಿಗಳಾಗಿ ಬಂದ ತಂಡವು ಕಲ್ಲೆಸೆದು ಪರಾರಿಯಾಗಿದೆ ಎನ್ನಲಾಗಿದೆ. ಕಲ್ಲೆಸೆತದಿಂದ ಬಸ್ಸಿನ ಗಾಜುಗಳು ಹುಡಿಯಾಗಿದೆ. ಪ್ರಯಾಣಿಕರು ಮತ್ತು ಬಸ್ಸು ಸಿಬಂದಿಗಳಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಬಸ್ಸುಗಳ ಮೇಲೆ ನಡೆದ ಕಲ್ಲೆಸೆತ ಘಟನೆ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.