ಸುಳ್ಯ: ಕಾಡಾನೆಗಳ ಹಿಂಡು ಮತ್ತೆ ಸುಳ್ಯ ನಗರದತ್ತ ಮುಖ ಮಾಡಿರುವುದು ಆತಂಕ ಸೃಷ್ಠಿಸಿದೆ. ನಾಲ್ಕು ಆನೆಗಳ ಹಿಂಡು ಸುಳ್ಯ ನಗರದ ಭಸ್ಮಡ್ಕ ಸಮೀದಲ್ಲಿ ಬೀಡು ಬಿಟ್ಟಿದೆ.
ಪಯಸ್ವಿನಿ ಹೊಳೆಯ ಬದಿಯಲ್ಲಿ ಅಜ್ಜಾವರ ಗ್ರಾಮ ಪಂಚಾಯಿತಿಯಲ್ಲಿ ಆನೆಗಳ ಹಿಂಡು ಕಂಡು ಬಂದಿದ್ದು ಪಯಸ್ವಿನಿ ನದಿ ದಾಟಿದರೆ ಆನೆಗಳು ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಗೆ ದಾಂಗುಡಿಯಿಡುವ ಸಾಧ್ಯತೆಯಿದೆ. ಕಳೆದ ವರ್ಷ ಏಳು ಆನೆಗಳ ಹಿಂಡು ಸುಳ್ಯ ನಗರದ ಭಸ್ಮಡ್ಕಕ್ಕೆ ಬಂದು ಸುಮಾರು 24 ಗಂಟೆಗಳ ಕಾಲ ಬೀಡು ಬಿಟ್ಟು ಭೀತಿ ಹುಟ್ಟಿಸಿತ್ತು. ಇದೀಗ ಆನೆಗಳು ಪಯಸ್ವಿನಿ ನದಿ ದಾಟಿ ನಗರಕ್ಕೆ ಬಾರದಂತೆ ತಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚಣೆ ಆರಂಭಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಹೊಳೆಯ ಬದಿಯಲ್ಲಿ ಬೆಂಕಿ ಹಾಕಿ, ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿ ನಗರದೆಡೆಗೆ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಕಾಡಾನೆಗಳ ಹಿಂಡು ಕಳೆದ ಒಂದು ವಾರದಿಂದ ಸುಳ್ಯ ನಗರ ಸಮೀಪವೇ ಇರುವ ಆಲೆಟ್ಟಿ ಮತ್ತು ಅಜ್ಜಾವರ ಗ್ರಾಮದ ವಿವಿಧ ಕಡೆಗಳಲ್ಲಿ ಧಾಳಿ ಮಾಡಿ ಕೃಷಿ ಹಾನಿ ಮಾಡುತ್ತಿವೆ. ನಗರದ ಹೊರ ವಲಯದ ಪಯಸ್ವಿನಿ ನದಿಯ ಬದಿಯಲ್ಲಿರುವ ತುದಿಯಡ್ಕ, ನಾರ್ಕೋಡು, ಬೆಳ್ಳಪಾರೆ ಭಾಗಗಳಲ್ಲಿ ಆನೆಗಳು ನಿರಂತರ ಕೃಷಿ ಹಾನಿ ಮಾಡಿ ಭೀತಿ ಹುಟ್ಟಿಸಿದೆ. ಈ ಭಾಗದಲ್ಲಿ ಹಲವು ಮಂದಿ ಕೃಷಿಕರ ಅಡಕೆ, ತೆಂಗು, ಬಾಳೆ ಕೃಷಿಯನ್ನು ನಾಶ ಮಾಡಿದೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಪಟಾಕಿ ಸಿಡಿಸಿ, ಬೆಂಕಿ ಉರಿಸಿ, ತಮಟೆ ಚೆಂಡೆ ಬಾರಿಸಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಆನೆಗಳು ದೂರ ಸರಿಯದೆ ಜನವಸತಿ ಪ್ರದೇಶದ ಸಮೀಪದಲ್ಲೇ ಬೀಡು ಬಿಟ್ಟು ಮತ್ತೆ ನಾಡಿಗೆ ನುಗ್ಗುತ್ತವೆ. ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಗ್ರಾಮಗಳು ಹಲವು ವರ್ಷಗಳಿಂದ ನಿರಂತರ ಕಾಡಾನೆ ದಾಳಿಗೆ ತುತ್ತಾಗಿ ನಲುಗಿ ಹೋಗಿವೆ. ಕೆಲವು ಸಮಯದಿಂದ ಕಡಿಮೆಯಾಗಿದ್ದ ಆನೆಗಳ ಉಪಟಳ ಮತ್ತೆ ತೀವ್ರಗೊಂಡಿದೆ.