ಸುಳ್ಯ: ಸುಳ್ಯ ತಾಲೂಕಿನಲ್ಲಿರುವ ಎಲ್ಲಾ ಕಿಂಡಿ ಅಣೆಕಟ್ಟುಗಳ ಸ್ಥಿತಿ ಗತಿಗಳ ಬಗ್ಗೆ ಪರಿಶಿಲನೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಉಬರಡ್ಕದಲ್ಲಿ 47 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ಕೊಚ್ಚಿ ಹೋದ ಹಿನ್ನಲೆಯಲ್ಲಿ ಸಭೆಯಲ್ಲಿ ತಾಲೂಕಿನ ಕಿಂಡಿ ಅಣೆಕಟ್ಟುಗಳ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವ ಇರುವುದರಿಂದ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಿ ನೀರನ್ನು ಶೇಖರಿಸಬೇಕಾದ ಅನಿವಾರ್ಯತೆ ಇದೆ ಎಂದು ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಮಧುಕುಮಾರ್ ಹೇಳಿದರು. ಕಳೆದ ತಿಂಗಳು ನಡೆದ ಸಭೆಯಲ್ಲಿಯೇ ಕಿಂಡಿ ಅಣೆಕಟ್ಟುಗಳ ಬಗ್ಗೆ ಮಾಹಿತಿ ಕೇಳಿದ್ದರೂ ಸಮರ್ಪಕವಾಗಿ ನೀಡದೇ ಇರುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧಿಕಾರಿಗಳನ್ನು ಪ್ರಶ್ನಿಸಿದರು. 48 ಕಿಂಡಿ ಅಣೆಕಟ್ಟುಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಅದರ ದುರಸ್ಥಿಗೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಂದ ಕಿಂಡಿ ಅಣೆಕಟ್ಟಿನ ಸ್ಥಿತಿಯ ಬಗ್ಗೆ ಪರಿಶೀಲನಾ ವರದಿ ಪಡೆದು ವರದಿ ನೀಡುವಂತೆ ಕೃಷಿ ಅಧಿಕಾರಿಗೆ ಸಭೆ ಸೂಚಿಸಿತು. ಕಿಂಡಿ ಅಣೆಕಟ್ಟುಗಳ ದುರಸ್ಥಿ ಕಾರ್ಯ ವಿಳಂಬವಾಗಿರುವುದಕ್ಕೆ ಸಭೆಯು ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ ಸುಳ್ಯ ತಾಲೂಕಿನಲ್ಲಿ ತುರ್ತು ಕುಡಿಯುವ ನೀರಿನ ಅಗತ್ಯತೆಗಳ ಬಗ್ಗೆ ಸಮಗ್ರವಾದ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕೆರೆಗಳ ಹೂಳೆತ್ತಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಐನೆಕಿದು-ಹರಿಹರ-ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿ ರಸ್ತೆಯನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಬೇಲಿಯನ್ನು ತೆರವು ಮಾಡಲು ಕ್ರಮ ಕೈಗೊಳ್ಳಲು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೂ ಬೆಲೆ ಕೊಡುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೇಲಿಯನ್ನು ಕೂಡಲೇ ತೆಗೆಸದಿದ್ದರೆ ತಾ.ಪಂ.ವತಿಯಿಂದಲೇ ಬೇಲಿಯನ್ನು ತೆಗೆಸಲು ಕ್ರಮ ಕೈಗೊಳ್ಳಲು ನಿರ್ಣಯ ಬೊಳ್ಳೂರು ಸೂಚಿಸಿದರು. ತಾಲೂಕಿನ ನಾಲ್ಕು ಕ್ಲಸ್ಟರ್ಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಆಗಿಲ್ಲ, ತಾಲೂಕಿಗೆ 25 ಮಂದಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಮಾಹಿತಿ ನೀಡಿದರು. ವಿಕಲಚೇತನರ ಉಚಿತ ತಪಾಸಣೆ ಮತ್ತು ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆಯ ಶಿಬಿರ ಸುಳ್ಯದಲ್ಲಿ ಜ.ಎಂಟರಂದು ತಾಲೂಕು ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಸಭೆಗೆ ತಿಳಿಸಿದರು.
ನಿರ್ಗತಿಕರಿಗೆ ಬ್ಯಾಂಕ್ ಸಾಲ ನೀಡುವುದೇ ಒಂದು ಜಿಜ್ಞಾಸೆ
ನಿರ್ಗತಿಕರಿಗೆ ಬ್ಯಾಂಕ್ ಸಾಲ ನೀಡುತ್ತದೆಯೇ ಎಂಬ ಜಿಜ್ಞಾಸೆ ಸಭೆಯಲ್ಲಿ ಸ್ವಲ್ಪ ಹೊತ್ತು ಚರ್ಚೆಗೆ ಗ್ರಾಸವಾಯಿತು. ಪಶು ಸಂಗೋಪನಾ ಇಲಾಖೆಯ ಅಮೃತ ಯೋಜನೆಯಡಿಯಲ್ಲಿ 1.20 ಲಕ್ಷ ರೂಗಳ ಹಸು ಘಟಕ ಸ್ಥಾಪನೆಗೆ ನಿರ್ಗತಿಕ ಹೆಣ್ಣು ಮಕ್ಕಳಿಗೆ ಮತ್ತು ವಿಧವೆಯರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು. 30 ಸಾವಿರ ರೂ ಇಲಾಖೆಯ ವತಿಯಿಂದ ಸಹಾಯಧನ ನೀಡಲಾಗುತ್ತದೆ, ಉಳಿದ ಮೊತ್ತವನ್ನು ಬ್ಯಾಂಕ್ ಗಳಿಂದ ಸಾಲ ಪಡೆಯಬೇಕು ಎಂದು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿನಿರ್ಗತಿಕರಾದವರಿಗೆ ಮತ್ತು ವಿಧವೆಯರಿಗೆ ಬ್ಯಾಂಕ್ಗಳು ಸಾಲ ನೀಡುತ್ತದೆಯೇ, ಬ್ಯಾಂಕ್ಗಳು ಕೇಳುವ ದಾಖಲೆಗಳನ್ನು ನೀಡಲು ಇವರಿಗೆ ಸಾಧ್ಯವಾಗುತ್ತದೆಯೇ ಎಂಬ ಸಂಶಯವನ್ನು ರಾಧಾಕೃಷ್ಣ ಬೊಳ್ಳೂರು ಎತ್ತಿದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ರೀತಿಯ ಯೋಜನೆಗಳ ಫಲಾನುಭವಿಗಳಿಗೆ ಬೇಕಾದ ಎಲ್ಲಾ ದಾಖಲೆಗಳನ್ನೂ ಯೋಜನೆ ಅನುಷ್ಠಾನಗೊಳಿಸುವ ಇಲಾಖೆ ಸಿದ್ಧಪಡಿಸಬೇಕು ಮತ್ತು ಅವರಿಗೆ ಬೇಕಾದ ಎಲ್ಲಾ ಸಹಾಯವನ್ನೂ ನೀಡಬೇಕು ಎಂದು ಸಭೆ ಸೂಚಿಸಿತು.
ತಾ.ಪಂ.ಉಪಾಧ್ಯಕ್ಷ ಶುಭದಾ ಎಸ್.ರೈ ಉಪಸ್ಥಿತರಿದ್ದರು.