ಸುಳ್ಯ: ಕಾಡಾನೆಗಳ ಹಿಂಡು ನಗರದತ್ತ ನುಗ್ಗದಂತೆ ತಡೆಯಲು ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಮಂಗಳವಾರ ರಾತ್ರಿ ಪೂರ್ತಿ ಕಾರ್ಯಚರಣೆ ನಡೆಸಿದರು. ನಾಲ್ಕು ಆನೆಗಳ ಹಿಂಡು ಸುಳ್ಯ ನಗರದ ಭಸ್ಮಡ್ಕ ಸಮೀಪ ಪಯಸ್ವಿನಿ ಹೊಳೆಯ ಬದಿಯಲ್ಲಿ ಬೀಡು ಬಿಟ್ಟಿತ್ತು. ಪಯಸ್ವಿನಿ ನದಿ ದಾಟಿದರೆ ಆನೆಗಳು ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಗೆ ದಾಂಗುಡಿಯಿಡುವ ಸಾಧ್ಯತೆಯಿದ್ದ ಕಾರಣ ಹೊಳೆ ಬದಿಯಲ್ಲಿ ಬೆಂಕಿ ಹಾಕಿ, ಪಟಾಕಿ ಸಿಡಿಸಿ, ಚೆಂಡೆ ಮದ್ದಳೆ ಬಾರಿಸಿ ಕಾರ್ಯಾಚರಣೆ ನಡೆಸಿದರು. ಇದರಿಂದ ಆನೆಗಳು ಹೊಳೆ ದಾಟದೆ ಬುಧವಾರ ಬೆಳಗ್ಗಿನ ಜಾವದವರೆಗೆ ಹೊಳೆ ಬದಿಯಲ್ಲೇ ಇದ್ದು ಕೃಷಿ ಹಾನಿ ಮಾಡಿದೆ.
ಬುಧವಾರ ಹಗಲಿನ ವೇಳೆಯೂ ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಇಲಾಖೆಯು ಆನೆಗಳನ್ನು ಸ್ವಲ್ಪ ದೂರಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮರಿ ಸೇರಿ ನಾಲ್ಕು ಆನೆಗಳ ಹಿಂಡು ತುಂಬಾ ದೂರ ಸರಿಯದೆ ಜನವಸತಿ ಪ್ರದೇಶದ ಸಮೀಪವೇ ಇರುವ ಬೆಳ್ಳಪ್ಪಾರೆ ಕಾಡಿನಲ್ಲಿ ಬೀಡು ಬಿಟ್ಟಿದ್ದು ಮತ್ತೆ ಊರಿಗೆ ದಾಂಗುಡಿಯಿಡುವ ಭೀತಿ ಉಂಟಾಗಿದೆ. ಇದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಕ್ಯಾಂಪ್ ಮಾಡಿ ಅಹೋ ರಾತ್ರಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪಯಸ್ವಿನಿ ಹೊಳೆ ಬದಿಯಲ್ಲಿ ತುದಿಯಡ್ಕ ಭಾಗದಲ್ಲಿ ಮಂಗಳವಾರ ರಾತ್ರಿ ಅಕ್ಷರಷಃ ಗಜ ತಾಂಡವವೇ ನಡೆದಿದೆ. ಈ ಭಾಗದಲ್ಲಿ ಹಲವು ಮಂದಿ ಕೃಷಿಕರ ಕೃಷಿಯನ್ನು ಹಾನಿ ಮಾಡಿದೆ. ಆನೆಗಳ ಹಿಂಡು ನೂರಾರು ಬಾಳೆ, ಹತ್ತಾರು ತೆಂಗಿನಮರ ಮತ್ತು ಅಡಕೆ ಮರವನ್ನು ಆಪೋಷನ ತೆಗೆದುಕೊಂಡಿದೆ. ಕಳೆದ ವರ್ಷ ಏಳು ಆನೆಗಳ ಹಿಂಡು ಸುಳ್ಯ ನಗರದ ಭಸ್ಮಡ್ಕಕ್ಕೆ ಬಂದು ಸುಮಾರು 24 ಗಂಟೆಗಳ ಕಾಲ ಬೀಡು ಬಿಟ್ಟು ಭೀತಿ ಹುಟ್ಟಿಸಿತ್ತು. ಇದೀಗ ಆನೆಗಳು ಪಯಸ್ವಿನಿ ನದಿ ದಾಟಿ ನಗರಕ್ಕೆ ಬಾರದಂತೆ ತಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹರ ಸಾಹಸ ಪಡುತ್ತಿದ್ದಾರೆ.
ಕಂದಕ ನಿರ್ಮಾಣದ ಯೋಜನೆ:
ಕಾಡಾನೆಗಳ ಹಿಂಡು ಪದೇ ಪದೇ ನಾಡಿಗೆ ಲಗ್ಗೆಯಿಡುತ್ತಿರುವ ಹಿನ್ನಲೆಯಲ್ಲಿ ಅರಣ್ಯದ ಗಡಿಯಲ್ಲಿ ಆನೆ ಕಂದಕ ನಿರ್ಮಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಇರಂತಮಜಲುವಿನಿಂದ ಭಸ್ಮಡ್ಕವರೆಗೆ ಐದು ಕಿ.ಮಿ.ಆನೆ ಕಂದಕ ನಿರ್ಮಿಸಲಾಗುವುದು. ಕಳೆದ ಒಂದು ವರ್ಷದ ಅವಧಿಯಲ್ಲಿ ಮಂಡೆಕೋಲಿನಲ್ಲಿ ಹದಿನೆಂಟೂವರೆ ಕಿ.ಮಿ, ಕೋಲ್ಚಾರ್, ಮರ್ಕಂಜ, ಅರಂತೋಡು ಭಾಗಗಳಲ್ಲಿ ಒಂಭತ್ತು ಕಿ.ಮಿ. ಆನೆ ಕಂದಕ ನಿರ್ಮಿಸಲಾಗಿದೆ. ಆನೆ ಕಂದಕ ನಿರ್ಮಿಸಿದ ಕಡೆಗಳಲ್ಲಿ ಆನೆಗಳ ಹಾವಳಿ ಕಡಿಮೆಯಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಕೈಕೊಟ್ಟ ಜೀಪು: ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸುವ ವೇಳೆ ರಾತ್ರಿ ಅರಣ್ಯ ಇಲಾಖೆಯ ಜೀಪು ಕೈಕೊಟ್ಟ ಘಟನೆ ನಡೆಯಿತು. ಮಧ್ಯ ರಾತ್ರಿಯ ವೇಳೆಗೆ ಜೀಪು ಕಾಡಿನ ಮಧ್ಯೆ ಜೀಪು ಕೆಟ್ಟು ನಿಂತಿತು. ಇದರಿಂದ ಕಂಗೆಟ್ಟ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೇರೆ ಜೀಪನ್ನು ತರಿಸಿ ಕಾರ್ಯಾಚರಣೆ ಮುಂದುವರಿಸಿದರು. ಬುಧವಾರ ಹಗಲು ಜೀಪನ್ನು ದುರಸ್ಥಿ ಪಡಿಸಿ ಕೊಂಡೊಯ್ಯಲಾಯಿತು.