ಕಾರ್ಕಳ: 22 ಹರೆಯದ ಯುವತಿ ಅರ್ಪಿತಾ ಹೆಗಡೆ ಅವರು ರಚಿಸಲ್ಪಟ್ಟ 5ನೇ ಯಕ್ಷಗಾನ ಪ್ರಸಂಗ “ಗಂಡಗಲಿ ದೇವರಾಯ” ಡಿ.12ರಂದು ಕಾರ್ಕಳದ ಗಾಂಧಿಮೈದಾನದಲ್ಲಿ ಶ್ರೀ ಪೆರ್ಡೂರು ಮೇಳದ ಕಲಾವಿದರಿಂದ ತಿರುಗಾಟದ ಪ್ರಥಮ ಪ್ರಯೋಗ ಲೋಕಾರ್ಪಣೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
“ಗಂಡುಗಲಿ ದೇವರಾಯ” ಯಕ್ಷಗಾನದಲ್ಲಿ ಅರ್ಪಿತಾ ಹೆಗಡೆ ಜಗನ್ಮೋಹಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಒಂದು ವಿಶೇಷವಾಗಿದೆ.
ಕರಾವಳಿ ಮೂಲದವರು….
ಮೂಲತಃ ಹೊನ್ನಾವರದ ಕಡತೋಕದವರಾಗಿರುವ ಪ್ರಸಕ್ತ ಬೆಂಗಳೂರು ಬೇಗೂರು ನೆಲೆಸಿದ್ದು ಸಿರಿಕಲಾಮೇಳ ಹವ್ಯಾಸಿ ಯಕ್ಷಗಾನ ಮಂಡಳಿಯ ಸದಸ್ಯೆಯಾಗಿದ್ದಾರೆ. ಯಕ್ಷಗಾನ ಕಲಾವಿದ ಸುರೇಶ್ ಹೆಗಡೆ ಕಡತೋಕ ಹಾಗೂ ಶ್ರೀದೇವಿ ದಂಪತಿಗಳ ಪುತ್ರಿಯಾಗಿರುವ ಇವರು ಪೂರ್ಣಚಂದ್ರ, ನಾಗಪಂಚಮಿ, ಪ್ರೇಮಸಾರಂಗ, ರಾಧಾಂತರಂಗ ಸೇರಿದಂತೆ ನಾಲ್ಕು ಪ್ರಸಂಗಗಳನ್ನು ರಚಿಸಿದ್ದಾರೆ. ಇವುಗಳು ಹಲವು ಪ್ರದರ್ಶನಗಳು ಕಂಡಿವೆ.
ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಅಭಿರುಚಿ ಹೊಂದಿರುವ ಅರ್ಪಿತಾ, ದೊಡ್ಡಪ್ಪ ವಿ.ಆರ್.ಹೆಗಡೆಯವರ ಪ್ರೋತ್ಸಾಹದಿಂದಾಗಿ ಸಿರಿಕಲಾ ಮೇಳದಲ್ಲಿ ಪುಟಿದೆದ್ದು ಬಹುದೊಡ್ಡ ಪ್ರತಿಭೆಯಾಗುವತ್ತಾ ಹೆಜ್ಜೆಹಾಕಿದ್ದಾಳೆ. ತನ್ನ ನಾಲ್ಕನೇ ವಯಸ್ಸಿಗೆ ಯಕ್ಷಗಾನರಂಗದಲ್ಲಿ ಗೆಜ್ಜೆ ಕಟ್ಟಿ ಹೆಸರು ಮಾಡಿದುದಲ್ಲದೇ ಅಮೇರಿಕಾದ ಅಕ್ಕ ಕನ್ನಡ ಕಾರ್ಯಕ್ರಮದಲ್ಲಿ ಆಹ್ವಾನಿತ ಕಲಾವಿದೆಯಾಗಿ ಭಾಗವಹಿಸಿದ ಕೀರ್ತಿ ಅವರದಾಗಿದೆ. ಸಿರಿಕಲಾಮೇಳದ ವತಿಯಿಂದ ನಡೆದ ಸುಮಾರು 500ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಗಜ್ಜೆ ಕಟ್ಟಿ,ಹೆಜ್ಜೆ ಹಾಕಿದ ಅರ್ಪಿತಾ ಹೆಗಡೆ ಕಲಾವಿದೆಯಾಗಿ ಉತ್ತುಂಗಕ್ಕೇರುತ್ತಿರುವುದು ಕಲಾಲೋಕದ ಐತಿಹವಾಗಿದೆ. ಇತ್ತೀಚಿಗೆ ಚೀನಾದಲ್ಲಿ ನಡೆದಿರುವ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡ ನಾಡಿನ ಯಕ್ಷಗಾನದ ಕಂಪು ಸೂಸಿದವರ ಸಾಲಿನಲ್ಲಿ ಅರ್ಪಿತಾ ಒಬ್ಬರಾಗಿರುವುದು ಹೆಮ್ಮೆ ಎನಿಸಿದೆ.
ಯಕ್ಷಗಾನ ಪಿತಾಮಹ ಕುಂಬಳೆ ಪಾರ್ತಿ ಸುಬ್ಬರಾಗಿದ್ದು, ಯಕ್ಷಗಾನ ಸಾಮಾನ್ಯವಾಗಿ ಗಂಡಸರ ಕಲೆ ಎಂದು ಜನಜನಿತವಾಗಿರುವ ನಡುವೆ ಅರ್ಪಿತಾ ತನ್ನ ಪ್ರತಿಭೆಯ ಮೂಲಕ ಯಕ್ಷಗಾನದಲ್ಲಿ ಲವ-ಕುಶ, ಅಭ್ಯುಮನ್ಯು, ಅರ್ಜುನ, ಶ್ರೀಕೃಷ್ಣ ಹಾಗೂ ಸ್ತ್ರೀ ಪಾತ್ರಗಳಿಗೆ ತಕ್ಕುದಾದ ಹಾವ-ಭಾವ-ಕುಣಿತ ಮತ್ತು ಮಾತುಗಾರಿಕೆಗಳ ಮೂಲಕ ಕಲಾರಸಿಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ಸಿರಿಕಲಾಮೇಳದಲ್ಲಿ ಸುಮಾರು ಐವತ್ತಕ್ಕೂ ಮಿಕ್ಕಿ ಪಾತ್ರಧಾರಿಗಳಿದ್ದು, ಅವರಲ್ಲಿ ಕಲಾವಿದೆ ಅರ್ಪಿತಾ ಟಾಪ್ 5ರಲ್ಲಿ ಇದ್ದಾರೆಂಬುವುದು ಕಲಾತಜ್ಞರ ತೀರ್ಪು ನೀಡಿರುವುದು ಗಮನಾರ್ಹವಾಗಿದೆ.
ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾದ ಅರ್ಪಿತಾ
ಭಾರತ ರತ್ನ ಬಾಪೂಜಿ ರಾಷ್ಟ್ರೀಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿರುವ ಅರ್ಪಿತಾ ಬರೀ ಯಕ್ಷಗಾನ ಕಲಾವಿದೆ ಮಾತ್ರವಲ್ಲದೇ ಪ್ರಸಂಗ ಕರ್ತೆಯೂ ಆಗಿದ್ದಾರೆ. ಐದು ಪ್ರಸಂಗಗಳನ್ನು ರಚಿಸಿ ಹಲವು ಪ್ರದರ್ಶನ ನಡೆದಿರುವ ಜೊತೆಗೆ ಯಕ್ಷಗಾನದಲ್ಲಿ ಒಂದು ಮೈಲಿಗಲ್ಲೂ ಆಗಿ ಗುರುತಿಸಿಕೊಂಡಿದ್ದಾರೆ.
ಕಥೆಯ ಸಾರಂಶ…
ಕಾಕತೀಯ ವಂಶದ ರಾಜ ಪ್ರತಾಪರುದ್ರನಿಂದ ಆರಂಭವಾಗಿ, ಕನ್ನಡ ನೆಲಕ್ಕೆ ಮುಸಲ್ಮಾರ ರಾಜರ ಆಗಮನ. ರಾಜ ಪ್ರತಾಪರುದ್ರನ ಕೊಲ್ಲುತ್ತಾರೆ. ಆತನ ಸೈನಿಕರಾದ ಹರಿಹರ-ಬುಕ್ಕರು ಕಂಪಿಲ ರಾಜನ ಆಶ್ರಯ ಪಡೆಯುತ್ತಾರೆ. ಪರಿಣಾಮವಾಗಿ ಮುಸಲ್ಮಾನ ರಾಜನಿಂದಲೂ ಕಂಪಿಲ ರಾಜನಿಗೆ ಅಘಾತ… ಹೀಗೆ ಮುಂದುವರೆಯುತ್ತದೆ. ಹಕ್ಕ-ಬುಕ್ಕರನ್ನು ಮೊಹಮ್ಮದ್ ಬಿಲ್ ತುಘಲಕ್ ಸೆರೆ ಹಿಡಿದು ದೆಹಲಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿಂದ ಹಕ್ಕ-ಬುಕ್ಕರು ಹೇಗೂ ಕಾಲಿಗೆ ಬುದ್ದಿ ಹೇಳಿ ಹಿಂತಿರುಗಿ ಬರುತ್ತಾರೆ. ಹೀಗಿರುವಾಗ ತುಂಗಾ ನದಿ ತೀರದಲ್ಲಿ ಆಚಾರ್ಯ ವಿದ್ಯಾರಣ್ಯದ ಪ್ರವೇಶವಾಗಿರುತ್ತದೆ. ಅವರಿಂದ ಹಕ್ಕ-ಬುಕ್ಕರಿಗೆ ಮಾರ್ಗದರ್ಶನ ದೊರೆತು ಸೈನ್ಯ ಕಟ್ಟಿ ಕನ್ನಡ ನಾಡಿನ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುತ್ತಾರೆ. ಸಾಳುವ ವಂಶದ ವೀರ ನರಸಿಂಹನ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯವು ಸಾಕಷ್ಟು ಪ್ರಸಿದ್ಧಿ ಹೊಂದಿತು.
ಅಲ್ಲಿಂದ ವಿಜಯನಗರ ಸಾಮ್ರಾಜ್ಯದ ಉನ್ನತಿ ಆರಂಭವಾಗುತ್ತದೆ. ಮಸಲ್ಮಾನ ರಾಜರಿಂದ ರಾಜ್ಯವನ್ನು ಮುಕ್ತಿಗೊಳಿಸಿ ಆಳ್ವಿಕೆ ಮಾಡುತ್ತಾರೆ. ಹೀಗಿರುವಾಗ ತುಳುವ ನರಸನಾಯಕನ ರಾಣಿ ಸವತಿಯರ ಉಪಟಳ ತಡೆಯಲಾರದೆ ತನ್ನ ಕೃಷ್ಣ ನಾಮಾಂಕಿತದ ಮಗುವಿನ( ಶಿಶು) ಜತೆಯಲ್ಲಿ ತುಂಗಾನದಿಗೆ ಹಾರಿ ಪ್ರಾಣ ಬಿಡುವ ತಯಾರಿಯಲ್ಲಿದ್ದಾಗ ವಿಜಯನಗರದ ಮಹಾಮಂತ್ರಿ ತಿಮ್ಮರಸುವಿನ ಮಡದಿ ರಕ್ಷಿಸುತ್ತಾಳೆ. ಕೃಷ್ಣನ ಬಾಲ್ಯ ತಿಮ್ಮಮರುಸುವಿನ ಹಾರೈಕೆಯಲ್ಲಿ ಅವರ ಮೇಲ್ಪಿಚಾರಣೆಯಲ್ಲಿ ನಡೆಯುತ್ತದೆ. ಪ್ರೌಢವಸ್ಥೆಗೆ ತಲುಪಿದ್ದ ದೇವರಾಯ ತಿಮ್ಮರಸುವಿನ ಸೂಚನೆ ಮೇರೆಗೆ ಹೊರ ಪ್ರಪಂಚದ ದರ್ಶನಕ್ಕೆ ಹೊರಡುತ್ತಾನೆ. ಮಾರ್ಗ ಮಧ್ಯೆದ ದೇವಸ್ಥಾನವೊಂದರಲ್ಲಿ ಚಿನ್ನಾದೇವಿ ನರ್ತಕಿಗೆ ಮನಸೋತು ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ.
ಮಂತ್ರಿ ತಮ್ಮರಸುವಿಗೆ ಈ ವಿಷಯ ತಿಳಿದಾಗ ಆಕೆ ರಾಜ ಕುಲದವಳಲ್ಲವೆಂದೂ ಅವಳನ್ನು ಬಿಟ್ಟು ರಾಜಕುಲದ ತಿರುಮಲಾಂಬೆಯನ್ನು ವರಿಸಬೇಕೆಂದೂ ಕೇಳಿಕೊಳ್ಳುತ್ತಾನೆ. ಆದರೆ ದೇವರಾಯ ಅದಾಗಲೇ ದೇವರ ಮುಂದೆ ಮಾತು ಕೊಟ್ಟಿದ್ದರಿಂದ ಅದನ್ನು ಉಳಿಸಿಕೊಳ್ಳುವ ಸಲುವಾಗಿ ಇಬ್ಬರನ್ನೂ ಮದುವೆಯಾಗಿ ವಿರುಮಲಾಂಬೆಯನ್ನು ಪಟ್ಟದರಸಿಯಾಗಿರಿಸಿಕೊಳ್ಳುತ್ತಾನೆ. ತದನಂತರ ರಾಜ್ಯವನ್ನು ವಿಸ್ತಾರ ಮಾಡಲಿಕ್ಕಾಗಿ ದಂಡಯಾತ್ರೆ ಕೈಗೊಳ್ಳುತ್ತಾನೆ. ಹೀಗಿರುವಾಗ ಒರಿಸ್ಸಾದ ಗಜಪತಿರಾಜನ ಮಗಳು ಕೃಷ್ಣ ದೇವರಾಯನನ್ನು ಕೊಲ್ಲಿಸಲು ತನ್ನನ್ನು ಪ್ರೀತಿಸುತ್ತಿದ್ದ ಶಶಿಶೇಖರನನ್ನು ಬಳಸಿಕೊಂಡು ತಂತ್ರವನ್ನು ರೂಪಿಸುತ್ತಿದ್ದಾಗ ಅಲ್ಲಿಗೆ ಬಂದ ಕೃಷ್ಣದೇವರಾಯನೇ ಗಜಪತಿಯನ್ನು ಸೋಲಿಸಿ ಆತನ ಮಗಲನ್ನು ವಿವಾಹವಾಗುತ್ತಾನೆ.
ನಂತರ ಕೃಷ್ಣದೇವರಾಯನ ಮಲ ಸಹೋದರರಾದ ಅಚ್ಚುರಾಯ ಮತ್ತು ರಂಗರಾಯರು ಸ್ವಲ್ಪ ಸಮಯದ ಬಳಿಕ ತಂತ್ರವೊಂದನ್ನು ರೂಪಿಸಿ ಕೃಷ್ಣದೇವರಾಯನ ಮಗನನು ಕೊಲ್ಲಿಸಿ ಆ ಕೃತ್ಯವನ್ನು ಮಂತ್ರಿ ತಮ್ಮರಸುವಿನ ಮೇಲೆ ಹಾಕಿ ಬಿಡುತ್ತಾರೆ. ಇದೇ ಕಾರಣದಿಂದಾಗಿ ತಿಮ್ಮರಸು ಆಸ್ಥಾನವನ್ನು ಬಿಟ್ಟು ಹೂರಡುತ್ತಾನೆ. ನೈಜಾಂಶ ವಿಚಾರ ಗೊತ್ತಾಗುವಷ್ಟರಲ್ಲಿ ತಮ್ಮರಸುವಿನ ಕಣ್ಣುಗಳನ್ನು ಅಚ್ಚುತರಾಯ ಮತ್ತು ರಂಗರಾಯ ಕೀಳಿಸಿರುತ್ತಾರೆ. ಈ ಎಲ್ಲಾ ಬೆಳವಣಿಗೆ ಕೃಷ್ಣದೇವರಾಯನ ಪರಿವಾರದವರು ಶೋಕದಿಂದ ಪರಿತಪಿಸುವುದರೊಂದಿಗೆ ಪ್ರಸಂಗದ ಕಥೆ ಸಂಪನ್ನಗೊಳ್ಳುತ್ತದೆ. ಪ್ರಸಾದ ಮೊನೆಬೆಟ್ಟು ಪದ್ಯ ರಚಿಸಿದ್ದಾರೆ. ರಾಘವೇಂದ್ರ ಆಚಾರ್ಯ ಜನ್ಸಾಲೆ, ಶಂಕರ ಭಟ್ ಬ್ರಹ್ಮೂರು ಇವರು ಭಾಗವತರಾಗಿದ್ದಾರೆ.