ಕಾಸರಗೋಡು: ಕೃಷಿ ಸ್ಥಳದಲ್ಲಿ ಜಲ ಲಭ್ಯತೆ ಖಾತರಿ ಪಡಿಸಲು ಕೇಂದ್ರ ಸರಕಾರ ಯೋಜನೆ ಜಾರಿಗೊಳಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದರು. ಅವರು ಶನಿವಾರ ಕಾಸರಗೋಡು ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರ (ಸಿಪಿಸಿಆರ್ ಐ)ನ ಶತಮಾನೋತ್ಸವದ ಅಂಗಗವಾಗಿ ತೆಂಗು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಗಾರ ಹಾಗೂ ಕಿಸಾನ್ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಳೆ ಕೊರತೆಯಿಂದ ನೀರಿನ ಲಭ್ಯತೆ ಕುಸಿದಿದೆ. ಮುಂದಿನ ದಿನಗಳಲ್ಲಿ ಈಗ ಬ್ಯಾ೦ಕ್, ಎಟಿಎಂ ಮುಂದೆ ಸರದಿ ಸಾಲಿನಂತೆ ಜನರು ನೀರಿಗಾಗಿ ಕ್ಯೂ ನಿಲ್ಲುವ ಪರಿಸ್ಥಿತಿ ಉಂಟಾಗಲಿದೆ. ಇದರಿಂದ ನೀರಿನ ಸಂಗ್ರಹ, ಮಳೆ ನೀರು ಭೂಮಿಗೆ ಇಂಗುವಂತಹ ಯೋಜನೆ ಅಗತ್ಯ ಎಂದರು.
ಕೃಷಿಕರಿಗೆ ಒದಗಿಸಿರುವ ಆರೋಗ್ಯ ಕಾರ್ಡ್ ಎಲ್ಲಾ ರೈತರಿಗೂ ತಲುಪಬೇಕು, ಕೇರಳದಲ್ಲಿ ೭.೦೫ ಲಕ್ಷ ಆರೋಗ್ಯ ಕಾರ್ಡ್ ರೈತರಿಗೆ ನೀಡುವ ಗುರಿ ಇತ್ತು. ಆದರೆ ೧.೩೩ ಲಕ್ಷ ಮಂದಿಗೆ ಮಾತ್ರ ಇದುವರೆಗೂ ಕಾರ್ಡ್ ವಿತರಿಸಲು ಸಾಧ್ಯವಾಗಿದೆ. ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುವ ಅನುದಾನ ಮತ್ತು ಸವಲತ್ತನ್ನು ಅರ್ಹರಿಗೆ ತಲುಪಿಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ತೆಂಗು ಉತ್ಪಾದನೆ ಹೆಚ್ಚುತ್ತಾ ಸಾಗುತ್ತಿದೆ. ಹಾಲು ಕ್ರಾಂತಿಯಂತೆ ನೀಲಿ ಕ್ರಾಂತಿ (ಮೀನು)ಗೂ ಕೇಂದ್ರ ಸರಕಾರ ಮುಂದೆ ಬಂದಿದೆ. ದೇಶ ಚಂದ್ರಯಾನ, ಮಂಗಳಯಾನಕ್ಕೆ ತೆರಳುವಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಶೇಕಡಾ ೮೦ರಷ್ಟು ಪ್ರದೇಶ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ಇದರಿಂದ ಕೇಂದ್ರದ ಯೋಜನೆಗಳು ತುರ್ತಾಗಿ ಜಾರಿಗೆ ತರುವುದು ಅಗತ್ಯ ಎಂದು ಸಚಿವರು ಹೇಳಿದರು.
ಸಿಪಿಸಿಆರ್ ಐ ನ ಶತಮಾನೋತ್ಸವ ಕುರಿತ ಹಾಗೂ ಹಲವು ಸಾಧನೆ ಕುರಿತ ಪುಸ್ತಕ ಮತ್ತು ತೆಂಗಿನ ಉತ್ಪನ್ನಗಳನ್ನು ಸಚಿವರು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್, ಉತ್ತರಕನ್ನಡ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ಕಾಸರಗೋಡು ಪಿ ಕರುಣಾಕರನ್, ಶಾಸಕ ಎನ್. ಎ ನೆಲ್ಲಿಕುನ್ನು, ಕ್ಯಾ೦ಪ್ಕೋ ಅಧ್ಯಕ್ಪ ಎಸ್.ಆರ್ ಸತೀಶ್ಚಂದ್ರ, ಸಿಪಿಸಿಆರ್ ಐ ನಿರ್ದೇಶಕ ಡಾ. ಪಿ. ಚೌಡಪ್ಪ, ಹಿರಿಯ ವಿಜ್ಞಾನಿ ಡಾ. ಮುರಳೀಧರ್, ಕೆ .ಪಿ ಚಂದ್ರನ್, ಸಿಪಿಸಿಆರ್ ಐ ಡೈರಕ್ಟರ್ ಜನರಲ್ ಡಾ. ನಿಲೋಚನ್ ಮಹಾಪಾತ್ರ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ. ಎ ಜಲೀಲ್, ಕೃಷಿ ಅಧಿಕಾರಿ ವಿ. ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಿಸಾನ್ ಮೇಳದ ಅಂಗವಾಗಿ ಶನಿವಾರದಿಂದ ೧೩ರ ತನಕ ರಾಷ್ಟ್ರ ಮಟ್ಟದ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು ಗಮನಸೆಳೆಯುತ್ತಿದೆ.