ಸುಳ್ಯ: ಅರೆಭಾಷೆ ಮತ್ತು ಸಂಸ್ಕೃತಿ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅದು ಮನುಷ್ಯ ಬದುಕಿನ ಪ್ರೀತಿ ಮತ್ತು ವಿಶ್ವಾಸದ ಪ್ರತೀಕ. ಸಾವಿಲ್ಲದ ರೀತಿಯಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಆಶ್ರಯದಲ್ಲಿ ಸುಳ್ಯದ ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ಆರಂಭಗೊಂಡ ಎರಡು ದಿನಗಳ ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅರೆಭಾಷೆ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ನಾಡಿಗೆ ಅದ್ಭುತವಾದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನೀಡಿರುವುದು ಅರೆಭಾಷೆಯ ಹೆಗ್ಗಳಿಕೆ. ಪಶ್ಚಿಮ ಘಟ್ಟದ ತಪ್ಪಲಲ್ಲಿ ಹುಟ್ಟಿ ಬೆಳೆದ ಈ ಭಾಷೆಯು ಪರಿಸರದ ಪರಿಮಳವನ್ನೂ, ಮನುಷ್ಯ ಸಹಜ ಪ್ರೀತಿಯನ್ನೂ ಬಿತ್ತಿದ, ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಮೊಳಗಿಸಿದ, ಆದರ್ಶದ ಚಿಂತನೆಯನ್ನು ಮತ್ತು ವಿಫುಲವಾದ ಸಾಹಿತಿಕ ಸಮೃದ್ಧಿಯನ್ನು ಹೊಂದಿದೆ ಭಾಷೆ. ಹಿಂದೆ ಈ ಭಾಷೆಗೆ ಸೂಕ್ತವಾದ ಸ್ಥಾನ ಮಾನಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಅಕಾಡೆಮಿ ಸ್ಥಾಪನೆಯಾಗುವ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಮಹತ್ವ ದೇಶಕ್ಕೆ ಪಸರಿಸುವಂತಾಗಿದೆ. ತಾನು ಮುಖ್ಯಮಂತ್ರಿಯಾಗಿದ್ದಾಗ ಕೇವಲ 48 ಘಂಟೆಯಲ್ಲಿ ಅಕಾಡೆಮಿ ಸ್ಥಾಪನೆಯ ಎಲ್ಲಾ ಕೆಲಸಗಳನ್ನೂ ಪೂರ್ತಿ ಮಾಡಿ ಆದೇಶ ಹೊರಡಿಸಿದ್ದೇನೆ ಎಂದು ಅವರು ಹೇಳಿದರು.
ಎಲ್ಲಾ ಭಾಷೆಗಳನ್ನೂ ಉಳಿಸಿ ಬೆಳೆಸಲು ಸರ್ಕಾರ ಬದ್ಧ: ಎಂ.ಕೃಷ್ಣಪ್ಪ
ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯ ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ ಎಲ್ಲಾ ಭಾಷೆ ಮತ್ತು ಸಂಸ್ಕೃತಿಯನ್ನೂ ಉಳಿಸಿ ಬೆಳೆಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನೂ ನಡೆಸಲಿದೆ ಎಂದು ಹೇಳಿದರು. ಅಕಾಡೆಮಿಗಳು ನಡೆಸುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳ ಮೂಲಕ ಜನರು ಇನ್ನಷ್ಟು ಹತ್ತಿರವಾಗಬೇಕು, ಪ್ರೀತಿ ವಿಶ್ವಾಸ ವೃದ್ಧಿಸಬೇಕು ಎಂದ ಅವರು ಅರೆಭಾಷೆ ಮಾತನಾಡುವ ಸಮುದಾಯದ ಜನರು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಬದ್ಧತೆಗೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸುಳ್ಯ ಶಾಸಕ ಎಸ್.ಅಂಗಾರ, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಚಾಮರಾಜ ಕ್ಷೇತ್ರದ ಶಾಸಕ ವಾಸು ಮಾತನಾಡಿದರು. ಹಾವೇರಿಯ ಕರ್ನಾಟಕ ಜಾನಪದ ವಿವಿಯ ಉಪಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯರಾದ ಆಶಾ ತಿಮ್ಮಪ್ಪ, ಹರೀಶ್ ಕಂಜಿಪಿಲಿ, ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ಉಬರಡ್ಕ ಗ್ರಾ.ಪಂ.ಅಧ್ಯಕ್ಷ ಹರೀಶ್ ಉಬರಡ್ಕ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ದ.ಕ.ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಅತಿಥಿಗಳಾಗಿದ್ದರು. ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಚಂದ್ರಾ ಕೋಲ್ಚಾರ್, ವಿಶ್ವ ಕನ್ನಡ ಸಮ್ಮೇಳನದ ಸಮನ್ವಯ ಅಧಿಕಾರಿ ಎಸ್.ಐ.ಬಾವಿಕಟ್ಟೆ ಸಮಾವೇಶದ ನಿರ್ದೇಶಕರಾದ ಡಾ.ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ಅಕಾಡೆಮಿ ಸದಸ್ಯರಾದ ಸದಾನಂದ ಮಾವಜಿ, ಬಿ.ಸಿ.ವಸಂತ, ಡಾ.ಪೂವಪ್ಪ ಕಣಿಯೂರು, ಮದುವೆಗದ್ದೆ ಭೋಜಪ್ಪ ಗೌಡ, ಮೋಹನ್ ಸೋನ, ಯಶವಂತ ಕುಡೆಕಲ್ಲು, ಪಿ.ಎಸ್.ಕಾರ್ಯಪ್ಪ, ಡಾ.ಕೋರನ ಸರಸ್ವತಿ, ಮಂದ್ರಿರ ಜಿ.ಮೋಹನ್ದಾಸ್, ಅಣ್ಣಾಜಿ ಗೌಡ ಪೈಲೂರು ಮತ್ತಿತರರು ಉಪಸ್ಥಿತರಿದ್ದರು.
ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಸ್ತಾವನೆಗೈದರು. ಎ.ವಿ.ತೀರ್ಥರಾಮ ವಂದಿಸಿದರು. ಕೆ.ಟಿ.ವಿಶ್ವನಾಥ, ಶಶಿಧರ ಪಳಂಗಾಯ ನಿರೂಪಿಸಿದರು.
ಮೂರು ಪುಸ್ತಕ ಬಿಡುಗೆಡೆ:
ಎಂ.ಜಿ.ಕಾವೇರಮ್ಮ ರಚಿಸಿದ ‘ನೆನಪುಗಳ ರಂಗೋಲಿ’, ಉದಯಕುಮಾರಿ ರಚಿಸಿದ ಹೊಸ ಬದುಕು ಮತ್ತು ಜಯಮ್ಮ ಚೆಟ್ಟಿಮಡ ರಚಿಸಿದ ಅರ್ಧ ಹಾಳೆಗಳು ಎಂಬ ಅರೆಭಾಷೆ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಗೀತಾ ಮೋಂಟಡ್ಕ ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಾದ ಡಿ.ವಿ.ಸದಾನಂದ ಗೌಡ ಮತ್ತು ಕೆ.ಜಿ.ಬೋಪಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಧ್ವಜಾರೋಹಣಗೈದರು. ಪ್ರಾಚ್ಯ ವಸ್ತುಗಳ ಪ್ರದರ್ಶನವನ್ನು ನಿತ್ಯಾನಂದ ಮುಂಡೋಡಿ ಮತ್ತು ವಸ್ತು ಪ್ರದರ್ಶನವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಸಮ್ಮೇಳನಕ್ಕೆ ಮುನ್ನ ಅರೆಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆ ಅನಾವರಣಗೊಂಡ ಆಕರ್ಷಕ ಮೆರವಣಿಗೆ ನಡೆಯಿತು.