ಕುಂದಾಪುರ: ಇಲ್ಲಿನ ಗುರುಕುಲ ಪ.ಪೂ.ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ, ವಕೀಲರ ಸಂಘ, ಕುಂದಾಪುರ ಅಭಿಯೋಗ ಇಲಾಖೆ ಕುಂದಾಪುರ ಹಾಗೂ ರೋಟರಿ ಮಿಡ್ಟೌನ್ ಕುಂದಾಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರಾಜಶೇಖರ.ವಿ. ಪಾಟೀಲ್ ಮಾನವ ಹಕ್ಕುಗಳ ದಿನಾಚರಣೆಯ ಚರಿತ್ರೆ ಹಾಗೂ ಔಚಿತ್ಯವನ್ನು ವಿವರಿಸಿ, ಮಕ್ಕಳಲ್ಲಿ ಧನಾತ್ಮಕ ಹಾಗೂ ಆರೋಗ್ಯಕರ ಪೈಪೋಟಿ ಬೆಳೆಸಬೇಕು ಹಾಗೂ 14 ವಯಸ್ಸಿಗಿಂತ ಕೆಳಗಿನ ಮಕ್ಕಳಿಗೆ ಅಂತರ್ಜಾಲ ಹಾಗೂ ಮೊಬೈಲ್ ಬಳಕೆಯ ನಿಷೇಧತೆ ತ್ವರಿತ ಅವಶ್ಯಕತೆಯಿದೆ ಎಂದರು. ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ.ರವೀಶ್ಚಂದ್ರ ಶೆಟ್ಟಿ ರವರು ಮಾನವ ಹಕ್ಕುಗಳ ಅರಿವಿನ ಅವಶ್ಯಕತೆಯನ್ನು ವಿವರಿಸಿದರು.
ಗೌರವಾನ್ವಿತ ಅತಿಥಿಯ ಭಾಷಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ.ಶ್ರೀನಿವಾಸ ಸುವರ್ಣರವರು ಸಂವಿಧಾನವು ಜೀವಿಸುವ ಹಕ್ಕಿಗೆ ಹೆಚ್ಚಿನ ಶಕ್ತಿ ನೀಡಿದೆ ಹಾಗೂ ‘ ಜೀವಿಸಿ ಹಾಗೂ ಜೀವಿಸಲು ಬಿಡಿ’ ನಿಯಮವನ್ನು ಪಾಲಿಸಲು ಕರೆ ಕೊಟ್ಟರು. ಮತ್ತೋರ್ವ ಗೌರವಾನ್ವಿತ ಅತಿಥಿ, ರೋಟರಿ ಮಿಡ್ಟೌನ್ ಅಧ್ಯಕ್ಷರಾದ ಶ್ರೀಯುತ ಬಾಲಕೃಷ್ಣ ಶೆಟ್ಟಿಯವರು ಮಾನವ ಹಕ್ಕುಗಳ ತಿಳುವಳಿಕೆ ನಮಗೆ ನಾವೇ ಆಯ್ಕೆ ಮಾಡಿದ ನಾಯಕರು ನಿರಂಕುಶಾಧಿಕಾರಿಗಳಾಗುವುದನ್ನು ತಪ್ಪಿಸಲು ಅವಶ್ಯಕ ಎಂದು ನುಡಿದರು.
ರೋಟರಿ ಮಿಡ್ಟೌನ್, ಕುಂದಾಪುರದ ಕಾರ್ಯದರ್ಶಿಗಳಾದ ರವಿರಾಜ್ ಶೆಟ್ಟಿರವರು ವಿದ್ಯಾರ್ಥಿಗಳು ತಮ್ಮ ದಾಖಲೆಗಳ ತಪ್ಪುಗಳನ್ನು ಸೂಕ್ತವಾಗಿ ಗಮನಿಸಿ, ತಿದ್ದುಪಡಿ ಮಾಡಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮವನ್ನು ಗುರುಕುಲ ಶಾಲೆಯ ವಿದ್ಯಾರ್ಥಿನಿ ಕುಮಾರಿ. ಅಕೇಶಿಯಾ ನಿರೂಪಿಸಿದರು. ಪ್ರಥಮ ಪಿ.ಯು. ವರ್ಗದ ವಿದ್ಯಾರ್ಥಿನಿ ಕುಮಾರಿ. ಪ್ರಥಾ ರಾವ್ ಸ್ವಾಗತಿಸಿದರು ಹಾಗೂ ಗುರುಕುಲ ಶಾಲಾ ಶಿಕ್ಷಕರಾದ ರಾಮಚಂದ್ರ ಹೆಬ್ಬಾರ್ ವಂದಿಸಿದರು.
ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಚೆನ್ನಬಸಪ್ಪ. ಬಿ, ಗುರುಕುಲ ಶಾಲೆಯ ಪ್ರಾಂಶುಪಾಲರಾದ ಶಾಯಿಜು.ಕೆ.ಆರ್.ನಾಯರ್, ಉಪಪ್ರಾಂಶುಪಾಲರಾದ ಸುನಂದಾ ಪಾಟೀಲ್, ಶಿಕ್ಷಕವರ್ಗದವರು ಉಪಸ್ಥಿತರಿದ್ದರು.