ಬಂಟ್ವಾಳ: ಜಿಲ್ಲಾ ಉಸ್ತುವಾರಿ ಸಚಿವರೇ, ನಿಮಗೆ ನಿಮ್ಮ ಪಾರ್ಟಿ, ಮಂತ್ರಿ ಪಟ್ಟ ಮಾತ್ರ ಮುಖ್ಯವಲ್ಲ, ಅದು ಹೋದರೆ ಮತ್ತೆ ಬರಬಹುದು, ಆದರೆ ಜೀವನದಿ ಬತ್ತಿ ಹೋದರೆ ಎಲ್ಲರೂ ಹೋದ ಹಾಗೆ. ನಿಮಗೆ ಧೈರ್ಯವಿದ್ದರೆ ನೇತ್ರಾವತಿಯ ಪರವಾಗಿ ಹೋರಾಟಕ್ಕೆ ಬನ್ನಿ ಹೀಗೆಂದು ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಸಚಿವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನೇತ್ರಾವತಿ, ಕುಮಾರಧಾರ, ಪಾಲ್ಗುಣಿ, ಶಾಂಭವಿ, ನಂದಿನಿ ನದಿಗಳ ಸಂರಕ್ಷಣೆಯ ದೃಷ್ಟಿಯಿಂದ ಪಂಚ ತೀರ್ಥ ಸಪ್ತ ಕ್ಷೇತ್ರದ ರಥಯಾತ್ರೆಯು ಇಂದು ಸಂಜೆ ಬಿ.ಸಿ.ರೋಡು ತಲುಪಿದ್ದು, ಇಲ್ಲಿನ ರಕ್ತೇಶ್ವರಿ ದೇವಸ್ಥಾನದ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಆವೇಶಭರಿತವಾಗಿ ಮಾತನಾಡಿದರು.
ಎತ್ತಿನಹೊಳೆ ಯೋಜನೆ ಎಂಬ ಅಣುಬಾಂಬನ್ನು ನಮಗೆ ಹಾಕಿದ್ದಾರೆ. ಇದರಿಂದ ನಿಧಾನಗತಿಯಲ್ಲಿ ಇಲ್ಲಿನ ಜೀವರಾಶಿಗಳಿಗೆ ಕಂಟಕವಾಗಿದೆ. ನೀರಿಗಾಗಿ ಹೋರಾಡ ಬೇಕು. ಇದು ಜಿಲ್ಲೆಯ 20 ಲಕ್ಷ ಜನರ ಭವಿಷ್ಯದ ಪ್ರಶ್ನೆ, ನೀರು ಉಳಿದರೆ ನಾವು ಉಳಿಯುತ್ತೇವೆ. ಜನವರಿ 26ರವರೆಗೆ ಸರಕಾರಕ್ಕೆ ಗಡುವು. ಆಮೇಲೆ ನಡೆಯುವ ಘಟನೆಗಳಿಗೆ ನಾವು ಹೊಣೆಗಾರರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಸರ್ಕಾರ ತುಳು ನಾಡು ಮತ್ತು ಮಲೆ ನಾಡನ್ನು ಸೇರಿಸಿ ಬಯಲು ನಾಡನ್ನಾಗಿ ಮಾಡುವ ಯೋಚನೆಯಲ್ಲಿದೆ ಈ ಹಿನ್ನೆಲೆಯಲ್ಲಿ ಜಾತಿ, ಮತ, ಬೇಧ ಮರೆತು ಒಗ್ಗಟ್ಟು ಸಾಮರಸ್ಯದಿಂದ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಯವರು ಮಾತನಾಡಿ, ಈ ನಮ್ಮ ಸರಕಾರ ಎಲ್ಲಾ ಭಾಗ್ಯ ಕೊಟ್ಟಿದೆ. ಆದರೆ ನಮ್ಮ ಜಿಲ್ಲೆಗೆ ಬರಡು ಭಾಗ್ಯ ನೀಡಿದೆ, ಉತ್ತರ ಪ್ರದೇಶದ ಮಹಾದೇವ್ ಸ್ವಾಮೀಜಿ ಉತ್ತರ ಪ್ರದೇಶದಲ್ಲಿ ನೀರಿಗಾಗಿ ಆಂದೋಲನ ನಡೆಯುತ್ತಿದೆ. ಆದರೆ ಇಲ್ಲಿ ನದಿಗಾಗಿ ಆಂದೋಲನ ನಡೆಯತ್ತಿದೆ ಎಂದರು.
ಮಾಣಿಲ ಮೋಹನದಾಸ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬದುಕಿಗಾಗಿ ನಮ್ಮ ಕೊಡುಗೆಯಾಗಿ ಉಳಿಯಬೇಕು. ನೀರಿಗೆ ಜಾತಿ ಇಲ್ಲ. ಇಲ್ಲಿ ಎಲ್ಲರೂ ಇದ್ದಾರೆ ಒಂದೇ ಮನಸ್ಸಿನಿಂದ ಹೋರಾಟವನ್ನು ಮುಂದುವರಿಸುವ ಎಂದರು.
ವಿಜಯ ಕುಮಾರ್ ಶೆಟ್ಟಿಯವರು ಉಸ್ತುವಾರಿ ಸಚಿವರು ಕೇವಲ ಕುರ್ಚಿಯ ಆಸೆಗಾಗಿ ಹೋರಾಟಕ್ಕೆ ಬರುವುದಿಲ್ಲ. ಕುರ್ಚಿಯ ಆಸೆ ಬಿಡಿ. ಈ ಹೋರಾಟಕ್ಕೆ ಬನ್ನಿ. ನಿಮ್ಮನ್ನು ಮಂತ್ರಿ ಪದವಿಯಿಂದ ತೆಗೆದರೆ ನಾವೆಲ್ಲಾ ಸೇರಿ ಮುಖ್ಯಮಂತ್ರಿಯವರ ಮನೆಯಲ್ಲಿ ಧರಣಿ ನಿಂತು ನಿಮ್ಮ ಕುರ್ಚಿಯನ್ನು ಉಳಿಸುತ್ತೇವೆ. ನೇತ್ರಾವತಿ ನದಿ ಉಳಿಸುವ ಹೋರಾಟಕ್ಕೆ ನಮ್ಮ ಜೊತೆ ಸೇರಲು ಮನಸ್ಸು ಮಾಡಿ ನಮ್ಮ ಜೊತೆ ಬನ್ನಿ ಎಂದು ತಿಳಿಸಿದರು.
ಎಲ್ಲಾ ಸ್ವಾಮೀಜಿಗಳು ರಥದಲ್ಲಿದ್ದ ಕಳಸಕ್ಕೆ ನೇತ್ರಾವತಿಯ ನೀರನ್ನು ಹಾಕಿದರು. ಸಂಸದ ನಳಿನ್ ಕುಮಾರ್, ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವದಾಸ್ ಶೆಟ್ಟಿ, ಜಿ.ಆನಂದ, ರುಕ್ಮಯ ಪೂಜಾರಿ, ರಾಮದಾಸ್ ಬಂಟ್ವಾಳ, ಸತ್ಯಜಿತ್ ಸುರತ್ಕಲ್, ಡಾ.ಅಣ್ಣಯ ಕುಲಾಲ್, ಶಕುಂತಳಾ ಜಿ.ಕೆ. ಭಟ್, ಪ್ರಕಾಶ್ ಅಂಚನ್, ಪುರುಷೋತ್ತಮ ಸಾಲ್ಯಾನ್, ಗೋಪಾಲ ಸುವರ್ಣ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ರಮಾನಂದ ರಾಯಿ, ಭಾಸ್ಕರ ಟೈಲರ್ ನೂರಾರು ಮಂದಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಭಾಕಾರ್ಯಕ್ರಮಕ್ಕೂ ಮೊದಲು ಬಿ.ಸಿ.ರೋಡು ವೃತ್ತದಿಂದ ರಥವನ್ನು ಕಲಶ ಕುಂಭದೊಂದಿಗೆ ಸ್ವಾಗತಿಸಿ ವಿವಿಧ ಸ್ತಬ್ದ ಗೊಂಬೆಗಳೊಂದಿಗೆ ರಕ್ತೇಶ್ವರಿ ದೇವಸ್ಥಾನದವರೆಗೆ ಬಂದು,
ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅತಿಥಿಗಳನ್ನು ಸ್ವಾಗತಿಸಿದರು. ಪಂಚತೀರ್ಥ ಸಮಿತಿಯ ಸಂಚಾಲಕ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.