ಉಳ್ಳಾಲ: ತಾಳ್ಮೆಯ ಜೀವನಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿದ್ದು, ಉಲೇಮಾಗಳ, ಹಿರಿಯರ ಮಾರ್ಗದರ್ಶನದಂತೆ ಪ್ರವಾದಿಯವರ ಸಂದೇಶವನ್ನು ಮೈಗೂಡಿಸಿಕೊಂಡು ಜೀವನವನ್ನು ಯಶಸ್ವಿಯಾಗಿಸಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ವಠಾರದಲ್ಲಿ ಸೋಮವಾರ ನಡೆದ ಪ್ರವಾದಿ ಮುಹಮ್ಮದ್ ಮುಸ್ತಾಫರ ಜನ್ಮ ದಿನದ ಆಚರಣೆ ಹಾಗೂ ಇದರ ಅಂಗವಾಗಿ ಉಳ್ಳಾಲದ ಕೋಟೆಪುರದಿಂದ ಒಂಭತ್ತುಕೆರೆ , ಮಾಸ್ತಿಕಟ್ಟೆ ಆಗಿ ದರ್ಗಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯುವಸಮುದಾಯ ದಾರಿ ತಪ್ಪದಂತೆ ಹಿರಿಯರು ಹೆಚ್ಚಿನ ಮಾರ್ಗದರ್ಶನ ಅಗತ್ಯ ಇರಬೇಕಿದೆ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಜತೆಗೆ ಯುವಸಮುದಾಯ ಮುನ್ನಡೆಯುವ ಅವಶ್ಯಕತೆ ಇದೆ ಎಂದರು.
ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಪ್ರವಾದಿಯವರ ಜಗತ್ತಿಗೆ ಸಾರಿದ ಸಂದೇಶದಂತೆ ಸಹೋದರತ್ವ ವಾತಾವರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಶಿಕ್ಷಣದಿಂದ ಮಾತ್ರ ಸಹೋದರತೆಯ ಭಾವನೆ ಮೂಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ದರ್ಗಾ ಸಮಿತಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿದೆ. ಉಳ್ಳಾಲ ವ್ಯಾಪ್ತಿಯ ಜನರಿಗಾಗಿ ಸೈಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೀಘ್ರವೇ ಆರೋಗ್ಯ ನಿಧಿ ಸ್ಥಾಪಿಸಲಾಗುವುದು. ಇದರ ಜತೆಗೆ ಕಾರ್ಯಕರ್ತರನ್ನು ಒಳಗೊಂಡ ತಂಡವನ್ನು ಪ್ರತಿ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಆಗಿ ನಿಯೋಜಿಸಲಾಗುವುದು ಎಂದರು.
ಸನಾತನ ಪ್ರತಿಷ್ಠೆಯಿಂದಾಗಿ ಕುಟುಂಬ ಪದ್ಧತಿಯನ್ನು ಮೆರಯವ ಕಾಲವಿದು . ಮನೆಯಲ್ಲಿ ಸೌಹಾರ್ದತೆ ಕೆಡಿಸುತ್ತಾ, ಸಮಾಜದ ಸೌಹಾರ್ದತೆಗೂ ಧಕ್ಕೆಯುಂಟಾಗುವ ಸ್ಥಿತಿ ಉದ್ಭವಿಸಿದೆ. ಸ್ವಾರ್ಥಕ್ಕಾಗಿ ಸಂಬಂಧಗಳನ್ನು ಕೆಡಹುವ ಕೃತ್ಯಗಳು ನಡೆಯುತ್ತಿದೆ. ಸಮುದಾಯದ ಯುವಕರು ನ್ಯಾಯಾಲಯದಲ್ಲಿರುವ ವ್ಯಾಜ್ಯಕ್ಕಾಗಿ ಸಂಪಾದನೆಯ ಹಣವನ್ನು ಅದಕ್ಕೇ ವ್ಯಯಿಸುವ ಸಂದರ್ಭ ಎದುರಾಗುತ್ತಿದೆ. ವರ್ಷಗಳ ಕಾಲ ನ್ಯಾಯಾಲಯದಲ್ಲಿ ಅಲೆದಾಡುವ ಬದಲು ಭವಿಷ್ಯದ ಚಿಂತನೆಯನ್ನು ಮುಂದಿಟ್ಟು ಪ್ರವಾದಿಯವರು ಜಗತ್ತಿಗೆ ಬೋಧಿಸಿದ ಸಂದೇಶದ ಅನುಸಾರ ನಡೆದು ಶಾಂತಿಯುತ ವಾತಾವರಣವನ್ನು ನೆಲೆ ಮಾಡಿ, ಇನ್ನೊಬ್ಬರಿಗೆ ಗೌರವ ನೀಡುವ ಮೂಲಕ ಬದುಕುವ ಪರಿಸರವನ್ನು ಯುವಸಮುದಾಯ ರೂಪಿಸಬೇಕಿದೆ ಎಂದರು.
ಸುಲೈಮಾನ್ ಸಖಾಫಿ ದುಆ ನೆರವೇರಿಸಿದರು. ಈ ವೇಳೆ ದರ್ಗಾ ಸಮಿತಿ ಉಪಾಧ್ಯಕ್ಷರುಗಳಾದ ಯು.ಕೆ.ಮೋನು, ಬಾವಾ ಮಹಮ್ಮದ್, ಕಾರ್ಯದರ್ಶಿ ಮಹಮ್ಮದ್ ತ್ವಾಹಾ, ಕೋಶಾಧಿಕಾರಿ ಯು.ಕೆ.ಇಲಿಯಾಸ್, ಆಡಿಟರ್ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯಿಲ್, ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ, ಸದಸ್ಯರುಗಳಾದ ಮುಸ್ತಾಫ, ಮಹಮ್ಮದ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.