ಬಂಟ್ವಾಳ: ನಿಯಂತ್ರಣ ತಪ್ಪಿದ ಬೈಕೊಂದು ಮೇಲ್ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬಿ.ಸಿ.ರೋಡಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ವರದೇಶ್(35) ಮೃತಪಟ್ಟ ಯುವಕ. ಇವರು ಪಾಣೆಮಂಗಳೂರಿನಿಂದ ಮಂಗಳೂರು ಕಡೆಗೆ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅತೀ ವೇಗವಾಗಿ ಬಂದ ಬೈಕ್ ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದು ಪರಿಣಾಮ ಬೈಕ್ ಚಲಾಯಿಸುತ್ತಿದ್ದ ವರದೇಶ್ ಸೇತುವೆಯ ಕೆಳ ಭಾಗಕ್ಕೆ ಎಸೆಯಲ್ಪಟ್ಟಿದ್ದಾರೆ ಎನ್ನಲಾಗಿದ್ದು ಗಂಭೀರ ಗಾಯಗೊಂಡ ಅವರನ್ನು ಪೊಲೀಸರು ಮಂಗಳೂರಿನ ಖಾಸಗಿ ಆಸ್ಪತ್ರೆ ರವಾನಿಸಿದ್ದರು. ಮಂಗಳವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿದೇಶದಲ್ಲಿ ಇಲೆಕ್ಟ್ರಿಕಲ್ ಉದ್ಯೋಗದಲ್ಲಿದ್ದ ವರದೇಶ್ ತಂದೆ ಮಾರಪ್ಪ ಪೂಜಾರಿ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಘಟನೆಯ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.