ಸುಳ್ಯ: ಸಂಸದರ ಆದರ್ಶ ಗ್ರಾಮವಾಗಿ ಅಯ್ಕೆಯಾಗಿರುವ ಬಳ್ಪ ಗ್ರಾಮವನ್ನು ಸದ್ಯದಲ್ಲಿಯೇ ಸಂಪೂರ್ಣ ನಗದು ರಹಿತ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತನ್ನ ಪ್ರಥಮ ಆದರ್ಶ ಗ್ರಾಮದಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದ್ದು ಸದ್ಯದಲ್ಲಿಯೇ ರಾಜ್ಯದ ಪ್ರಥಮ ನಗದುರಹಿತ ಗ್ರಾಮವಾಗಿ ಬಳ್ಪ ಮಾರ್ಪಾಡಾಗಲಿದೆ. ಗ್ರಾಮದಲ್ಲಿ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚಿಸಿ ಎಲ್ಲರಿಗೂ ಬ್ಯಾಂಕ್ ಖಾತೆಯನ್ನು ಮಾಡಿಸಲಾಗುವುದು. ಜನರಿಗೆ ಡೆಬಿಟ್ ಕಾರ್ಡ್, ರೂಪೇ ಕಾರ್ಡ್ ಬಳಕೆಯ ಮತ್ತು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ತಜ್ಞರ ತಂಡ ಗ್ರಾಮದ ಮನೆ ಮನೆಗೆ ತೆರಳಿ ಎಲ್ಲಾ ಜನರಿಗೂ ಆಧುನಿಕ ಬ್ಯಾಂಕಿಂಗ್ ಕುರಿತು ಮಾಹಿತಿ ಮತ್ತು ತರಬೇತಿಯನ್ನು ನೀಡಲಾಗುತ್ತಿದ್ದು, ಮುಂದಿನ ಹತ್ತು ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. 10 ದಿನದಲ್ಲಿ ಗ್ರಾಮವನ್ನು ಸಂಪೂರ್ಣ ನಗದು ರಹಿತ ಗ್ರಾಮವನ್ನಾಗಿ ಪರಿವರ್ತಿಸಲಾಗುವುದು ಎಂದು ಅವರು ಹೇಳಿದರು.