ಪುತ್ತೂರು: ಗಾಂಜ ಮಾರಾಟ ಮಾಡಲೆತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪುತ್ತೂರು ನಗರಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಎಸ್.ಐ ಒಮನ ಎನ್.ಕೆ ರವರ ನೇತೃತ್ವದ ಪೊಲೀಸರ ತಂಡ ಡಿ.15ರಂದು ಸಾಲ್ಮರ ಜಂಕ್ಷನ್ ನಲ್ಲಿ ಬಂಧಿಸಿ ಆತನ ಬಳಿಯಿದ್ದ ಗಾಂಜಾ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಡ್ನೂರು ಗ್ರಾಮದ ಮುರ ಶಾಂತಿನಗರ ದಿ. ಅಬ್ದುಲ್ ಖಾದರ್ ಅವರ ಪುತ್ರ ಮಹಮ್ಮದ್ ಅಶ್ರಫ್(37) ಬಂಧಿತ ಆರೋಪಿಯಾಗಿದ್ದಾರೆ.
ಡಿ.15ರಂದು ಕಾರೊಂದರಲ್ಲಿ ಬಂದ ವ್ಯಕ್ತಿಯೋರ್ವರು ಸಾಲ್ಮರ ಜಂಕ್ಷನ್ ನಲ್ಲಿ ಅಕ್ರಮವಾಗಿ ಗಾಂಜಾವನ್ನು ಕೈವಶವಿರಿಸಿ ಮಾರಾಟ ಮಾಡಲೆತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಅಲ್ಲಿದ್ದ ಓಮ್ನಿ (ಕೆಎ.21 ಪಿ.2713) ಕಾರನ್ನು ತಪಾಸಣೆ ನಡೆಸಿದಾಗ ಕಾರಿನೊಳಗೆ 500 ಗ್ರಾಮ ಗಾಂಜಾ ಪತ್ತೆಯಾಯಿತು. ಕೂಡಲೇ ಪೊಲೀಸರು ಕಾರಿನಲ್ಲಿದ್ದ ಮಹಮ್ಮದ್ ಅಶ್ರಫ್ ನನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ತೆಯಾದ ಗಾಂಜಾದ ಮೌಲ್ಯ 15000 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್.ಐ ಒಮನ ಎನ್.ಕೆ, ಪ್ರೊಬೆಷನರಿ ಎಸ್.ಐ ಮಂಜುನಾಥ ಸಿಬ್ಬಂದಿಗಳಾದ ಸ್ಕರಿಯ, ಕೃಷ್ಣಪ್ಪ, ರಾಧಾಕೃಷ್ಣ, ಪ್ರಶಾಂತ್ ಶೆಟ್ಟಿ, ಪ್ರಶಾಂತ್ ರೈ, ಮೋಹನ್ ಭಾಗವಹಿಸಿದ್ದಾರೆ.