ಸುಳ್ಯ: ಸಮೃದ್ಧ ಭಾರತ ಕಟ್ಟಲು ಯುವಶಕ್ತಿ ನೇತೃತ್ವ ವಹಿಸಬೇಕು. ದೇಶದ ಮತ್ತು ಸಮಾಜದ ರಕ್ಷಣೆ ಯುವಕರಿಂದ ಮಾತ್ರ ಸಾಧ್ಯ ಎಂದು ದ.ಕ.ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದ್ದಾರೆ.
ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನವೀಕರಣಗೊಂಡ ಜಾನಕಿ ಕುರುಂಜಿ ವೆಂಕಟ್ರಮಣ ಗೌಡ ರಂಗಮಂದಿರವನ್ನು ಲೋಕಾರ್ಪಣೆ ಮಾಡಿ `ಯುವಜನ ಹಬ್ಬವನ್ನು’ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಬಹು ದೊಡ್ಡ ಆಸ್ತಿಯಾದ ಯುವಜನತೆ ದಾರಿ ತಪ್ಪದಂತೆ ಸಂಘಟನೆಗಳು ಎಚ್ಚರ ವಹಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಕರು ಜೀವನವನ್ನು ಬೆಳಗಬೇಕು ಜೊತೆಗೆ ಮುಂದಿನ ಪೀಳಿಗೆಗೆ ಕಲೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಕೆಲಸವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ ಮಾತನಾಡಿ ಯುವಕರು ಸಾಮಾಜಿಕ ಸಾಮರಸ್ಯದ ಮೂಲಕ ದೇಶ ಕಟ್ಟಬೇಕು. ಸಂಸ್ಕೃತಿ, ಕಲೆ ಮತ್ತು ಭಾಷೆ ಉಳಿಯಲು ಯುವಜನ ಮೇಳಗಳು, ಯುವಜನ ಹಬ್ಬಗಳು ಪೂರಕ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ಸದಸ್ಯ ಕೆ.ಗೋಕುಲ್ದಾಸ್, ಉದ್ಯಮಿ ಉಮೇಶ್ ಮುಂಡೋಡಿ, ನಿವೃತ್ತ ಬಿಡಿಓ ಎಂ.ಮೀನಾಕ್ಷಿ ಗೌಡ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಮಜಿಕೋಡಿ, ಗ್ರಾಮ ಪಂಚಾಯಿತಿ ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಉಬರಡ್ಕ, ತಹಶೀಲ್ದಾರ್ ಎಂ.ಎಂ.ಗಣೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆರ್.ಮಧುಕುಮಾರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಯುವಜನ ಸಂಯುಕ್ತ ಮಂಡಳಿಯ ಪದಾಧಿಕಾರಿಗಳಾದ ಶೈಲೇಶ್ ಅಂಬೆಕಲ್ಲು, ಆರ್.ಕೆ.ಮಹಮ್ಮದ್, ದಿಲೀಪ್ ಬಾಬ್ಲುಬೆಟ್ಟು, ಶಿವಪ್ರಕಾಶ್ ಅಡ್ಡನಪಾರೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿ, ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಸ್ತಾವನೆಗೈದರು. ಮನಮೋಹನ ಬಳ್ಳಡ್ಕ ನಿರೂಪಿಸಿದರು.
ಆಕರ್ಷಕ ಮೆರವಣಿಗೆ- ಯುವಜನ ಹಬ್ಬ
ಸುಳ್ಯ: ದ.ಕ.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ. ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಹಾಗು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ ಎರಡು ದಿನಗಳ ಯುವಜನ ಮೇಳ, ಯುವಜನ ಹಬ್ಬ ಮತ್ತು ಕರಾವಳಿ ಉತ್ಸವದ ಅಂಗವಾಗಿ ಸುಳ್ಯ ನಗರದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು.
ಯುವಕ ಯುವತಿಯರ ಕಲಾತಂಡದೊಂದಿಗೆ ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಅನಾವರಣಗೊಂಡ ಆಕರ್ಷಕ ಮೆರವಣಿಗೆ ಮನಸೂರೆಗೊಂಡಿತು. ಯುವಜನ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿತು.
ದ.ಕ.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ. ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಹಾಗು ಯುವಜನ ಸಂಯುಕ್ತ ಮಂಡಳಿ ಇದರ ಆಶ್ರಯದಲ್ಲಿ ಸುಳ್ಯದಲ್ಲಿ ನಡೆಯುತ್ತಿರುವ ಎರಡು ದಿನಗಳ ಯುವಜನ ಮೇಳ, ಯುವಜನ ಹಬ್ಬ ಮತ್ತು ಕರಾವಳಿ ಉತ್ಸವದ ಅಂಗವಾಗಿ ಹೊರ ತಂದಿರುವ ಸ್ಮರಣೆ ಸಂಚಿಕೆಯನ್ನು ಉದ್ಯಮಿ ಉಮೇಶ್ ಮುಂಡೋಡಿ ಬಿಡುಗಡೆ ಮಾಡಿದರು.