ಕಾರ್ಕಳ: ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಕಾರ್ಕಳ ಗ್ರಾಮಾಂತರ ಎಸ್.ಐ ರಫೀಕ್ ಹಾಗೂ ವಕೀಲ ಮಣಿರಾಜ್ ಶೆಟ್ಟಿ ನಡುವೆ ವಾಗ್ವಾದ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡ ನೀಡಿದ ದೂರು ನಗರ ಠಾಣೆಯಲ್ಲಿ ದಾಖಲಾಗಿದೆ.
ಎಸ್.ಐಯಿಂದ ಬೆದರಿಕೆ ವಕೀಲ ಮಣಿರಾಜ್ ಶೆಟ್ಟಿ ಆರೋಪ:
ಡಿಸೆಂಬರ್ 17ರಂದು ಕಾರ್ಕಳ ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯದ ಅವರಣದಲ್ಲಿ ತನ್ನ ಕಕ್ಷಿದಾರನೊಬ್ಬನಲ್ಲಿ ಮಾತನಾಡಲು ಯತ್ನಿಸಿದಾಗ ತನಗೆ ಗ್ರಾಮಾಂತರ ಎಸ್ಐ ರಫೀಕ್ ಅವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಯೊಡ್ಡಿರುವುದಾಗಿ ವಕೀಲ ಮಣಿರಾಜ್ ಶೆಟ್ಟಿ ಆರೋಪಿಸಿದ್ದಾರೆ.
ಕಾರ್ಕಳ ಬಾರ್ ಅಸೋಸಿಯೇಶನ್ ನಲ್ಲಿ ಆಯೋಜಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಗಳಿಂದ ಎಸ್.ಐ ರಫೀಕ್ ಸುಲಿಗೆ ಮಾಡುತ್ತಿದ್ದರೆಂಬ ಆರೋಪವನ್ನು ಕೆಲ ದಿನಗಳ ಹಿಂದೆ ಬಿಜೆಪಿಯಲ್ಲಿ ಆಯೋಜಿಸಿ ಸುದ್ಧಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದೆ. ಅದನ್ನು ಮುಂದಿಟ್ಟು ನನ್ನ ವಿರುದ್ಧ ಹಗೆಸಾಧನೆಗೆ ಅವರು ಮುಂದಾಗಿದ್ದಾರೆ ಎಂದು ಈ ಸಂದರ್ಭಧಲ್ಲಿ ತಿಳಿಸಿದರು.
ಕಕ್ಷಿದಾರ ಯಾರು?
ರೌಡಿ ಅತ್ತೂರು ವಿಲಿಯಂ ಡಿಸೋಜಾನನ್ನು 2016 ಆಗಸ್ಟ್ 1ರ ಮಧ್ಯಾಹ್ನ ದೂಪದಕಟ್ಟೆ ಆಶಿಕ್ಬಾರ್ನ ಮುಂಭಾಗದಲ್ಲಿ ತಲವಾರಿನಿಂದ ಯದ್ವಾತದ್ವವಾಗಿ ಕಡಿದ ತಂಡವೊಂದು ಕೊಲೆಗೆ ಪ್ರಯತ್ನಿಸಿತು.
2014ರಲ್ಲಿ ದೂಪದಕಟ್ಟೆಯಲ್ಲಿ ಹರೀಶ್ ಪೂಜಾರಿಯ ಕೊಲೆಗೆ ರೌಡಿ ವಿಲಿಯಂ ಡಿಸೋಜಾ ಪ್ರಯತ್ನಿಸಿದ್ದನು. ಇದಕ್ಕೆ ಪ್ರತಿಕಾರ ತೀರಿಸಲು ಮುಂದಾದ ಹರೀಶ್ ಪೂಜಾರಿ ತನ್ನ ಸಹಚರರೊಂದಿಗೆ ಸೇರಿಕೊಂಡು ರೌಡಿ ವಿಲಿಯಂ ವಿರುದ್ಧ ಸೇಡು ತೀರಿಸಿಕೊಂಡಿದ್ದನು. ಆ ಸಂದರ್ಭದಲ್ಲಿ ಜೀವನ್ಮರಣದ ನಡುವೆ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಬದುಕುಳಿದಿದ್ದನು.
ಡಿಸೆಂಬರ್ 14ರಂದು ನ್ಯಾಯಾಲಯಕ್ಕೆ ಶರಣಾಗಿದ್ದ ಸಂದರ್ಭದಲ್ಲಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ನಡುವೆ ಆತನನ್ನು ಕರೆದೊಯ್ದ ಪೊಲೀಸರು ಗ್ರಾಮಾಂತರ ಠಾಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆಂಬ ಆರೋಪ ವಕೀಲ ಮಣಿರಾಜ ಶೆಟ್ಟಿಯವರದಾಗಿದೆ. ಡಿಸೆಂಬರ್ 16ರಂದು ಆರೋಪಿಯನ್ನು ಪೊಳಿಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಡಿಸೆಂಬರ್ 17ರಂದು ಮತ್ತೇ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಆ ವೇಳೆಗೆ ತನ್ನ ಕಕ್ಷಿದಾರನಲ್ಲಿ ಮಾತನಾಡಲು ಮುಂದಾದ ಮಣಿರಾಜ ಶೆಟ್ಟಿಯನ್ನು ಎಸ್ಐ ರಫೀಕ್ ಆಕ್ಷೇಪಿಸಿದ್ದರು.
ಕರ್ತವ್ಯಕ್ಕೆ ಅಡ್ಡಿ ವಕೀಲರಿಂದ ದೂರು: ವಕೀಲ ಮಣಿರಾಜ ಶೆಟ್ಟಿ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯ ಎಸ್.ಐ ರಫೀಕ್ ದೂರು ಸಲ್ಲಿಸಿದ್ದರೆಂಬ ಮಾಹಿತಿ ತಿಳಿದುಬಂದಿದೆ.
ವಕೀಲರ ಸಂಘದಿಂದ ತುರ್ತು ಸಭೆ: ನ್ಯಾಯಾಯಲದ ಆವರಣದಲ್ಲಿ ವಕೀಲ ಮಣಿರಾಜ ಶೆಟ್ಟಿ ಅವರನ್ನು ಅವಾಚ್ಯ ಶಬ್ದಗಳಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿರುವುದು ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕಿಯಾಗಿದೆ. ಕೂಡಲೇ ಎಸ್.ಐ ರಫೀಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವು ಸಂಘ ಕೈಗೊಂಡಿರುವ ಬಗ್ಗೆ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.