ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಕರಾವಳಿಯ ಸಂಸ್ಕೃತಿ, ಕಲೆ, ಆಚಾರ, ವಿಚಾರಗಳು ಅವನತಿಯತ್ತ ಸಾಗುವುದನ್ನು ನಿಲ್ಲಿಸಲು ಇಂತಹ ಉತ್ಸವಗಳು ಸಹಕಾರಿಯಾಗಿದೆ ಎಂದು ಬೆಳ್ತಂಗಡಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಜಿಲ್ಲಾಳಿತ, ದ.ಕ. ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ, ನಗರ ಪಂಚಾಯಿತಿ ಮೊದಲಾದ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕರಾವಳಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆ ಮೂಲಕ ಸಾಮರಸ್ಯವನ್ನು ಉಳಿಸಿಕೊಳ್ಳಬಹುದು. ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ನಮ್ಮ ಕಲೆ, ಸಂಸ್ಕೃತಿಯನ್ನು ಬೆಳೆಸುವಲ್ಲಿ ನಮ್ಮ ಪಾತ್ರ ಮಹತ್ತರವಾಗಿದೆ ಎಂದರು.
ನಗರ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಕರಾವಳಿ ಉತ್ಸವ ಹಿಂದೆ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿತ್ತು. ಈ ಬಾರಿ ತಾಲೂಕು ಮಟ್ಟದಲ್ಲಿ ಕರಾವಳಿ ಉತ್ಸವವನ್ನು ಮಾಡುತ್ತಿದೆ. ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲೂ ಆಯೋಜಿಸಿದ್ದಾರೆ. ಯುವ ಜನತೆ ಇದರ ಪ್ರಯೋಜನ ಪಡೆದುಕೊಂಡು ಸಾಮರಸ್ಯದ ಸಮಾಜ ನಿರ್ಮಾಣ ಮಾಡಬೇಕು ಎಂದರು.
ತಾಪಂ ಉಪಾಧ್ಯಕ್ಷೆ ವೇದಾವತಿ, ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇ ಸ್ವಾಮಿ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್ ನರೇಂದ್ರ ಸ್ವಾಗತಿಸಿದರು. ಬೆಳ್ತಂಗಡಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಸ್ತಾವಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ವಂದಿಸಿದರು. ಉಪನ್ಯಾಸಕಿ ಹೇಮಾವತಿ ಹಾಗೂ ಧನಂಜಯ ಕಾರ್ಯಕ್ರಮ ನಿರ್ವಹಿಸಿದರು.
ಶನಿವಾರ ನಡೆದ ಕರಾವಳಿ ಉತ್ಸವದಲ್ಲಿ ಬೆಳ್ತಂಗಡಿಯಿಂದ ಮಾರಿಗುಡಿ ಮೈದಾನದ ವರೆಗೆ ಮೆರವಣಿಗೆ ನಡೆಯಿತು. ಉತ್ಸವದಲ್ಲಿ ಸ್ಯಾಕ್ಸೋಪೋನ್ ವಾದನ, ಕುಂಬಾರಿಕೆ ಕಲಾ ಪ್ರದರ್ಶನ, ಆಟಿ ಕಳೆಂಜ ನೃತ್ಯ, ಕರಾವಳಿ ನೃತ್ಯ ವೈವಿಧ್ಯ, ಕಾವ್ಯ-ಗಾಯನ-ಕುಂಚ, ತುಳು ಜನಪದ ನೃತ್ಯ, ವೀರಗಾಸೆ, ಕರಂಗೋಲು, ನೃತ್ಯ ರೂಪಕ ನಡೆಯಿತು. ಕರಾವಳಿ ಉತ್ಸವದಲ್ಲಿ ವಿವಿಧ ಇಲಾಖೆಗಳ ಮಳಿಗೆಯನ್ನು ತೆರಯಲಾಗಿತ್ತು.