ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ಮಂಜಲ್ಪಾದೆಯ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪಕ್ಕದ ಆರು ಎಕ್ರೆ ಹಡೀಲು ಗದ್ದೆಯಲ್ಲಿ ತುಳುನಾಡು ಕೃಷಿಕ್ರಾಂತಿಯ ಅಂಗವಾಗಿ ಭತ್ತದ ಕೃಷಿಗೆ ಸೋಮವಾರ ಚಾಲನೆ ನೀಡಲಾಯಿತು.
ಇಲ್ಲಿನ ರವಿಮಂಜಲ್ಪಾದೆ, ಕುಶೇಷ ಅನ್ನಪ್ಪಾಡಿ, ಪುರಂದರ ಮಂಜಲ್ಪಾದೆ, ಯಶೋಧರ ಕೊಟ್ಟಾರಿ ಆಲಾಡಿ ಇವರ ಆರು ಎಕ್ರೆ ಹಡೀಲು ಗದ್ದೆಯಲ್ಲಿ ಭತ್ತದ ಕೃಷಿಗೆ ಬೀಜ ಬಿತ್ತನೆ ಮಾಡಲಾಯಿತು. ತುಳುನಾಡು ಕೃಷಿಕ್ರಾಂತಿಯ ಸ್ಥಾಪಕ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಮಾರ್ಗದರ್ಶನದಲ್ಲಿ, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಇವರ ಜಂಟಿ ಆಶ್ರಯದಲ್ಲಿ ಬೀಜ ಬಿತ್ತನೆ ನಡೆಯಿತು. ಈ ಸಂದರ್ಭದಲ್ಲಿ ರವಿ ಮಂಜಲ್ಪಾದೆಯವರು ಉಳುಮೆ ಗೈದ ಹಡೀಲು ಗದ್ದೆಗೆ ಬೀಜ ಬಿತ್ತನೆ ಗೈದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಅವರು, ಈಗಾಗಲೇ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದ ಜೀಣೋದ್ಧಾರ ಕಾರ್ಯದ ಜೊತೆಜೊತೆಗೆ ಹಡೀಲು ಗದ್ದೆಯಲ್ಲಿ ಭತ್ತದ ಕೃಷಿಯನ್ನು ಬೆಳೆಸುತ್ತಿರುವುದು ಉತ್ತಮ ಕಾರ್ಯ, ಋಷಿ ಸಂಸ್ಕೃತಿಯ ಜೊತೆಜೊತೆಗೆ ಕೃಷಿ ಸಂಸ್ಕೃತಿಯೂ ಬೆಳೆಯಬೇಕು, ಯಾವುದೇ ಜಮೀನನ್ನು ಖಾಲಿಬಿಡದೆ ಇಂಚಿಂಚು ಜಾಗದಲ್ಲೂ ಕೃಷಿ ಮಾಡುವಂತಾ ಮನೋಭಾವ ಬೆಳಸುವಂತೆ ಅವರು ಕರೆ ನೀಡಿದರು.
ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ರಾಜೇಶ್ ನಾಯ್ಕ್ ಅವರು ತುಳುನಾಡ ಕೃಷಿಕ್ರಾಂತಿಯ ಮೂಲಕ ಹಡೀಲು ಜಮೀನಿನಲ್ಲಿ ಕೃಷಿ ಬೆಳೆಸುತ್ತಿರುವ ಕಾರ್ಯ ಅಭಿನಂದನೀಯ ಎಂದರು. ಜಿಲ್ಲಾ ರೈತ ಸಂಘ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾ. ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುದೇಶ್ ಮಯ್ಯ, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ. ಇದಿನಬ್ಬ, ಮಾಜಿ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಮತ್ತಿತರರು ಉಪಸ್ಥಿತರಿದ್ದರು.