ಕಾರ್ಕಳ: ದೇಶ ವ್ಯಾಪ್ತಿ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಹಿನ್ನಲೆಯಲ್ಲಿ ನೋಟು ಅಮಾನ್ಯಗೊಂಡ ಬೆನ್ನಲ್ಲೆ ತಾಂಡವಾಡುತ್ತಿರುವ ಕಪ್ಪು ಹಣವನ್ನು ಬಿಳಿ ಮಾಡುವ ಜಾಲಕ್ಕೆ ಸಿಲುಕಿ ಯುವಕನೊಬ್ಬ ಅಮಾನುಷವಾಗಿ ಕೊಲೆಗೀಡಾದ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ನಿಂಜೂರು ಎಂಬಲ್ಲಿ ನಡೆದಿದ್ದು, ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗಾಗಲೇ ಪೊಲೀಸ್ ವೃತ್ತ ನಿರೀಕ್ಷಕ ಅಂತೋನಿ ಜಾನ್ ನಿದೇಶನದಂತೆ ಎಸ್ಐ ರವಿ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ. ಭದ್ರಾವತಿಯ ಮನ್ಸೂರ್ ಆಲಿ(37) ಮೃತಪಟ್ಟವರು. ಭದ್ರಾವತಿಯ ಮಹಮ್ಮದ್ ಫಯಾಜ್ (53) ಪಳ್ಳಿಯ ಪ್ರಶಾಂತ ಬಲ್ಲಾಳ್(47), ಪ್ರಮೋದ್ ಬಲ್ಲಾಳ್ (44) ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರು ವಿನಯಗೌಡ(30) ತಲೆಮರೆಸಿಕೊಂಡವನು.
ಭದ್ರಾವತಿಯ ಕೈಸರ್ ಖಾನ್ ಹಣ ವಂಚನೆ ಜಾಲದ ಸೂತ್ರಧಾರ. ಈತ ಮಹಮ್ಮದ್ ಫಯಾಜ್ನಿಂದ 2 ಲಕ್ಷ ಹಣವನ್ನು ಸಾಳರೂಪದಲ್ಲಿ ಪಡೆದು ಅದನ್ನು ಹಿಂತಿರುಗಿಸಲು ಅಸಾಧ್ಯವಾಗಿ ಪೇಚಿಗೆ ಸಿಲುಕಿದ್ದ. ಅದೇ ಸಂದರ್ಭದಲ್ಲಿ ನನ್ನ ಹಣವನ್ನು ಹಿಂತಿರುಗಿಸುವಂತೆ ಮಹಮ್ಮದ್ ಫಯಾಜ್ ಆಗ್ಗಿಂದಾಗೇ ಕೈಸರ್ ಖಾನ್ ಗೆ ಒತ್ತಾಯಿಸುತ್ತಿದ್ದನು. ಹಣ ದ್ವಿಗುಣಗೊಳಿಸುವ ಜಾಲ( ಕಪ್ಪುಹಣವನ್ನು ಬಿಳಿಗೊಳಿಸುವುದು)ವೊಂದನ್ನು ನಿರೂಪಿಸಿದ ಕೈಸರ್ಖಾನ್ ಅದಕ್ಕಾಗಿ ಸ್ನೇಹಿತರ ಮೂಲಕ ಭದ್ರಾವತಿ ಆರ್ ಟಿಒ ಮಧ್ಯವರ್ತಿ ಮನ್ಸೂರ್ ಆಲಿಯನ್ನು ಸಂಪರ್ಕಿಸಿದ್ದನು. ಈ ಎಲ್ಲಾ ಬೆಳವಣಿಗೆ ಬಗ್ಗೆ ಮಹಮ್ಮದ್ ಫಯಾಜ್ ಗೆ ಮಾಹಿತಿಯನ್ನು ನೀಡಿದ. ನೀನು ನೀಡಿದ ಹಣವನ್ನು ಬೇರೆ ವ್ಯಕ್ತಿಯಿಂದ ತೆಗೆಸಿಕೊಡುತ್ತೇನೆ. ಅದಕ್ಕಾಗಿ ಆ ವ್ಯಕ್ತಿಯಲ್ಲಿ ಹಣ ದ್ವಿಗುಣ( ಕಪ್ಪು ಹಣವನ್ನು ಬಿಳಿ ಮಾಡುವ)ದ ಕುರಿತು ಮಾತುಕತೆ ನಡೆಸಬೇಕು. ಅದಕ್ಕೆ ವೇದಿಕೆ ಸಿದ್ಧ ಪಡಿಸುವಂತೆ ಸೂಚನೆ, ಸಲಹೆ ನೀಡಿದ್ದನು. ಬೆಂಗಳೂರಿನಲ್ಲಿ ಇದ್ದ ಮಹಮ್ಮದ್ ಫಯಾಜ್ ಆನಂದ ಎಂಬಾತನ ಮೂಲಕ ಸಹೋದರರಾದ ಕಾರ್ಕಳ ಪಳ್ಳಿ ಗ್ರಾಮದ ನಿವಾಸಿಗಳಾದ ಪ್ರಶಾಂತ ಬಳ್ಳಾಲ್ ಹಾಗೂ ಪ್ರಮೋದ್ ಬಲ್ಲಾಳ್ ರನ್ನು ಸಂಪರ್ಕಿಸಿದ್ದರು. ಪ್ರಮೋದ್ ಬಲ್ಲಾಳ್ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾನೆ.
ವೇದಿಕೆ ಸಿದ್ಧ:
ನವಂಬರ್ 11ರಂದು ಮಹಮ್ಮದ್ ಫಯಾಜ್, ಕೈಸರ್ ಖಾನ್, ಮನ್ಸೂರ್ ಆಲಿ ಇವರು ಕಾರ್ಕಳಕ್ಕೆ ಅಗಮಿಸಿದ್ದಾರೆ. ಮಹಮ್ಮದ್ ಫಯಾಜ್ ಅನಂತಶಯನ ಬಳಿಕ ಪ್ರಕಾಶ್ ಲಾಡ್ಜ್ ನಲ್ಲಿ, ಉಳಿದ ಇಬ್ಬರು ಸುಹಾಗ್ ಲಾಡ್ಜ್ ನಲ್ಲಿ ವಾಸ್ತವ್ಯ ಇದ್ದರೆಂಬ ಮಾಹಿತಿಯೂ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
12ನೇ ತಾರೀಕಿಗೆ ಮಹಮ್ಮದ್ ಫಯಾಜ್ ನ ಮೂಲಕ ಉಳಿದ ಇಬ್ಬರು ಪಳ್ಳಿಯ ನಿಂಜೂರಿನ ಮನೆಯೊಂದಕ್ಕೆ ಹೋಗಿದ್ದಾರೆ. ಅಲ್ಲಿ ಪ್ರಶಾಂತ ಬಲ್ಲಾಳ್ ಹಾಗೂ ಆತನ ಸಹೋದರ ಪ್ರಮೋದ್ ಬಲ್ಲಾಲ್ ಅಲ್ಲಿರುತ್ತಾರೆ. ದುಡ್ಡಿನ ವಿಚಾರದಲ್ಲಿ ಲೋಕಾಭಿರಾಮ ಮಾತನಾಡುತ್ತಾರೆ. ಮಹಮ್ಮದ್ ಫಯಾಜ್ ಮಾತ್ರ ಆ ಸಂದರ್ಭದಲ್ಲಿ ಹಣವನ್ನು ಅಲ್ಲಿಗೆ ತಾರದೇ ಯಾರ ಗಮನ್ಕಕೂ ಬಾರದಂತೆ ಲಾಡ್ಜ್ ನಲ್ಲಿಯೇ ಇಟ್ಟು ಹೋಗುತ್ತಾನೆ. ಲಾಡ್ಜ್ ನ ಕೀಲಿಯನ್ನು ತನ್ನಲ್ಲಿ ಭದ್ರವಾಗಿರಿಸುತ್ತಾನೆ.
ಹೀಗಾಗಿ ಮರುದಿನ ಹಣದೊಂದಿಗೆ ಮತ್ತೇ ಅದೇ ಮನೆಗೆ ಆ ಮೂವರು ವ್ಯಕ್ತಿಗಳು ತೆರಳುತ್ತಾರೆ. ಪೂರ್ವ ನಿಯೋಜಿನದಂತೆ ಪ್ರಶಾಂತ ಬಲ್ಲಾಳ್ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ತೆರೆಮರೆಯಲ್ಲಿ ನಿಂತುಕೊಳ್ಳೂತ್ತಾನೆ. ಮನೆಯಂಗಳಕ್ಕೆ ತಲುಪುತ್ತಿದ್ದ ಮನ್ಸೂರ್ ಆಲಿಯ ಕೈ ಹಿಡಿದು ಎಳೆಯುತ್ತಾನೆ. ಜೊತೆಗಿದ್ದ ಕೈಸರ್ ಖಾನ್ ಅಪಾಯದ ಅರಿವಿನೊಂದಿಗೆ ಗಲಿಬಿಲಿಗೊಂಡು ಮನ್ಸೂರ್ ಆಲಿಯ ಹಣದ ಚೀಲವನ್ನು ಹಿಡಿದು ಅಲ್ಲಿಂದ ಓಡಿ ಪರಾರಿಯಾಗುತ್ತಾನೆ. ಈ ಎಲ್ಲಾ ಘಟನಾವಳಿಯಿಂದ ವಿಚಲಿತರಾದ ಪ್ರಶಾಂತ ಬಳ್ಳಾಲ್ ಹಾಗೂ ಪ್ರಮೋದ್ ಬಲ್ಲಾಳ್ ತನ್ನ ಮನೆ ಹಿಂಬದಿಯ ಕೋಣೆಯೊಂದಕ್ಕೆ ಮನ್ಸೂರ್ ಆಲಿಯನ್ನು ಎಳೆದೊಯ್ದು ಇಬ್ಬರು ಸೇರಿ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದರು. ದೊಣ್ಣೆಯ ಏಟಿಗೆ ಅದಾಗಲೇ ಮನ್ಸೂರ್ ಆಲಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ತಾವು ಎಸಗಿದ ಕೃತ್ಯ ಹೊರ ಪ್ರಪಂಚಕ್ಕೆ ಬಾರದಂತೆ ತಿಳಿಯದಿರಲಿ ಎಂದು ಗೌಪ್ಯವಾಗಿರಿಸಿ ಪಕ್ಕದ ಹಿತ್ತಲಿನಲ್ಲಿ ಹೂತು ಹಾಕಿ ಮತ್ತೇ ಬೆಂಗಳೂರಿಗೆ ಪರಾರಿಯಾಗಿದ್ದರು.
ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮೂವರು ಆರೋಪಿಗಳನ್ನು ಕಾರ್ಕಳ ಜೆಎಂಎಫಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದು, ಆರೋಪಿತರಿಗೆ ನ್ಯಾಯಾಂಗಬಂಧನ ವಿಧಿಸಲಾಗಿದೆ.