ಬಂಟ್ವಾಳ: ಎತ್ತಿನಹೊಳೆ ಯೋಜನೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ಗೃಹಕಛೇರಿ ಕೃಷ್ಣಾದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳವಾರ ದ.ಕ. ಜಿಲ್ಲೆಯ ತುಂಬೆಯಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭೆಯಲ್ಲಿ ಅರಣ್ಯ ಸಚಿವ ಬಿ.ರಮಾನಾಥ ರೈ, ಈ ವಿಚಾರ ತಿಳಿಸಿದರು. ಯೋಜನೆಗೆ ಸಂಬಂಧಿಸಿದ ಪ್ರದೇಶದ ಎಲ್ಲ ಶಾಸಕರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಇದರ ಜೊತೆ ಹೋರಾಟಗಾರರನ್ನೂ ಆಹ್ವಾನಿಸಲಾಗುವುದು. ಸಭೆಯಲ್ಲಿ ಯೋಜನೆಗೆ ಸಂಬಂಧಿಸಿದ ಸಾಧಕ, ಬಾಧಕಗಳನ್ನು ಚರ್ಚಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಈ ಸಭೆಯನ್ನು ಯಾಕೆ ಏರ್ಪಡಿಸಬಾರದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೈ, ಈ ಹಿಂದೆ ಅಧಿಕಾರಿಗಳು ಮಂಗಳೂರಿನಲ್ಲಿ ಸಭೆ ಮಾಡಿರುವುದಾಗಿ ತಿಳಿಸಿದರು. ಈ ಬಾರಿಯ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಸಹಿತ ಯೋಜನೆಗೆ ಸಂಬಂಧಿಸಿದ ಎಲ್ಲರೂ ಭಾಗವಹಿಸುವ ಕಾರಣ ಸ್ಪಷ್ಟ ತೀರ್ಮಾನ ದೊರಕುವುದು. ಯೋಜನೆ ವಿರೋಧಿಸಿ ಯಾವುದೇ ರಾಜಕೀಯವನ್ನು ಮಾಡಬಾರದು. ಬಿಜೆಪಿ ಜಿಲ್ಲಾ ಪಂಚಾಯಿತಿ ಚುನಾವಣಾ ಪ್ರಣಾಳಿಕೆಯಲ್ಲಿ ಎತ್ತಿನಹೊಳೆ ಯೋಜನೆ ಮಾಡಿಯೇ ಸಿದ್ಧ ಎಂದು ಪ್ರಕಟಿಸಿದ್ದು ಅವರಿಗೆ ಗೊತ್ತಿರಲಿ, ಆದರೂ ಮೆರವಣಿಗೆ ಮಾಡ್ತಾರೆ ಎಂದು ಸಚಿವರು ವ್ಯಂಗ್ಯವಾಡಿದರು.
ಈ ಕುರಿತು ಬಿಜೆಪಿ ಸದನದಲ್ಲಿ ನಿಲುವಳಿ ಸೂಚನೆ ಯಾಕೆ ಮಂಡಿಸುವುದಿಲ್ಲ, ಕೇವಲ ರಾಜಕೀಯ ಮಾಡುವುದಷ್ಟೇ ಅದರ ಉದ್ದೇಶ. ಹೋರಾಟಗಾರರೂ ಈ ವಿಷಯ ಅರಿತಿರಲಿ, ನಾನು ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ರೈ ತಿಳಿಸಿದರು.
ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಒದಗಿಸುವ ತುಂಬೆ ಯ ನೂತನ ವೆಂಟೆಡ್ ಡ್ಯಾಂ ನಲ್ಲಿ ನೀರು ಸಂಗ್ರಹಣೆ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನೀರು ಸಂಗ್ರಹಣೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳವಾರ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ದ.ಕ.ಇಂದಿನಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಲಿದೆ. ಇದರಿಂದ ಒಟ್ಟು 49.93 ಎಕರೆ ಭೂಮಿ ಮುಳುಗಡೆಯಾಗಿದ್ದು, ಇದರಲ್ಲಿ ಒಟ್ಟು 18 ರೈತರ 15 ಎಕರೆ ಖಾಸಗಿ ಭೂಮಿ ಯೂ ಸೇರಿದೆ ಎಂದರು.
ಈ ಹಿನ್ನೆಲೆಯಲ್ಲಿ 5 ಮೀಟರ್ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ವ್ಯಾಪ್ತಿಯ ರೈತರ ಸಭೆಯನ್ನು ಸಹಾಯಕ ಕಮೀಷನರ್, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಸಲಾಗಿದ್ದು, ಅವರೆಲ್ಲರ ಒಪ್ಪಿಗೆಯಂತೆ ವಾರ್ಷಿಕ ಬಾಡಿಗೆ ರೂಪದಲ್ಲಿ ಹಣ ಪಾವತಿಸಲಾಗುವುದು. ಹೀಗಾಗಿ 5 ಎಕರೆ ನೀರು ನಿಲ್ಲಿಸಲು ವ್ಯಾಪ್ತಿಯ ರೈತರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ, ಎರಡು ಮೂರು ದಿನಗಳಲ್ಲಿ ಈ ಬಗ್ಗೆ ರೈತರ ಜೊತೆ ಲಿಖಿತ ಒಪ್ಪಂದ ನಡೆಯಲಿದ್ದು, ಮಂಗಳವಾರದಿಂದಲೇ ತುಂಬೆ ವೆಂಟೆಡ್ ಡ್ಯಾಂ ನಲ್ಲಿ 5 ಮೀಟರ್ ನೀರು ಸಂಗ್ರಹವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಏಳು ಮೀಟರ್ ಎತ್ತರಕ್ಕೇರಿಸುವ ಅನಿವಾರ್ಯತೆ ಒದಗಿಬಂದರೆ ಅದರ ಮುಳುಗಡೆ ವ್ಯಾಪ್ತಿಯ ಸಂತ್ರಸ್ತರಿಗೂ ಸೂಕ್ತ ಪರಿಹಾರ ನೀಡಲಾಗುವುದು, ಈ ಬಗ್ಗೆ ಅನುಮಾನ ಬೇಡ ಎಂದವರು ಸ್ಪಷ್ಟಪಡಿಸಿದರು. 2007ರಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆ ರೂಪುಗೊಂಡಿದ್ದರೂ ಭೂಸ್ವಾಧೀನ ಪ್ರಕ್ರಿಯೆ, ಅನುದಾನ ಹಾಗೂ ಪರಿಹಾರ ಕುರಿತು ಯಾವುದೇ ರೀತಿಯ ಸ್ಪಷ್ಟ ರೂಪುರೇಷೆಗಳನ್ನು ಹಾಕಿಕೊಳ್ಳದಿರುವುದೇ ಅಣೆಕಟ್ಟು ನಿರ್ಮಾಣ ವಿಳಂಬವಾಗಲು ಕಾರಣ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ವೇಗ ಪಡೆದುಕೊಂಡಿದೆ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ತಾನು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿರುವುದನ್ನು ತಮ್ಮ ಮಾತಿನಲ್ಲಿ ಉಲ್ಲೇಖಿಸಿದ ಅವರು, ಈಗಿನ ಮಂಗಳೂರು ಪಾಲಿಕೆ ಆಡಳಿತವನ್ನು ಅಭಿನಂದಿಸಿದರು.
ಕಳೆದ ಬಾರಿ ಮಂಗಳೂರಿಗೆ ನೀರಿನ ಕೊರತೆ ಉಂಟಾಗಿತ್ತು. ಲಖ್ಯಾ ಡ್ಯಾಂನಿಂದಲೂ ನೀರನ್ನು ಮಂಗಳೂರಿಗೆ ಒದಗಿಸುವ ಪ್ರಮೇಯ ಬಂತು. ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ತಲೆದೋರಿತ್ತು. ಪ್ರತಿ ಭಾಗದಲ್ಲೂ ನಾನು ಸಭೆ ನಡೆಸಿ ಅದರ ಪರಿಹಾರ ಕೈಗೊಳ್ಳುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದರು.
ಎನ್ ರೂಟ್ ವಿಲೇಜ್ ಗಳಿಗೆ 10 ಕೋಟಿ ರೂಪಾಯಿ
ಎಲ್ಲರಿಗೂ ನೀರು ಪಡೆಯುವ ಹಕ್ಕು ಇದೆ. ಕುಡಿಯುವ ನೀರೊದಗಿಸುವ ಸಂಬಂಧ ಯಾವುದೇ ರಾಜಿ ಇಲ್ಲ. ಎಡಿಬಿ ಯೊಜನೆಯಡಿ ನದಿ ಹಾದುಹೋಗುವ ಗ್ರಾಮಗಳಿಗೆ (ಎನ್ ರೂಟ್ ವಿಲೇಜ್ ) ಕುಡಿಯುವ ನೀರು ಒದಗಿಸಲು ಹತ್ತು ಕೋಟಿ ರೂಪಾಯಿಗಳು ಮಂಜೂರಾಗಿದೆ. ಡ್ಯಾಂ ಇರುವ ಕಳ್ಳಿಗೆ ಗ್ರಾಮ ನನ್ನ ಗ್ರಾಮ, ಈ ಬಾರಿ ಅಣೆಕಟ್ಟಿನಿಂದ ಕಳ್ಳಿಗೆ ಗ್ರಾಮಕ್ಕೆ ನೀರು ಒದಗಿಸಿದರೆ ಸಮಸ್ಯೆ ಬಹುಪಾಲು ಪರಿಹಾರವಾಗುತ್ತದೆ ಎಂದು ರೈ ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಮಂಗಳೂರಿಗೆ ಸಾಗುವ ನೀರು ಸೋರಿಕೆಯಾಗುವುದನ್ನು ತಡೆಗಟ್ಟಿದರೆ, ಅಣೆಕಟ್ಟಿನಲ್ಲಿ ಈಗ ಸಂಗ್ರಹವಾಗಿರುವ ನೀರು ಸಾಕಾಗುತ್ತದೆ ಎಂದರು. ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ಮೇಯರ್ ಕೆ.ಹರಿನಾಥ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹೆಚ್ ಖಾದರ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿವರ್ಗ ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
477.61 ಎಕರೆ ಮುಳುಗಡೆ, 70 ಕೋಟಿ ರೂ ವೆಚ್ಚ
ಕಿಂಡಿ ಅಣೆಕಟ್ಟಿನಲ್ಲಿ ಏಳು ಮೀಟರ್ ಎತ್ತರಕ್ಕೆ ನೀರು ಶೇಖರಿಸಲು ಅವಕಾಶ. ಇದರ ಸಾಮರ್ಥ್ಯ 14730 ಮಿಲಿಯನ್ ಲೀಟರ್ ನೀರು ಸಂಗ್ರಹ. ಇದು ಮಂಗಳೂರು ನಗರದ ಬೇಸಿಗೆ ಕಾಲದ ಮೂರು ತಿಂಗಳ ನೀರಿನ ಬೇಡಿಕೆ. ಕಿಂಡಿ ಅಣೆಕಟ್ಟಿನಲ್ಲಿ ಈ ನೀರು ಸಂಗ್ರಹಿಸಿದರೆ, ಒಟ್ಟು 477.61 ಎಕರೆ ಜಮೀನು ಮುಳುಗಡೆಯಾಗಲಿದೆ. ಪ್ರಸ್ತುತ 5 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಲಾಗಿದೆ. 5 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದಾಗ, ಒಟ್ಟು 49.93 ಎಕರೆ ಜಮೀನು ಮುಳುಗಡೆಯಾಗಿದೆ.
ಸರಕಾರದ ಅನದಾನ ಶೇ.40,(30.2 ಕೋಟಿ ರೂ) ಹಣಕಾಸು ಸಂಸ್ಥೆಗಳಿಂದ ಶೇ.50ರಷ್ಟು ಸಾಲ (37.75 ಕೋಟಿ ರೂ ಸಾಲ), ಸ್ಥಳೀಯ ಸಂಸ್ಥೆ ವಂತಿಗೆ ಶೇ 10. (7.55 ಕೋಟಿ). ಕಿಂಡಿ ಅಣೆಕಟ್ಟಿನಲ್ಲಿ ಒಟ್ಟು 29 ಆಧಾರಸ್ತಂಭಗಳಿದ್ದು, 30 ಸಂಖ್ಯೆಯ ವಿದ್ಯುಚ್ಛಾಲಿತ ಗೇಟು ಅಳವಡಿಸಲಾಗಿದೆ.
ಪಶ್ಚಿಮವಾಹಿನಿ ಯೋಜನೆಯತ್ತ ಸಚಿವ ರಮಾನಾಥ ರೈ ಒಲವು
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಜೀವಜಲ ಉಳಿಸುವ ಸಲುವಾಗಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಪಶ್ಚಿಮಘಟ್ಟದ ಜೀವವೈವಿಧ್ಯ ಉಳಿಯಬೇಕಾದರೆ, ಪಶ್ಚಿಮವಾಹಿನಿ ಯೋಜನೆ ಜಾರಿಯಾಗಬೇಕು. ನದಿ ನೀರು ಸಂಗ್ರಹ ಹೆಚ್ಚಾಗುವುದರ ಜೊತೆಗೆ ಅಂತರ್ಜಲ ವೃದ್ಧಿಯೂ ಆಗುತ್ತದೆ ಎಂದು ರೈ ಹೇಳಿದರು. ಹಿಂದೆ ಕಸ್ತೂರಿ ರಂಗನ್, ಗಾಡ್ಗೀಳ್ ವರದಿಗೂ ಆಕ್ಷೇಪಗಳಿತ್ತು. ಆದರೆ ಜನರಿಗೆ ತೊಂದರೆಯಾಗದಂತೆ ಹಾಗೂ ಅರಣ್ಯ ಉಳಿಸುವತ್ತ ನಮ್ಮ ಚಿಂತನೆ ನಡೆದಿದೆ ಎಂದು ರೈ ಹೇಳಿದರು.