ಕುಂದಾಪುರ: ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಯೋಗ ತರಬೇತಿ, ಸಮಾಜಸೇವೆ ಮೊದಲಾದ ಕ್ಷೇತ್ರಗಳಿಗೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಮಹತ್ವದ ಕೊಡುಗೆ ನೀಡಿದ ಸಾಗರದ ವನಶ್ರೀ ವಸತಿ ವಿದ್ಯಾಲಯದ ಸಂಚಾಲಕ ಎಚ್.ಪಿ ಮಂಜಪ್ಪ ಅವರಿಗೆ 2016ನೇ ಸಾಲಿನ ಪ್ರತಿಷ್ಟಿತ ಬಿ. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರಕಟಿಸಲಾಗಿದೆ.
1955ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹೆಚ್.ಪಿ ಲಕ್ಷ್ಮೀನಾರಾಯಣಪ್ಪ ಮತ್ತು ತಾರಾವತಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಸಾಗರದ ಎಲ್. ಬಿ ಕಾಲೇಜಿನಲ್ಲಿ ಬಿ. ಕಾಂ ಪದವಿ ಪಡೆದರು. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹೊನ್ನೇಸರ ಹರಿಜನ ಕಾಲೋನಿಯ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುವ ಮೂಲಕ ತಮ್ಮ ಎಳವೆಯ ದಿನಗಳಲ್ಲಿಯೇ ದೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. 1991ರಲ್ಲಿ ಬಚ್ಚೋಡಿ ಗ್ರಾಮದಲ್ಲಿ ವನಶ್ರೀ ವಸತಿ ಶಾಲೆಯನ್ನು ಸ್ಥಾಪಿಸಿ ಕಳೆದ 25 ವರ್ಷಗಳ ಅವಧಿಯಲ್ಲಿ ಭಾರತದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಸಹಸ್ರಾರು ಮಕ್ಕಳಿಗೆ ಇಲ್ಲಿ ವಸತಿ ಸಹಿತ ಶಿಕ್ಷಣ ನೀಡುತ್ತಿದ್ದಾರೆ.
ರಾಜ್ಯದಾದ್ಯಂತ 20,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಸನಿವಾಸ ಶಿಬಿರವನ್ನು ಆಯೋಜಿಸಿಸುವ ಮೂಲಕ ಮಹಿಳಾ ಸಬಲೀಕರಣದ ವಿಶಿಷ್ಟ ಮಾದರಿಯನ್ನು ಪರಿಚಯಿಸಿದ್ದಾರೆ. ಗೃಹಪಾಠವಿಲ್ಲದ, ಪುಸ್ತಕದ ಹೊರೆ ಇಲ್ಲದ, ಸಮುದಾಯದೊಂದಿಗೆ ಹಲವು ಬಗೆಗಳಲ್ಲಿ ಬೆರೆತ ವನಶ್ರೀ ವಸತಿ ವಿದ್ಯಾಲಯ ರಾಷ್ಟ್ರಕ್ಕೇ ಮಾದರಿಯಾದುದು. ಇವರ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಸಿವಿಲ್ ಸೊಸೈಟಿ ಮತ್ತು ಅಜೀಂ ಪ್ರೇಮ್ಜಿ ಫೌಂಡೇಶನ್ ಜಂಟಿಯಾಗಿ ಪ್ರತಿಷ್ಟಿತ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಡಿಸೆಂಬರ್ 24ರಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಆವರಣದಲ್ಲಿ ನಡೆಯುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ 82ನೇ ಜನ್ಮದಿನ ಮತ್ತು ದತ್ತಿನಿಧಿ ವಿತರಣಾ ಸಮಾರಂಭದಲ್ಲಿ ಎಚ್. ಪಿ ಮಂಜಪ್ಪ ಅವರಿಗೆ ಬಿ. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂಬುದಾಗಿ ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತಿನಿಧಿ ಪ್ರತಿಷ್ಟಾನದ ಪ್ರಕಟಣೆ ತಿಳಿಸಿದೆ.