ಉಳ್ಳಾಲ: ಅಪ್ರಾಪ್ತೆಯನ್ನು ಅಕ್ರಮವಾಗಿ ಬಾಡಿಗೆ ಮನೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರಗೈದ ಮಧ್ಯವಯಸ್ಕನನ್ನು ಹಾಗೂ ಬಾಡಿಗೆ ಮನೆ ಒದಗಿಸಿದ ಮನೆ ಮಾಲೀಕನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಆಡಂಕುದ್ರು ಎಂಬಲ್ಲಿ ಬುಧವಾರ ನಡೆದಿದೆ.
ಅಪ್ರಾಪ್ತೆಯನ್ನು ನಿರಂತರವಾಗಿ ಅತ್ಯಾಚಾರಗೈದ ಬಗಂಬಿಲ ನಿವಾಸಿ ಡಾನ್ ಡಿಸೋಜ (42) ಹಾಗೂ ಮನೆ ಮಾಲೀಕ ಆಡಂಕುದ್ರು ನಿವಾಸಿ ಮೆಲ್ವಿನ್ ಬಂಧಿತರು. ಸುಮಾರು 10 ತಿಂಗಳುಗಳ ಹಿಂದೆ ನಗರದ ಹೊರವಲಯದ 15ರ ಹರೆಯದ ಬಾಲಕಿಯನ್ನು ಕರೆತಂದ ಡಾರ್ವಿನ್ ಆಡಂಕುದ್ರು ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟುಕೊಂಡಿದ್ದ. ಅಲ್ಲಿ ಬೆಳಗ್ಗಿನ ಸಮಯದಲ್ಲಿ ಬಂದು ಅತ್ಯಾಚಾರವಸೆಗಿ, ಬಳಿಕ ಅಲ್ಲೇ ಕೂಡಿಟ್ಟು ಮನೆಗೆ ತೆರಳುತ್ತಿದ್ದ. ಸುಮಾರು 10 ತಿಂಗಳುಗಳಿಂದ ಕೃತ್ಯ ಎಸಗುತ್ತಿದ್ದ ಕುರಿತ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದರಂತೆ ಬುಧವಾರ ಕಲ್ಲಾಪು ಆಡಂಕುದ್ರುವಿನ ಮನೆಗೆ ದಾಳಿ ನಡೆಸಿದ ಪೊಲೀಸರು ಹಾಗೂ ಅಧಿಕಾರಿಗಳು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ. ಬಳಿಕ ಡಾರ್ವಿನ್ ಮತ್ತು ಮೆಲ್ವಿನ್ ಇಬ್ಬರನ್ನು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಿತ್ರವೆಂದರೆ ಬಾಲಕಿಯನ್ನು ತಾಯಿಯ ಗಮನಕ್ಕೆ ತಂದು ಡಾರ್ವಿನ್ ಕರೆತಂದಿದ್ದ. ಅದರಂತೆ ಬಾಲಕಿಯ ತಾಯಿಯನ್ನೂ ವಿಚಾರಣೆಗೆಂದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಡಾರ್ವಿನ್ ಆಡಂಕುದ್ರುವಿನ ಮರಳು ವ್ಯಾಪಾರಿ ಹಾಗೂ ರೌಡಿಶೀಟರ್ ಅಶೋಕ್ ಡಿಸೋಜಾ ಎಂಬಾತನ ಸಹೋದರನಾಗಿದ್ದಾನೆ.
ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಎಸ್.ಐ ರಾಜೇಂದ್ರ.ಬಿ ಸಿಬ್ಬಂದಿಗಳಾದ ಮೋಹನ್, ಮಹೇಶ್, ರವಿಚಂದ್ರ, ರಾಜಾರಾಂ , ಪ್ರಶಾಂತ್ , ಜ್ಯೋತಿ ಭಾಗವಹಿಸಿದ್ದರು.