ಬಂಟ್ವಾಳ: “ತೋಟವಾ ನೋಡಿರಯ್ಯಾ.. ಸದ್ಗುರುಗಳ ಆಟವಾ ನೋಡಿರಯ್ಯಾ..” ಸಂತ ಶಿಶುನಾಳ ಷರೀಫರ ಹಾಡು ಬಂಟ್ವಾಳ ತಾಲೂಕಿನ ಕೆದ್ದಳಿಕೆ ಸರ್ಕಾರಿ ಹಿ.ಪ್ರಾ. ಶಾಲೆಯನ್ನೇ ನೋಡಿ ಹೇಳಿದಂತಿದೆ. ಶಾಲೆಯ ಸುತ್ತಮುತ್ತ ಬೆಳೆಯಾಲಾಗಿರುವ ಹೂತೋಟ, ತರಕಾರಿ ತೋಟ , ಹಣ್ಣಿನ ತೋಟ, ಕಂಗು, ಬಾಳೆ, ತೆಂಗಿನ ನೋಟ ಎಂತವರನ್ನೂ ಬೆರಗುಗೊಳಿಸುತ್ತದೆ.
ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಕೆದ್ದಳಿಕೆ ಶಾಲೆ ಹಲವು ವಿನೂತನ ಪ್ರಯೋಗಗಳಿಗೆ ಹೆಸರಾಗಿದ್ದು, ಶಾಲೆ ಹಾಗೂ ಶಾಲೆಯ ಸುತ್ತಮುತ್ತ ಕಂಡುಬರುವ ನೋಟವೇ ಈ ಶಾಲೆಯ ಹಿರಿಮೆಗೆ ಸಾಕ್ಷಿಯಂತಿದೆ. ಈ ಊರ ಗ್ರಾಮಸ್ಥರು, ಇಲ್ಲಿನ ಶಿಕ್ಷಕರು ಈ ಸರಕಾರಿ ಶಾಲೆಯನ್ನು ಮನೆಗಿಂತಲೂ ಹೆಚ್ಚು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದು, ಇಲ್ಲಿನ ಮುಖ್ಯ ಶಿಕ್ಷಕರ ಪ್ರೋತ್ಸಾಹ, ಸಹ ಶಿಕ್ಷಕ-ಶಿಕ್ಷಕಿಯರ ಶ್ರಮ, ಊರಿನವರ ಸಹಕಾರ, ಮಕ್ಕಳ ಉತ್ಸಾಹದಿಂದ ಬೆಳೆದು ನಿಂತ ಹಚ್ಚ ಹಸುರಾದ ಸುಂದರ ಕೈ ತೋಟ ಶಿಕ್ಷಣಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.
ಶಾಲೆಯ ಒಟ್ಟು ಒಂದೂವರೆ ಎಕ್ರೆ ಜಮೀನಿನಲ್ಲಿ ಸುಮಾರು ಅರ್ಧ ಎಕ್ರೆಯಷ್ಟು ಜಮೀನನ್ನು ತರಕಾರಿ ತೋಟ, ಹಣ್ಣಿನ ತೋಟಕ್ಕೆ ಮೀಸಲಿಟ್ಟಿರುವುದು ಇಲ್ಲಿನ ವಿಶೇಷ. ಊರಿನವರ ಸಹಕಾರದೊಂದಿಗೆ ಶಿಕ್ಷಕರು, ಪುಟಾಣಿ ಮಕ್ಕಳು ಸೇರಿಕೊಂಡು ತೊಂಡೆಕಾಯಿ, ಬಸಳೆ, ಸೋರೆಕಾಯಿ, ಅರಿವೆ ಸೊಪ್ಪು, ಸುವರ್ಣಗೆಡ್ಡೆ, ಪಪ್ಪಾಯಿ, ಬದನೆ ಗಿಡ, ಅಲಸಂಡೆ ಬೆಳೆಯಲಾಗುತ್ತಿದ್ದು, ತೊಂಡೆಕಾಯಿ ಹಾಗೂ ಅಲಸಂಡೆಯ ಚಪ್ಪರ ಗಮನಸೆಳೆಯುತ್ತಿದೆ. ವಾರಕ್ಕೆ ಒಂದೆರಡು ಬಾರಿ ಅಲಸಂಡೆ ಕೀಳಲಾಗುತ್ತಿದೆ. ಸುಮಾರು 30 ಕೆಜಿಯಷ್ಟು ಅಲಸಂಡೆ ಲಭ್ಯವಾಗುತ್ತಿದ್ದು, ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಸಾಂಬಾರಿಗೆ ಅಲಸಂಡೆಯನ್ನು ಬಳಸಲಾಗುತ್ತಿದೆ. ಇನ್ನೊಂದು ಚಪ್ಪರದಲ್ಲಿ ಬೆಳೆದಿರುವ ಬಸಳೆಯನ್ನು ಕೂಡಾ ವಾರಕ್ಕೊಮ್ಮೆ ಕತ್ತರಿಸಿ ಸಂಬಾರು ಮಾಡಲಾಗುತ್ತದೆ. ಹೀಗೆ ವಾರವಿಡೀ ಸಾವಯವದೂಟ ಸವಿಯುವ ಭಾಗ್ಯ ಇಲ್ಲಿನ ಮಕ್ಕಳಿಗೆ..
ಹಣ್ಣಿನ ತೋಟ..
ಕೇವಲ ತರಕಾರಿಯ ತೋಟ ಮಾತ್ರವಲ್ಲದೆ, ಅಪರೂಪದ ಅಂಜೂರ, ಲಕ್ಷ್ಮಣ ಫಲ, ರಂಬುಟನ್ ಸೇರಿದಂತೆ 28 ಜಾತಿಯ 150 ಗಿಡಗಳನ್ನು ಶಾಲೆಯ ಸುತ್ತಮುತ್ತ ವ್ಯವಸ್ಥಿತವಾಗಿ ನೆಡಲಾಗಿದೆ. 2014-15ನೇ ಸಾಲಿನಲ್ಲಿ ವಿಶೇಷ ಯೋಜನೆಯ ನಿರ್ಮಿಸಲಾಗಿರುವ ಹಣ್ಣುಗಳ ತೋಟ ಮಕ್ಕಳಲ್ಲಿ ಹಸಿರು ಪ್ರೀತಿ, ಗಿಡಗಳ ಪಾಲನೆ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಹಣ್ಣುಗಳ ತೋಟದ ಪರಿಕಲ್ಪನೆಯ ಮಗುವಿಗೊಂದು ಗಿಡ-ಮನೆಗೊಂದು ಮರ ಶೀರ್ಷಿಕೆಯಂತೆ ಶಾಲೆಯಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಲಾಗಿದ್ದು, ಅದೀಗ ಫಲಕೊಡುವ ಹಂತಕ್ಕೆ ಬೆಳೆಯುತ್ತಿದೆ.
ಸಮುದಾಯದ ಸಹಭಾಗಿತ್ವ
ಶಾಲೆಯ ಚಟುವಟಿಕೆಗಳಲ್ಲಿ ಹೆತ್ತವರನ್ನೂ ಸೇರಿಸಿಕೊಳ್ಳುವ ಸಮುದಾಯಾಭಿವೃದ್ಧಿಯ ವಿಶೇಷ ಕಲ್ಪನೆಯಂತೆ ಈ ಶಾಲೆಯ ಪ್ರತೀ ಆಗುಹೋಗುಗಳಲ್ಲಿ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರ ಭಾಗವಹಿಸುವಿಕೆ ಇದೆ. ಮಗುವಿನ ಹೆಸರಿನಲ್ಲಿರುವ ಗಿಡವನ್ನು ಹೆತ್ತವರು-ಮಗು ಸೇರಿ ಗುಂಡಿ ತೋಡಿ, ಮನೆಯಿಂದ ತಂದ ಗೊಬ್ಬರ ಹಾಕಿ ನೆಟ್ಟಿದ್ದಾರೆ. ದಿನವೊಂದಕ್ಕೆ ನಾಲ್ಕೈದು ಕುಟುಂಬಗಳು ಬಂದು ಶಾಲೆಯ ತೋಟವನ್ನು ಕಳೆಗಟ್ಟಿಸಿವೆ. ಮಾತ್ರವಲ್ಲದೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರೂ ಮಕ್ಕಳ ಪೋಷಕರ ಜೊತೆಗೆ ತೋಟ ರಚನೆಯಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿನ ನೆಟ್ಟಿರುವ ಪ್ರತಿ ಹಣ್ಣಿನ ಗಿಡಗಳಿಗೆ ಮಕ್ಕಳ, ಗಿಡಗಳ ಹೆಸರಿನ ನಾಮಫಲಕ ಅಳವಡಿಸಲಾಗಿದೆ.
ಇಲ್ಲಿನ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರಾಯಿ ಅವರ ನೇತೃತ್ವದಲ್ಲಿ ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯು ಹಣ್ಣಿನ ತೋಟದ ನಿರ್ಮಾಣದ ಹಿಂದಿರುವ ಶಕ್ತಿಗಳು. ಶಾಲೆ ಆರಂಭಕ್ಕೆ ಮೊದಲು ಮತ್ತು ರಜಾದಿನಗಳಲ್ಲೂ ಶಿಕ್ಷಕರು ಬಂದು ತೋಟದ ಪೋಷಣೆಯಲ್ಲಿ ಭಾಗಿಗಳಾಗುತ್ತಿದ್ದಾರೆ. ಮಕ್ಕಳ ಪೋಷಕರು ಗಿಡ ನೆಡುವಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ತಮ್ಮ ಮಕ್ಕಳ ಹೆಸರಿನಲ್ಲಿ ನೆಡಲಾದ ಗಿಡಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಜಿಪಂ ಸದಸ್ಯ ಬಿ. ಪದ್ಮಶೇಖರ ಜೈನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರದಾಸ್ ಮತ್ತು ಶಾಲಾಭಿವೃದ್ದಿ ಸಮಿತಿ ಸದಸ್ಯರ ಸಹಕಾರವಿದೆ.
ಯಾವ್ಯಾವ ಹಣ್ಣು..?
ಅಂಜೂರ, ಮುಸುಂಬಿ, ಕಿತ್ತಳೆ, ಮೇಣ ರಹಿತ ಹಲಸು, ಲಕ್ಷ್ಮಣ ಫಲ, ಸೀಬೆ, ಸೀತಾಫಲ, ದಾಳಿಂಬೆ, ಚಿಕ್ಕು, ಜಾಯಿಕಾಯಿ, ರಂಬುಟನ್, ಲಿಂಬೆ, ಚೆರಿ, ಲಿಚಿ, ಮಾವು, ಬುಗರಿ, ಜಂಬು ನೆರಳೆ, ಅನಾನಸು, ಪಪ್ಪಾಯಿ, ಸಹಿತ 28 ಬಗೆ.
ಯಾವ್ಯಾವ ತರಕಾರಿ?
ಅಲಸಂಡೆ, ತೊಂಡೆಕಾಯಿ, ಅರಿವೆ, ಬಸಳೆ, ಬದನೆ, ಸೋರೆಕಾಯಿ, ಸುವರ್ಣಗೆಡ್ಡೆ
ಸಾವಯವದೂಟ..!
ಶಾಲೆಯ ಜಾಗದಲ್ಲಿ ಮಾಡಿರುವ ಕೈ ತೋಟದಲ್ಲಿ ಬೆಳೆದ ತರಕಾರಿಗಳಿಂದ ಮಕ್ಕಳಿಗೆ ವಾರದ ಆರು ದಿನವೂ ಬೇರೆ ಬೇರೆ ರುಚಿಕರ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸಿದ್ಧಪಡಿಸಿ ಕೊಡಲಾಗುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯ ಅಂಗವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.
ಶಾಲೆಯ ಸಾಧನೆಯ ಹೆಜ್ಜೆಗಳು
ಸ್ವಚ್ಛತೆಗಾಗಿ ಜಿಲ್ಲಾ ಪ್ರಶಸ್ತಿ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳು, ಮೆಟ್ರಿಕ್ ಮೇಳ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದ ನಲಿಕಲಿ ಉತ್ಸವ, ‘ಸಿರಿದೊಂಪ’ ಚಪ್ಪರದ ಆಕರ್ಷಣೆ, ಹಚ್ಚ ಹಸಿರಿನ ವರ್ಣ ವೈವಿಧ್ಯದ ‘ಟೋಪೊಗ್ರಾಫಿ’, ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ, ಸಮುದಾಯದ ಸಕ್ರಿಯ ಭಾಗವಹಿಸುವಿಕೆ, ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಮಕ್ಕಳ ದಿಬ್ಬಣ, ಶಾಲೆಗಾಗಿ ಹೊರೆಕಾಣಿಕೆ ಮೆರವಣಿಗೆ, ಮಕ್ಕಳ ಸಾಹಿತ್ಯ ಸಮ್ಮೇಳನ, ಮುಖ್ಯ ಶಿಕ್ಷಕರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವಚ್ಛತೆಗೆ ಪ್ರಶಸ್ತಿ, ಮಕ್ಕಳ ಜಾಗೃತಿ ನಾಟಕ ಮೊದಲಾದವುಗಳು ಕೆದ್ದಳಿಕೆ ಶಾಲೆಯ ಸಾಧನೆಯ ಹಾದಿಯಲ್ಲಿನ ಕೆಲವು ಹೆಜ್ಜೆಗಳು.