ಮೂಡುಬಿದಿರೆ: ವಿದ್ಯಾರ್ಥಿಗಳಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಳ್ಳಿಗಳಿಂದ ಬರುವ ಮಕ್ಕಳಿಗೆ ಸೈಕಲ್ ವಿತರಣೆ ಮಾಡುವ ಮೂಲಕ ಸಹಕಾರ ಮಾಡಿದೆ. ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ 1500 ಸ್ಕಾಲರ್ಶಿಪ್ ನೀಡುತ್ತಿದೆ. ಈ ಯೋಜನೆಗಳ ಸದುಪಯೋಗವನ್ನು ಪಡೆಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗೆ ಶೇ 100 ಫಲಿತಾಂಶವನ್ನು ತರುವ ಗುರಿಯನ್ನು ಹೊಂದಬೇಕೆಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ನೀರ್ಕೆರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಗ್ರಾ.ಪಂ ಸದಸ್ಯ, ದಶಮಾನೋತ್ಸವ ಸಮಿತಿಯ ರಮೇಶ್ ಶೆಟ್ಟಿ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಸದಸ್ಯ ಗಿರೀಶ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ ಹೆಚ್.ಪಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.