ಕಾಸರಗೋಡು: ಕೊಲೆ ಯತ್ನ ಸೇರಿದಂತೆ ಆರಕ್ಕೂ ಅಧಿಕ ಪ್ರಕರಣಗಳ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದು, ಈತನ ವಿರುದ್ದದ ಗೂಂಡಾ ಕಾಯ್ದೆಯನ್ನು ದಾಖಲಿಸಿಕೊಳ್ಳಲಾಗಿದೆ.
ಬಂಧಿತನನ್ನು ತಾಯಲ೦ಗಾಡಿಯ ಆಬಿದ್ (೩೧) ಎಂದು ಗುರುತಿಸಲಾಗಿದೆ. ಒಂದು ಕೊಲೆಯತ್ನ, ಎರಡು ಹಲ್ಲೆ ಸೇರಿದಂತೆ ಆರರಷ್ಟು ಪ್ರಕರಣಗಳು ಈತನ ಮೇಲೆ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2011 ರಲ್ಲಿ ಹೊಸ ಬಸ್ಸು ನಿಲ್ದಾಣ ಸಮೀಪದ ಅಂಗಡಿಗೆ ನುಗ್ಗಿ ಸಿಬ್ಬಂದಿಯಾದ ಅನ್ವರ್ ಎಂಬಾತನ ಮೇಲೆ ಹಲ್ಲೆ, 2012 ರಲ್ಲಿ ಪ್ರೆಸ್ ಕ್ಲಬ್ ಜಂಕ್ಷನ್ ಸಮೀಪದ ಅಂಗಡಿಯೊಂದರಲ್ಲಿ ರಾಸಿಕ್ ಎಂಬ ಯುವಕನ ಮೇಲೆ ಇಂಟರ್ ಲಾಕ್ ನಿಂದ ಹಲ್ಲೆ ಪ್ರಕರಣ ಈತನ ಮೇಲೆ ದಾಖಲಾಗಿದೆ. ಹೊಸ ಬಸ್ಸು ನಿಲ್ದಾಣದ ಬಾರೊಂದರಲ್ಲಿ ನೌಕರ ಮಿಥುನ್ ಎಂಬಾತನನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ ಈತನ ಮೇಲಿದೆ. 2013 ರ ಚೆಂಗಳ ನಾಲ್ಕನೇ ಮೈಲ್ ನಲ್ಲಿ ಜ್ಯೋತಿಷ್ ಮತ್ತು ಸ್ನೇಹಿತ ಸುಧೀರ್ ಸಂಚರಿಸುತ್ತಿದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆಸಿ ಚೂರಿಯಿಂದ ಇರಿದ ಹಾಗೂ ನಗರದ ಏರ್ ಲೈನ್ಸ್ ಜಂಕ್ಷನ್ ನಲ್ಲಿ ಕೃಷ್ಣ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.