ಬೆಳ್ತಂಗಡಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಗುರುವಾರ ಮುಂಜಾನೆ ಕುವೆಟ್ಟು ಗ್ರಾಮದ ಗುರುವಾಯನಕರೆ ಹವ್ಯಕ ಭವನದ ಸನಿಹದ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಅವರ ಮನೆಗೆ ದಾಳಿ ನಡೆಸಿದ್ದು ಕೋಟ್ಯಾಂತರ ಮೌಲ್ಯದ ಆಸ್ತಿ, ಚಿನ್ನಾಭರಣ, ನಗದುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಆಗಿರುವ ಗೋವಿಂದ ನಾಯ್ಕ ಅವರು ವಾಸ್ತವ್ಯವಿರುವ ಮನೆಗೆ ಮಂಗಳೂರು ಎಸಿಬಿಯ ಎಸ್ಪಿ ಚೆನ್ನಬಸವಣ್ಣ, ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ಸ್ಪೆಕ್ಟರ್ ಗಳಾದ ಯೋಗಿಶ್ ಕುಮಾರ್, ದಿನಕರ ಶೆಟ್ಟಿ, ಚಿಕಮಗಳೂರು ಎಸಿಬಿ ಇನ್ಸ್ಪೆಕ್ಟರ್ ಮ್ಯಾಥ್ಯೂ, ಉಡುಪಿಯ ಇನ್ಸ್ಪೆಕ್ಟರ್ ಸತೀಶ್ ಮತ್ತು ರಂಗನಾಥ್ ಕಾರವಾರದ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದ ತಂಡ ದಾಳಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ದಾಳಿ ನಡೆಸಿತು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಲಂಚಾವತಾರ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಮನೆಯಲ್ಲಿ ಸುಮಾರು ಕೆ.ಜಿ.ಯಷ್ಟು ಚಿನ್ನ. ಲಕ್ಷಾಂತರ ರೂ. ಮೌಲ್ಯದ ಠೇವಣಿ ಪತ್ರಗಳು, ರೂ. 2000 ಮುಖ ಬೆಲೆಯ ಹೊಸ ನೋಟುಗಳು ಹಾಗೂ ರೂ. 50, 100 ನೋಟುಗಳು ಸೇರಿದಂತೆ 6 ಲಕ್ಷ ನಗದು ಪತ್ತೆಯಾಗಿದ್ದು ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ತಾಲೂಕು ಕಚೇರಿಯಲ್ಲಿರಬೇಕಾದ ಕೆಲವೊಂದು ಅತೀ ಮುಖ್ಯ ಕಡತಗಳೂ, ಮನೆಯಲ್ಲೇ ಇರುವುದೂ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಶಾಸಕರ ಶಿಫಾರಸ್ಸು ಪತ್ರಗಳೂ ಇವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೊಳಗಾದ ಗೋವಿಂದ ನಾಯ್ಕ ಅವರು ಈ ಹಿಂದೆ ವಿಟ್ಲದಲ್ಲಿ ಕಂದಾಯ ನಿರೀಕ್ಷಕರಾಗಿದ್ದರು. ಬಳಿಕ ಬೆಳ್ತಂಗಡಿ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಇದ್ದು 6 ತಿಂಗಳ ಹಿಂದೆ ಇವರ ನಿರ್ಲಕ್ಷದ ಕಾರ್ಯವೈಖರಿಯನ್ನು ಕಂಡು ಪುತ್ತೂರು ವಿಭಾಗಾಧಿಕಾರಿಯವರು ಅಮಾನತು ಮಾಡಿದ್ದರು. ಬಳಿಕ ಅವರು ಅಮಾನತನ್ನು ರದ್ದು ಪಡಿಸಿಕೊಂಡು ಮತ್ತೆ ಕೆಲಸಕ್ಕೆ ಬೆಳ್ತಂಗಡಿಯಲ್ಲೇ ಸೇರಿ ಪ್ರಸ್ತುತ ಪ್ರಥಮ ದರ್ಜೆ ಸಹಾಯಕ ಆಗಿ ಕರ್ತವ್ಯ ನಿರ್ವಹಿಸಿದ್ದು ಸಾರ್ವಜನಿಕರ ಕೆಲಸಕಾರ್ಯಗಳಲ್ಲಿ ಲಂಚ ಪಡೆಯುತ್ತಿದ್ದಾರೆ ಮತ್ತು ಅಕ್ರಮ ಸಂಪತ್ತನ್ನು ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಇವರ ಪತ್ನಿ ಸರಕಾರಿ ಉದ್ಯೋಗಿಯಾಗಿದ್ದು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯಾಗಿದ್ದಾರೆ. ನಾಯ್ಕ ಅವರು ತಾಲೂಕು ಕಚೇರಿಗೆ ಸಂಬಂದ ಪಟ್ಟ ನಾಗರಿಕರ ಯಾವುದೇ ಕೆಲಸವನ್ನು ಹಣ ನೀಡದೆ ಮಾಡುತ್ತಲೇ ಇಲ್ಲ. ಕಡು ಬಡವನಿಂದಲೂ ಇವರು ಹಣ ಪೀಕಿಸದೆ ಬಿಡುತ್ತಿರಲಿಲ್ಲ ಎಂಬುದು ಹಲವಾರು ವರ್ಷಗಳಿಂದ ಸಾರ್ವಜನಿಕರು ದೂರುತ್ತಿದ್ದರು.
ತನಿಖಾಧಿಕಾರಿಗಳು ವಿವಿಧ ಬ್ಯಾಂಕುಗಳಲ್ಲಿನ ಲಾಕರ್ ಗಳನ್ನು, ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಇರುವ ನಾಯ್ಕ ಅವರ ಖಾತೆಗಳನ್ನು ಪರಿಶೀಲಿಸುತ್ತಿದ್ದು ಸಂಪೂರ್ಣ ವಿವರ ಸಿಗಬೇಕಾಗಿದೆ.