ಕಾಸರಗೋಡು: ಮನೆಯಂಗಳದಲ್ಲಿರಿಸಲಾಗಿದ್ದ ಗಲ್ಫ್ ಉದ್ಯೋಗಿಯ ಕಾರಿಗೆ ಬೆಂಕಿ ಹಚ್ಚಿದ ಕೃತ್ಯಕ್ಕೆ ಸಂಬಂಧಪಟ್ಟಂತೆ ಮೂವರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪೇರಾಲ್ ಕೊಟ್ಟೋರಿಯ ಅಬ್ದುಲ್ ಸಲಾಂ(23), ಕುಂಬಳೆ ನಾಯ್ಕಾಪಿನ ಮುಹಮ್ಮದ್ ನೌಶಾದ್ (22) ಬಂದ್ಯೋಡಿನ ಆಸಿರ್ ಯಾನೆ ಸದ್ದು (23) ಎಂದು ಗುರುತಿಸಲಾಗಿದೆ.
ಮೊಗ್ರಾಲ್ ಪುತ್ತೂರು ಸರಕಾರಿ ಹಯರ್ ಸೆಕಂಡರಿ ಶಾಲಾ ರಸ್ತೆಯ ಮುಹಮ್ಮದ್ ರವರ ಮನೆಯಂಗಳದಲ್ಲಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ನವಂಬರ್ 25 ರಂದು ಮುಂಜಾನೆ ಘಟನೆ ನಡೆದಿತ್ತು.
ಹೆಲ್ಮೆಟ್ ಧರಿಸಿದ್ದ ಇಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದ್ರಶ್ಯ ಸೆರೆಯಾಗಿತ್ತು. ಈ ದ್ರಶ್ಯಗಳನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸಿದ್ದರು.
ಈ ಹಿಂದೆ ಇದೇ ತಂಡ ಮನೆಯವರನ್ನು ಬೆದರಿಸಿ ಹಣ ವಸೂಲಿಗೂ ಯತ್ನಿಸಿತ್ತು ಎನ್ನಲಾಗಿದೆ. ಹಣ ನೀಡದ ವೈಷಮ್ಯಕ್ಕೆ ಈ ಕೃತ್ಯ ನಡೆಸಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2014 ರಲ್ಲಿ ಕುಂಬಳೆ ಪೇರಾಲ್ ನಲ್ಲಿ ಯುವಕನೋರ್ವನನ್ನು ಕೊಲೆಗೈದು ಮರಳಿನಲ್ಲಿ ಹೂತು ಹಾಕಿದ ಪ್ರಕರಣದಲ್ಲೂ ಇವರು ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಪೈಕಿ ಆಸಿರ್ ಹಲವು ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.