ಕಾಸರಗೋಡು: ಇಬ್ಬರು ಕಂದಮ್ಮಗಳನ್ನು ಬಾವಿಗೆಸೆದು, ತಾಯಿ ಬಾವಿಗೆ ಹಾರಿದ ಘಟನೆ ಕಾಞ೦ಗಾಡ್ ಸಮೀಪದ ಮಾಡಿಕೈಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದ್ದು, ಮಕ್ಕಳಿಬ್ಬರು ಮೃತಪಟ್ಟಿದ್ದು, ತಾಯಿ ಗಂಭೀರ ಗಾಯಗೊಂಡಿದ್ದಾಳೆ.
ಮಡಿಕೈ ಕಾನಿಚ್ಚಿರದ ಸುಧಾಕರವರ ಪತ್ನಿ ಗೀತಾ (೪೦) ತನ್ನ ಮಕ್ಕಳಾದ ಆರು ವರ್ಷದ ಹರಿನಂದ ಮತ್ತು ಮೂರು ವರ್ಷದ ಲಕ್ಷ್ಮಿನಂದ ಜೊತೆ ಮನೆ ಸಮೀಪದ ಬಾವಿಗೆ ಹಾರಿದ್ದು, ಹೊರಗಡೆ ತೆರಳಿದ್ದ ಪತಿ ಸುಧಾಕರ ಮರಳಿ ಬಂದಾಗ ಮೂವರು ಮನೆಯಲ್ಲಿರಲಿಲ್ಲ. ಹುಡುಕಾಡಿದಾಗ ಬಾವಿಯಿಂದ ಶಬ್ದ ಕೇಳಿ ಬಂದುದರಿಂದ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಬೊಬ್ಬೆ ಕೇಳಿ ಸ್ಥಳೀಯರು ಮತ್ತು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೂವರನ್ನು ಮೇಲಕ್ಕೆತ್ತಿದರೂ ಮಕ್ಕಳಿಬ್ಬರು ಮೃತಪಟ್ಟಿದ್ದರು.
ಗೀತಾಳನ್ನು ಕೂಡಲೇ ಕಾಞoಗಾಡ್ ಜಿಲ್ಲಾಸ್ಪತ್ರೆಗೆ ತಲುಪಿಸಲಾಯಿತು. ಬಾವಿಗೆ ಬೀಳುವ ಸಂದರ್ಭದಲ್ಲಿ ಮೂವರ ತಲೆಗೂ ಗಂಭೀರ ಸ್ವರೂಪದ ಗಾಯವಾಗಿದೆ. ಗೀತಾ ಕಾಞ೦ಗಾಡ್ ನ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಾಳೆ. ಪತಿ ಸುಧಾಕರ ಅಂಚೆ ಪಾಲಕರಾಗಿದ್ದಾರೆ.
ಜೀವನದಲ್ಲಿ ಜಿಗುಪ್ಸೆ ಈ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಹೊಸದುರ್ಗ ಠಾಣಾ ಪೊಲೀಸರು ತಿಳಿಸಿದ್ದಾರೆ.