ಬಂಟ್ವಾಳ: ಖಾಸಗಿ ಶಾಲಾವಾರ್ಷಿಕೋತ್ಸವದ ವೇಳೆ ನಡೆಯುತ್ತಿದ್ದ ಯಕ್ಷಗಾನಕ್ಕೆ ಕೆಲ ಕಿಡಿಗೇಡಿಗಳು ಅಡ್ಡಿಪಡಿಸಿದ ಘಟನೆ ಕನ್ಯಾನದಲ್ಲಿ ಗುರುವಾರ ನಡೆದಿದೆ.
ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಗುರುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸರ್ವಧರ್ಮದ ಕಾರ್ಯಕ್ರಮಗಳಿಗೂ ಅವಕಾಶವನ್ನೂ ಕಲ್ಪಿಸಲಾಗಿತ್ತು. ನಿಗದಿತ ಕಾರ್ಯಕ್ರಮಗಳಿಗೆ ಸಮಯವನ್ನು ನಿಗದಿಪಡಿಸಿದ್ದು ಮಧ್ಯಾಹ್ನ 3ರಿಂದ 4ಗಂಟೆವರೆಗೆ ಶಾಲೆಯ 6 ಮಂದಿ ಉತ್ಸಾಹೀ ವಿದ್ಯಾರ್ಥಿಗಳನ್ನೇ ತರಬೇತಿಗೊಳಿಸಿ ಸುದರ್ಶನ ವಿಜಯ ಯಕ್ಷಗಾನ ಕ್ಕೆ ಸಿದ್ದತೆ ಮಾಡಲಾಗಿತ್ತು.
ಯಕ್ಷಗಾನ ಆರಂಭವಾಗುತ್ತಿದ್ದಂತೆ ಹೊರಗಿನಿಂದ ಬಂದ ಕೆಲವು ಕಿಡಿಗೇಡಿಗಳು ಯಕ್ಷಗಾನದ ಬಗ್ಗೆ ಆಕ್ಷೇಪವ್ಯಕ್ತಪಡಿಸಿ ಯಕ್ಷಗಾನ ನಿಲ್ಲಿಸುವಂತೆ ಸೂಚಿಸಿದ್ದಾರೆ ಕಾರ್ಯಕ್ರಮ ವ್ಯವಸ್ಥಾಪಕರಲ್ಲಿ ಎಚ್ಚರಿಕೆ ನೀಡಿದ್ದಾರೆ. ವ್ಯವಸ್ಥಾಪಕರು ಮಾತ್ರ ವಿಡಿಯೋ ಚಿತ್ರೀಕರಣ ನಡೆಯುವ ಜಾಗದಲ್ಲಿ ನಿಂತು ಯಾವುದೇ ಕಾರಣಕ್ಕೂ ನಿಗದಿತ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗುವುದಿಲ್ಲ, ಯಕ್ಷಗಾನ ಪ್ರದರ್ಶನ ಮಾಡಿಯೇ ಸಿದ್ದ ಎಂದು ತಿಳಿಸಿದರು. ಇದರಿಂದ ಅಸಮಾದಾನಗೊಂಡ ತಂಡ ಗೇಟಿನ ಬಳಿ ನಿಂತು ಅರಚಾರಟ ಆರಂಭಿಸಿದ್ದಾರೆ. ಇದರಿಂದ ಕೆಲವು ಮಹಿಳೆಯರು ಭಯಗೊಂಡು ಸಭೆಯಿಂದ ಎದ್ದು ಶಾಲೆಯ ಒಳಗೆ ಹೋಗಿ ಗೊಂದಲ ಏರ್ಪಟ್ಟಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ತಡೆ ಮಾಡಲು ಯತ್ನಿಸಿದವರ ಚಹರೆಗಳೂ ಶಾಲೆಯ ಸಿಸಿಟಿವಿಯಲ್ಲಿ ದಾಖಲಾಗಿರುವ ಸಾಧ್ಯತೆ ಇದೆ. ಆಯೋಜಕರು ಯಾವುದಕ್ಕೂ ಬಗ್ಗದೆ ನಿಗದಿತ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂದು ಖಡಕ್ ನಿರ್ಧಾರ ಕೈಗೊಂಡದ್ದರಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 5.30ಕ್ಕೆ ಮುಗಿದು ಎಲ್ಲರೂ ಮನೆಗೆ ತೆರಳಲು ಸಹಕಾರಿಯಾಯಿತು.
ಯಕ್ಷಗಾನ ನಿಲ್ಲಿಸಲು ಸೂಚಿಸಿದ ನಾಗರೀಕರ ನಡೆಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬಾರೀ ಚರ್ಚೆ ಆರಂಭವಾಗಿದೆ. ಕರಾವಳಿಯ ಕಲಾ ಸಂಸ್ಕೃತಿಯನ್ನೇ ತಡೆಯುವ ಪ್ರಯತ್ನಕ್ಕೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.