ಸುಳ್ಯ: ಇರುಮುಡಿ ಕಟ್ಟನ್ನು ತಲೆಯಲ್ಲಿಟ್ಟು ಸ್ವಾಮಿ ಅಯ್ಯಪ್ಪನನ್ನು ನೋಡಲು 580 ಕಿಲೋ ಮೀಟರ್ ಪಾದಯಾತ್ರೆ. ಸುಳ್ಯದ ಸತೀಶ್ ಗುರುಸ್ವಾಮಿ ನಿರಂತರ ಹದಿನೆಂಟು ವರ್ಷಗಳ ಕಾಲ ಸುಳ್ಯದಿಂದ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ಕೈಗೊಂಡು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಸತೀಶ್ ಗುರುಸ್ವಾಮಿ ಸೇರಿ 14 ಮಂದಿ ಅಯ್ಯಪ್ಪ ಭಕ್ತರ ತಂಡ ಈ ವರ್ಷ ಶಬರಿಮಲೆಯ ಪಾದ ಯಾತ್ರೆ ಕೈಗೊಂಡಿದ್ದಾರೆ. ಬುಧವಾರ ಇರುಮುಡಿ ಕಟ್ಟು ಕಟ್ಟುವ ಕಾರ್ಯ ನಡೆದು ಗುರುವಾರ ಮುಂಜಾನೆ ಆರು ಗಂಟೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಿಂದ ಇವರು ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಪ್ರತಿ ದಿನ 35 ರಿಂದ 40 ಕಿ.ಮಿ. ಕಾಲ್ನಡಿಗೆಯಲ್ಲಿ ಕ್ರಮಿಸುವ ಇವರು ಬಿಸಿಲಿನ ತಾಪ ಇಲ್ಲದ ಬೆಳಗ್ಗಿನ ಜಾವ ಮತ್ತು ಸಂಜೆಯ ವೇಳೆ ಹೆಚ್ಚು ನಡೆಯುತ್ತಾರೆ.
ವಿವಿಧ ದೇವಸ್ಥಾನಗಳಲ್ಲಿ ದರ್ಶನ ಮಾಡಿ ವಿಶ್ರಾಂತಿ ಪಡೆದು ಯಾತ್ರೆ ಮುಂದುವರಿಸುತ್ತಾರೆ. ಆಹಾರ ಸಾಮಾಗ್ರಿ ಮತ್ತು ಪಾತ್ರೆಗಳನ್ನು ಜೊತೆಯಲ್ಲಿ ಕೊಂಡೊಯ್ದು ದಾರಿ ಮಧ್ಯೆ ಆಹಾರ ತಯಾರಿಸಿ ಸೇವಿಸಿ ಕಾಲ್ನಡಿಗೆ ಮುಂದುವರಿಸುವ ಇವರು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಸೇರಿ ಸುಮಾರು ಮೂವತ್ತಕ್ಕೂ ಅಧಿಕ ದೇವಸ್ಥಾನಗಳಲ್ಲಿ ದರ್ಶನ ಪಡೆದು ಜನವರಿ ಒಂಭತ್ತರಂದು ಶಬರಿಮಲೆ ಸನ್ನಿಧಾನಕ್ಕೆ ತಲುಪಲಿದ್ದಾರೆ. ಅಯ್ಯಪ್ಪನ ದರ್ಶನ ಪಡೆದು ಮಕರ ಜ್ಯೋತಿಯನ್ನು ವೀಕ್ಷಿಸಿ ಮಲೆ ಇಳಿಯಲಿದ್ದಾರೆ.
31 ವರ್ಷಗಳಿಂದ ಸತೀಶ್ ಗುರುಸ್ವಾಮಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಇದರಲ್ಲಿ ನಿರಂತರ 18 ವರ್ಷಗಳಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಮಣಿಕಂಟ ಗುರುಸ್ವಾಮಿ, ರಾಜೇಶ್, ಸಂತೋಷ್, ಪದ್ಮನಾಭ ಏನೆಕಲ್ಲು, ಮೋಹಿತ್, ಗಣೇಶ್, ಯತೀಶ್ ಸೋಣಂಗೇರಿ, ಮಂಜುನಾಥ ಎಲಿಮಲೆ, ಅಶೋಕ್ ನಾರ್ಣಕಜೆ, ರಮೇಶ್, ದಾಮೋದರ ಬೆಳ್ಳಾರೆ ಸೇರಿ 14 ಮಂದಿ ಅಯ್ಯಪ್ಪ ಭಕ್ತರ ತಂಡ ಪಾದಯಾತ್ರೆ ನಡೆಸಲಿದ್ದಾರೆ. ಸತೀಶ್ ಗುರುಸ್ವಾಮಿಯ ಸಹೋದರರಾದ ಮಣಿಕಂಠ ಗುರುಸ್ವಾಮಿ 16ನೇ ವರ್ಷ ಮತ್ತು ರಾಜೇಶ್ ನಾಲ್ಕನೇ ವರ್ಷ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಮೋಹಿತ್ ಮತ್ತು ಅಶೋಕ್ ನಾಲ್ಕನೇ ವರ್ಷ, ಸಂತೋಷ್ ಮತ್ತು ದಾಮೋದರ ಮೂರನೇ ವರ್ಷ ಪಾದಯಾತ್ರೆ ನಡೆಸುತ್ತಿದ್ದಾರೆ.
ಶಬರಿಮಲೆಗೆ ಪ್ರಥಮ ಬಾರಿ ಪಾದಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ಸತೀಶ್ ಗುರುಸ್ವಾಮಿ ಸೇರಿ ನಾಲ್ಕು ಮಂದಿ ಮಾತ್ರ ಇದ್ದರು. ಬಳಿಕ ತಂಡದಲ್ಲಿ ಪಾದಯಾತ್ರೆ ನಡೆಸುವವರ ಸಂಖ್ಯೆ ಹೆಚ್ಚುತ್ತಾ ಬಂತು. ಕೆಲವೊಮ್ಮೆ 20, 22 ಜನ ಆದದ್ದೂ ಇದೆ. ಸತೀಶ್ ಗುರುಸ್ವಾಮಿಯ ತಂದೆ ಕೆಂಚಪ್ಪ ಗುರುಸ್ವಾಮಿ ಕೂಡ ನಿರಂತರ 46 ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದರೆ ಕೆಂಚಪ್ಪ ಗುರುಸ್ವಾಮಿ ಸುಳ್ಯದಿಂದ ಶಬರಿಮಲೆಗೆ ಪಾದಯಾತ್ರೆ ಮಾಡಿಲ್ಲ. ಜನವರಿ ಏಳಕ್ಕೆ ಶಬರಿಮಲೆ ಯಾತ್ರೆ ಕೈಗೊಳ್ಳುವ ಕೆಂಚಪ್ಪ ಗುರುಸ್ವಾಮಿ ಮತ್ತು ತಂಡ ಪಾದಯಾತ್ರೆ ಮಾಡಿದ ತಂಡವನ್ನು ಶಬರಿಮಲೆಯಲ್ಲಿ ಸೇರಿಕೊಳ್ಳಲಿದ್ದಾರೆ.
ಸುಳ್ಯ ಭಾಗದಿಂದ ನೂರಾರು ಮಂದಿ ಪ್ರತಿ ವರ್ಷ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದರೆ ಸುಳ್ಯದಿಂದಲೇ ಪಾದಯಾತ್ರೆಯ ಮೂಲಕವೇ ಅಯ್ಯಪ್ಪನ ದರ್ಶನ ಪಡೆಯುವವರು ಬಲು ಅಪರೂಪ. ಪ್ರಾರಂಭದ ವರ್ಷಗಳಲ್ಲಿ ಸತೀಶ್ ಗುರುಸ್ವಾಮಿ ಮತ್ತು ತಂಡ ಕೇವಲ 13 ದಿನಗಳಲ್ಲಿ ಶಬರಿಮಲೆ ತಲುಪುತ್ತಿದ್ದರು. ಆದರೆ ಈಗ ಅಲ್ಲಲ್ಲಿ ವಿಶ್ರಾಂತಿ ಪಡೆದು ಮುಂದುವರಯುವ ಕಾರಣ 18 ದಿನದಲ್ಲಿ ಸನ್ನಿಧಾನಕ್ಕೆ ತಲುಪುತ್ತಾರೆ.
“ಪ್ರತಿವರ್ಷ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುವುದು ಕಷ್ಟದಾಯಕ, ಆದರೆ ಪಾದಯಾತ್ರೆಯ ಮೂಲಕ ಶಬರಿಮಲೆಯ ಯಾತ್ರೆ ಮಾಡುವುದರಿಂದ ಬಲು ಸಂತೋಷ ಮತ್ತು ಆತ್ಮ ಸಂತೃಪ್ತಿ ದೊರೆಯುತ್ತದೆ”
-ಸತೀಶ್ ಗುರುಸ್ವಾಮಿ
“ಮಾಲೆ ಹಾಕಿ ಕಠಿಣ ವೃತಾನುಷ್ಠಾನ ಕೈಗೊಂಡು ಅಚಲ ಭಕ್ತಿ ಮತ್ತು ಪರಿಶ್ರಮದಿಂದ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುವುದು ಭಕ್ತನಿಗೆ ಅತ್ಯಂತ ಸಂತೋಷವನ್ನೂ ಸುಖವನ್ನೂ ದೊರೆಯುವುದರ ಜೊತೆಗೆ ಅಯ್ಯಪ್ಪನ ಅನುಗ್ರಹವೂ ದೊರೆಯುತ್ತದೆ”
-ಕೆಂಚಪ್ಪ ಗುರುಸ್ವಾಮಿ ಜಟ್ಟಿಪಳ್ಳ
ಹಿರಿಯ ಗುರುಸ್ವಾಮಿ.