News Kannada
Monday, December 05 2022

ಕರಾವಳಿ

ಧರ್ಮಸ್ಥಳದಲ್ಲಿ ಸ್ವಚ್ಛ ಭಾರತ- ಸ್ವಚ್ಛ ಶ್ರದ್ಧಾ ಕೇಂದ್ರ ಆಂದೋಲನದ

Photo Credit :

ಧರ್ಮಸ್ಥಳದಲ್ಲಿ ಸ್ವಚ್ಛ ಭಾರತ- ಸ್ವಚ್ಛ ಶ್ರದ್ಧಾ ಕೇಂದ್ರ ಆಂದೋಲನದ

ಬೆಳ್ತಂಗಡಿ: ಸ್ವಚ್ಛ ಭಾರತ- ಸ್ವಚ್ಛ ಶ್ರದ್ಧಾ ಕೇಂದ್ರ ಎಂಬ ಘೋಷಣೆಯಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು ರಾಜ್ಯಾದ್ಯಂತ ಇದಕ್ಕೆ ಪೂರಕ ಸ್ಪಂದನೆ ದೊರಕುತ್ತಿದೆ. ಅಲ್ಲದೆ ಮುಜರಾಯಿ ಇಲಾಖೆಯ ಸಚಿವರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಆದೇಶ ನೀಡಲಿದ್ದೇನೆ ಎಂದು ಭರವಸೆ ನೀಡಿದ್ದಾರೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

Sri Kshethra Dharmasthala begins cleanliness campaign for all religious places in state-1ಅವರು ಶನಿವಾರ ಧರ್ಮಸ್ಥಳದಲ್ಲಿ ಮಾಧ್ಯಮ ಗೋಷ್ಠಿಯನ್ನು ನಡೆಸಿ ಆಂದೋಲನದ ಬಗ್ಗೆ ಮಾಹಿತಿ ನೀಡುವ ಮೂಲಕ ರಾಜ್ಯದ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲು ಕ್ಷೇತ್ರದೊಂದಿಗೆ ಕೈ ಜೋಡಿಸುವಂತೆ ವಿನಂತಿಸಿದರು. ಕೆಲ ಭಕ್ತರು ಕ್ಷೇತ್ರಕ್ಕೆ ಬಂದಾಗ ನದಿಯಲ್ಲಿ ಅಥವಾ ಪ್ರಾಂಗಣಗಳಲ್ಲಿ ಬಟ್ಟೆಗಳನ್ನು ಎಸೆಯುವುದು, ತೆಂಗಿನಕಾಯಿ ಒಡೆಯುವುದು, ಅರಸಿನ ಕುಂಕುಮಗಳಿಂದ ವಿರೂಪಗೊಳಿಸುವುದು, ಊಟ-ಉಪಾಹಾರಗಳನ್ನು ಅಲ್ಲಿಯೇ ಪೂರೈಸಿ ಗಲೀಜು ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಧರ್ಮಕ್ಷೇತ್ರಗಳಿಗೆ ಬಂದಾಗ ಈ ರೀತಿ ಮಾಡುವುದು ಸರ್ವಥಾ ಸರಿಯಲ್ಲ. ತಾವು ಗಲೀಜು ಮಾಡಿಟ್ಟರೆ ಇತರರಿಗೆ ತೊಂದರೆಯಾಗುತ್ತದೆ ಎಂಬ ಕಲ್ಪನೆ ಬರುವುದು ಅಗತ್ಯವಾಗಿದೆ. ಪರಿಸರ ಕಲುಷಿತವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಧರ್ಮಸ್ಥಳ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದ ಎಲ್ಲಾ ಶ್ರದ್ಧಾ ಕೇಂದ್ರಗಳಲ್ಲಿ ಶುಚಿತ್ವದ ರಕ್ಷಣೆಯಾಗಬೇಕು ಎಂಬ ಉದ್ದೇಶವನ್ನು ಆಂದೋಲನ ಹೊಂದಿದೆ. ದೇವಸ್ಥಾನಗಳಲ್ಲಿ ಕಸದ ಬುಟ್ಟಿ ಇಡುವುದು, ಶೌಚಾಲಯಗಳ ವ್ಯವಸ್ಥೆ ಮಾಡುವುದರ ಬಗ್ಗೆ ಪ್ರತಿಯೊಂದು ಶ್ರದ್ಧಾ ಕೇಂದ್ರಗಳ ಆಡಳಿತ ಮಂಡಳಿಯವರು ಕಾರ್ಯತತ್ಪರವಾಗಬೇಕು. ಕ್ಷೇತ್ರದಲ್ಲಿ ಸಾನಿಧ್ಯ ಉಳಿಯಬೇಕಾದರೆ ಶುದ್ಧವಾದ ಪರಿಸರ ಇರಬೇಕು ಎಂಬ ಮನವರಿಕೆ ಗಟ್ಟಿಯಾಗಬೇಕು. ದೇವಸ್ಥಾನಗಳ ಒಳಾಂಗಣದಲ್ಲಿ ಪರಂಪರೆಯ ಹೆಸರಿನಲ್ಲಿ ಅಶುಚಿತ್ವ ಮಾಡುವುದನ್ನು ಆಡಳಿತ ಮಂಡಳಿಯವರು ತಡೆಯಬೇಕು ಎಂದರು.

ಈಗಾಗಲೇ ನಾನು ಕ್ಷೇತ್ರದ ನೇತ್ರಾವತಿ ಸ್ನಾನಘಟ್ಟಕ್ಕೆ ತೆರಳಿ ಪರಿಶೀಲಿಸಿದೆ. ಎರಡು ಗಂಟೆಯ ಮೊದಲು ಅಲ್ಲಿನ ಪರಿಸರ ಅತ್ಯಂತ ನೈರ್ಮಲ್ಯವಾಗಿತ್ತು. ಆದರೆ ಬಳಿಕದ ಎರಡು ಗಂಟೆಯಲ್ಲೆ ಬಟ್ಟೆ, ಪ್ಲಾಸ್ಟಿಕ್, ಪೊಟ್ಟಣ, ತೆಂಗಿನಕಾಯಿ ಮೊದಲಾದ ವಸ್ತುಗಳಿಂದ ತುಂಬಿಹೋಗಿತ್ತು. ಬೇರೆ ದೇವಸ್ಥಾನಗಳಲ್ಲಿ ಮಾಡುವ ಸಂಪ್ರದಾಯಗಳನ್ನು ಇಲ್ಲಿಯೂ ಮಾಡಿ ಪರಿಸರವನ್ನು ಗಲೀಜು ಮಾಡುತ್ತಿರುವುದು ಕಂಡು ಬಂತು. ಹೀಗಾಗಿ ರಾಜ್ಯದ ಶ್ರದ್ಧಾ ಕೇಂದ್ರಗಳಲ್ಲಿನ ಆಡಳಿತ ಮಂಡಳಿಯವರು ಭಕ್ತರಲ್ಲಿ ಸ್ವಚ್ಛತೆಯ ಜಾಗೃತಿಯನ್ನು ಉಂಟು ಮಾಡಬೇಕು. ಸ್ಥಳೀಯ ದೇವಸ್ಥಾನಗಳು ಸ್ವಚ್ಛತೆಯ ಜಾಗೃತಿಯನ್ನು ಉಂಟು ಮಾಡಿದಲ್ಲಿ ಇತರ ದೇವಸ್ಥಾನಗಳಲ್ಲೂ ಅದು ತನ್ನಿಂತಾನೆ ಮುಂದುವರಿಯುತ್ತದೆ ಎಂದರು.

ವಿವಿಧ ದೇವಸ್ಥಾನಗಳಿಗೆ ಭೇಟಿ:
ಕಳೆದ 5 ದಿನಗಳ ಹಿಂದೆ ಹುಬ್ಬಳ್ಳಿ ಸಿದ್ಧಾರೂಢ ಮಠ ಹಾಗೂ ಸುತ್ತಲಿನ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದೇನೆ.

ಮುಜರಾಯಿ ಇಲಾಖೆಗೆ ಮನವಿ:
ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಯಡಿಯಲ್ಲಿರುವ ದೇವಸ್ಥಾನಗಳಲ್ಲಿ ನೈರ್ಮಲ್ಯದ ಬಗ್ಗೆ ಗಮನ ಹರಿಸುವಂತೆ ಕೋರಬೇಕೆಂದು ಇಲಾಖೆಯ ಮಂತ್ರಿಯವರಲ್ಲಿ ವಿನಂತಿಸಿದ್ದೇನೆ. ಅದಕ್ಕೆ ಸ್ಪಂದಿಸಿದ ಅವರು ಈ ಬಗ್ಗೆ ಆದೇಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಸ್ಪಂದಿಸಲಿದ್ದಾರೆ ಎಂಬ ಭರವಸೆ ಮೂಡಿದೆ. ಅಲ್ಲದೆ ದೇವಸ್ಥಾನದ ಆಡಳಿತ ಮಂಡಳಿಗಳು, ಧಾರ್ಮಿಕ ಪರಿಷತ್ ನವರು ಕ್ಷೇತ್ರದ ಆಂದೋಲನೊಂದಿಗೆ ಸೇರಿಕೊಳ್ಳಲಿದ್ದಾರೆ.

See also  ಯುವಕನಿಂದ ಅಪ್ರಾಪ್ತೆಯ ಅಪಹರಣ

ಸ್ವಚ್ಛತೆಯಲ್ಲಿ ಮಾಧ್ಯಮಗಳ ಪಾತ್ರ:
ಕ್ಷೇತ್ರ ಕೈಗೊಂಡಿರುವ ಸ್ವಚ್ಛತೆಯ ಆಂದೋಲನದಲ್ಲಿ ಮಾಧ್ಯಮಗಳ ಪಾತ್ರ ಬಹು ಮುಖ್ಯವಾದದ್ದು. ಎಲ್ಲಾ ವಾಹಿನಿಗಳಲ್ಲಿ ಪ್ರತಿದಿನ ಬೆಳಿಗ್ಗೆ ಜ್ಯೋತಿಷ್ಯ ಇತ್ಯಾದಿ ಭಕ್ತಿ ಭಾವದ ಕಾರ್ಯಕ್ರಮಗಳು ನಡೆಯುತ್ತವೆ. ಅಂತಹ ಸಂದರ್ಭ ಜ್ಯೋತಿಷಿಗಳಾಗಲಿ, ನಿರೂಪಕರಾಗಲಿ ದೇವಸ್ಥಾನಗಳಲ್ಲಿ ನೈರ್ಮಲ್ಯತೆಯನ್ನು ಉಳಿಸುವ ದಿಕ್ಕಿನಲ್ಲಿ ಏನು ಮಾಡಬೇಕು ಎಂಬುದನ್ನು ಸವಿಸ್ತಾರವಾಗಿ ಹೇಳಿದಲ್ಲಿ ಅನುಕೂಲವಾಗುವುದು. ಹೀಗಾಗಿ ವಾಹಿನಿಗಳು ಈ ದಿಕ್ಕಿನಲ್ಲಿ ಯೋಚಿಸುವುದು ಸೂಕ್ತ ಎಂದರು.

ಪ್ಲಾಸ್ಟಿಕ್ ಬಳಕೆ:
ದೇಗುಲಗಳಲ್ಲಿ ಪ್ಲಾಸ್ಪಿಕ್ ಉಪಯೋಗದ ಬಗ್ಗೆ ಮಾತನಾಡಿದ ಹೆಗ್ಗಡೆಯವರು, ಪ್ಲಾಸ್ಟಿಕ್ ಗೆ ಪರ್ಯಾಯ ಇನ್ನೂ ಬಂದಿಲ್ಲ. ಆದಾಗ್ಯೂ ಪರ್ಯಾಯದ ಪ್ರಯತ್ನ ನಡೆಯುತ್ತಿದೆ. ಕ್ಷೇತ್ರದಲ್ಲಿ ಈಗಾಗಲೇ ಕಾಗದದ ಪೊಟ್ಟಣಗಳ ಬಳಕೆ ತಂದಿದ್ದೇವೆ. ಆದರೆ ಪ್ಲಾಸ್ಟಿಕ್ ಅನ್ನು ಪೂರ್ಣ ದೂರ ಮಾಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ಇದೆ ಎಂದರು.

ನೀರಿನ ಅಭಾವ:
ಈ ಬಾರಿ ಮಲೆನಾಡು, ಕರಾವಳಿ ಸಹಿತ ಎಲ್ಲಾ ಭಾಗಗಳಲ್ಲಿ ನೀರಿನ ಭಯಾನಕ ಕೊರತೆ ಉಂಟಾಗುವ ಲಕ್ಷಣವಿದೆ. ನೀರನ್ನು ಕೇವಲ ಜೀವನ ನಿರ್ವಹಣೆಗೆ ಮಾತ್ರ ಉಪಯೋಗಿಸುವ ಸ್ಥಿತಿ ಬರಲಿದೆ. ಕನಿಷ್ಠ ಮುಂದಿನ 5 ತಿಂಗಳ ಕಾಲ ಕುಡಿಯಲು ಮತ್ತು ದಿನನಿತ್ಯದ ನಿರ್ವಹಣೆಗೆ ಮಾತ್ರ ನೀರು ಪೂರೈಸುವ ಸ್ಥಿತಿ ಬರಲಿದೆ. ಮಾರ್ಚ ತಿಂಗಳಲ್ಲಿ ಮಳೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು ಎಂದರು.

ಒಕ್ಕೂಟಗಳಿಂದ ಸ್ವಚ್ಛತೆ:
ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 18,000 ಒಕ್ಕೂಟಗಳಿವೆ. ಅದರ ಸದಸ್ಯರೆಲ್ಲರೂ ಶ್ರಮದಾನದ ಮೂಲಕ ಆಂದೋಲನದಲ್ಲಿ ಭಾಗಿಯಾಗಲಿದ್ದಾರೆ. ಮಸೀದಿಯ, ಚರ್ಚ್ನ ಪ್ರಮುಖರೂ ನಮ್ಮ ಯೋಜನೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಜ. 13 ರೊಳಗೆ ಎಲ್ಲಾ ಶ್ರದ್ಧಾ ಕೇಂದ್ರಗಳು ಶುಭ್ರ ಪರಿಸರವನ್ನು ಹೊಂದಿ ಜ. 14 ರಂದು ಸ್ವಚ್ಛ ಶ್ರದ್ದಾಕೇಂದ್ರಗಳಾಗಿ ಬಾಗಿಲು ತೆರೆಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.  ಗೋಷ್ಠಿಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು