ಮಂಗಳೂರು: ಇಂದು ಕ್ರೈಸ್ತ ಬಾಂದವರಿಗೆಲ್ಲ ಕ್ರಿಸ್ಮಸ್ ಹಬ್ಬದ ಸಂಭ್ರಮ ಸಡಗರ. ಕ್ರಿಸ್ ಮಸ್ ಹಬ್ಬದ ಮುನ್ನಾದಿನವಾದ ಶನಿವಾರ ನಗರದ ವಿವಿಧ ಚರ್ಚ್ ಗಳಲ್ಲಿ ಸಡಗರ ಮನೆ ಮಾಡಿತ್ತು. ಕ್ರೈಸ್ತ ಸಮುದಾಯದವರು ಶ್ರದ್ಧೆ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಡಿಸೆಂಬರ್ ಕೊನೆಯಲ್ಲಿ ಬರುವ ಕ್ರಿಸ್ ಮಸ್ ಕ್ರಿಶ್ಚಿಯನ್ನರಿಗೆ ಎಲ್ಲಿಲ್ಲದ ಸಂಭ್ರಮ ತರುವ ಹಬ್ಬ. ಇದಕ್ಕಾಗಿ ಸುಮಾರು 15 ದಿನಗಳ ಹಿಂದೆಯೇ ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಬಟ್ಟೆ ಖರೀದಿಯಿಂದ ಹಿಡಿದು ಉಡುಗೊರೆಗಳನ್ನು ಆರಿಸುವುದು, ಸಿಹಿ ತಿನಿಸುಗಳನ್ನು ತಯಾರಿಸುವುದು ಹೀಗೆ ಎಲ್ಲಾ ಒಂದೆಡೆ ಸೇರುವ ಖುಷಿ ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಲು ಕಾತುರರಾಗಿರುತ್ತಾರೆ. ಅಲ್ಲದೆ ಕ್ರಿಸ್ ಮಸ್ ನಲ್ಲಿ ಕುಟುಂಬದ ಎಲ್ಲರೂ ಒಂದಾಗಿ ಸಡಗರದಿಂದ ಆಚರಿಸಿ ಸಿಹಿ ಹಂಚಿ ಸಂಭ್ರಮಿಸುತ್ತಾರೆ.
ಕ್ರಿಸ್ತ ಯೇಸುವಿನ ಜನನೋತ್ಸವವು ಕ್ರಿಸ್ಮಸ್ ಹಬ್ಬವಾಗಿ ಆಚರಣೆಯಾಗುತ್ತಿದೆ. ಹಾಗೆ ನೋಡಿದರೆ ಕ್ರಿಸ್ಮಸ್ ಹಬ್ಬ ಕ್ರೈಸ್ತರು ಆಚರಣೆ ಮಾಡಿದರೂ ಆ ಸಂಭ್ರಮದಲ್ಲಿ ಇತರ ಎಲ್ಲ ಜನರೂ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯಲ್ಲಿ ದನಗಳ ಕೊಟ್ಟಿಗೆಯಲ್ಲಿ ಸಾಕು ತಂದೆ ಜೋಸೆಫರ ಆಶ್ರಯದಲ್ಲಿ ಮಾತೆ ಮರಿಯಮ್ಮನವರ ಉದರದಲ್ಲಿ ಜನಿಸಿದ ಏಸು 33ವರ್ಷಗಳ ಕಾಲ ಮಾತ್ರ ಭೂಮಿ ಮೇಲೆ ಬಾಳಿದರೂ ಅದ್ಭುತ ಪವಾಡಗಳನ್ನು ಮಾಡಿ ಸಮಸ್ತ ಜನರ ಪಾಪಗಳ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದರು. ಆದರೆ ಈ ಪ್ರಪಂಚದಲ್ಲಿ ಸತ್ತ ಮೇಲೆ ಯಾರು ಜೀವಂತವಾಗಿ ಎದ್ದು ಬರುವುದಿಲ್ಲ್ಲ. ಮೃತ್ಯುಂಜಯ ಕ್ರಿಸ್ತ ಯೇಸು ಸ್ವಾಮಿ ತಾವು ನುಡಿದಂತೆ ಸತ್ತು ಮೂರೇ ದಿನದಲ್ಲಿ ಜೀವಂತವಾಗಿ ಎದ್ದು ಪುನರುತ್ಥಾನಗೊಂಡಿದ್ದು ಲೋಕ ರಕ್ಷಣೆಗೆ ಎಂದು ನಂಬಿದ್ದಾರೆ ಕ್ರೈಸ್ತಬಾಂಧವರು.