ಬಂಟ್ವಾಳ: ವಿಭಿನ್ನ ಕೋಮಿನ ಜೋಡಿವೊಂದು ವಿವಾಹ ನೋಂದಣಿಯಾಗಲು ಬಂಟ್ವಾಳ ಉಪ ನೋಂದಣಿ ಕಚೇರಿಗೆ ಇಂದು ಬೆಳಿಗ್ಗೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಬಡಗಕಜೆಕಾರು ಮೂಲದ ಮುಸ್ಲಿಂ ಯುವಕ ಎನ್ನಲಾಗಿದ್ದು. ಮಡಿಕೇರಿ ಮೂಲದ ಹಿಂದೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು.
ವಿವಾಹ ನೋಂದಣಿಗಾಗಿ ಈರ್ವರು ಇಂದು ಅರ್ಜಿ ಸಲ್ಲಿಸಲು ನೋಂದಣಿ ಕಛೇರಿಗೆ ಬಂದ ಸುದ್ದಿ ತಿಳಿದ ಸಂಘಟನೆಯೊಂದರ ಕಾರ್ಯಕರ್ತರು ವಿವಾಹ ನೋಂದಣಿ ಕಛೇರಿಯ ಸುತ್ತ ಜಮಾಯಿಸಿದ್ದು, ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿತ್ತು. ಪರಸ್ಥಿತಿ ಬಿಗುವಿಗೆ ತಿರುಗುತ್ತಿದ್ದಂತೆೆಯೇ ಯುವಕ ಸ್ಥಳದಿಂದ ತೆರಳಿದ್ದು, ನೋಂದಣಿ ಕಛೇರಿ ಯೊಳಗಿದ್ದ ಯುವತಿಗೆ ನಗರ ಪೊಲೀಸರು ರಕ್ಷಣೆ ನೀಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ನಂದ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಭೇಟಿ ನೀಡಿ, ಬಂದೋಬಸ್ತ್ ಒದಗಿಸಿದರು. ಈ ನಡುವೆ ಆತಂಕದ ವಿಚಾರ ತಿಳಿದ ಯುವತಿಯ ಸಹೋದರ ಬಿ.ಸಿ.ರೋಡಿಗೆ ಆಗಮಿಸಿದ್ದು, ಪೊಲೀಸರ ಜೊತೆಗಿನ ಮಾತುಕತೆಯಲ್ಲಿ, ತನ್ನ ಸಹೋದರಿ ಮತ್ತು ಯುವಕ ಪರಸ್ಪರ ಇಷ್ಟಪಟ್ಟಿದ್ದಾರೆ, ಮನೆಮಂದಿಯ ಒಪ್ಪಿಗೆಯೂ ಇದೆ ಈ ಹಿನ್ನೆಲೆಯಲ್ಲಿ ಯುವಕನ ಜೊತೆಗೇ ತನ್ನ ಸಹೋದರಿಯನ್ನು ಮದುವೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಂದಣಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಯುವತಿ ಹಾಗೂ ಆಕೆಯ ಸಹೋದರ ಖಾಸಗಿ ಕಾರಿನಲ್ಲಿ ಮಡಿಕೇರಿಯತ್ತ ಪಯಣಿಸಿದರು. ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ರಕ್ಷಣೆ ಒದಗಿಸಿದರು.