ಸುಳ್ಯ: ಸಾಧ್ಯ ಆದರೆ ಕಷ್ಟವಿದೆ ಎಂಬ ಭಾವನೆ ಸೋಲಿಗೆ ಮೂಲ ಕಾರಣ. ಕಷ್ಟ ಇದೆ ಆದರೆ ಸಾಧ್ಯ ಎಂಬ ಮನೋಭಾವನೆ, ನಿರಂತರ ಪರಿಶ್ರಮ ಮತ್ತು ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಸಾಧ್ಯ. ಛಲದಿಂದ ಯುವಕರು ಸಾಧನೆಯ ಶಿಖರವನ್ನೇರಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಯಶೋವರ್ಮ ಹೇಳಿದ್ದಾರೆ.
ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 88ನೇ ಜನ್ಮದಿನಾಚರಣೆಯ ಪ್ರಯುಕ್ತ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಕೆವಿಜಿ ಸುಳ್ಯ ಹಬ್ಬ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ಕೆ.ವಿ.ಜಿ. ಯುವ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಾಧನೆ ಮಾಡಬೇಕೆನ್ನುವ ತುಡಿತವಿದ್ದರೆ ಸಾಕಷ್ಟು ಅವಕಾಶಗಳಿವೆ. ಸಾಮಾನ್ಯ ಕೃಷಿಕನಾಗಿದ್ದು ಅಸಾಮಾನ್ಯ ಸಾಧನೆ ಮಾಡಿದವರು ಡಾ.ಕುರುಂಜಿಯವರು. ಗಾಂಧೀಜಿಯ ವಿಚಾರಧಾರೆಗಳನ್ನಿಟ್ಟುಕೊಂಡು ಬದುಕನ್ನು ರೂಪಿಸಿದ ಅವರ ಜೀವನವೇ ಒಂದು ದೊಡ್ಡ ಸಾಧನೆ. ಶಿಕ್ಷಣದ ಮೂಲಕ ಲಕ್ಷಾಂತರ ಮಂದಿಯ ಬದುಕನ್ನು ನಿತ್ಯವೂ ಹಬ್ಬವನ್ನಾಗಿಸಿದವರು. ನಾಶವಾದರೂ ನಕ್ಷತ್ರವು ನೂರಾರು ವರುಷ ಭೂಮಿಗೆ ಬೆಳಕನ್ನು ನೀಡುತ್ತದೆ. ಕುರುಂಜಿಯವರು ನಮ್ಮೊಂದಿಗೆ ಇಲ್ಲವಾದರೂ ಅವರ ಪ್ರಭಾವ, ಆದರ್ಶ ಸದಾ ನಮಗೆ ಬೆಳಕನ್ನು ನೀಡುತ್ತಿದೆ. ಆದುದರಿಂದ ಕುರುಂಜಿಯವರು ಒಂದು ನಕ್ಷತ್ರದಂತೆ ಸದಾ ಬೆಳಗುತ್ತಾರೆ ಎಂದು ಅವರು ಬಣ್ಣಿಸಿದರು.
ಸುಳ್ಯ ತಾಲೂಕಿನಲ್ಲಿ ವಿಶಿಷ್ಟ ಸಾಧನೆ ಮಾಡಿದ ಸುಮಿತಾ ಊರುಬೈಲು(ಕ್ರೀಡೆ), ಡಾ. ಕಿರಣ್ ಕುಮಾರ್(ವೈದ್ಯಕೀಯ), ಶ್ರೀಹರ್ಷ ನೆಟ್ಟಾರು(ಆಡಳಿತ ಸೇವೆ), ರಾಹುಲ್ ಅಡ್ಪಂಗಾಯ( ಹೈನುಗಾರಿಕೆ) ಅವರಿಗೆ ಕೆ.ವಿ.ಜಿ. ಯುವಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ. ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘದ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ಸಂಚಾಲಕ ದಿನೇಶ್ ಅಂಬೆಕಲ್ಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂರು ಶಾಲೆಗಳಿಗೆ ಸ್ವಚ್ಛತಾ ಪ್ರಶಸ್ತಿ:
ಶ್ರೀ ಕುರುಂಜಿ ಎಜ್ಯುಕೇಶನ್ ಟ್ರಸ್ಟ್ ನೀಡುವ ಕೆವಿಜಿ ಸ್ವಚ್ಛತಾ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಪಿನಂಗಡಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಶಾಲೆಗಳು ಸ್ವಚ್ಛ ಶಾಲೆಯಾಗಿ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆಯಿತು.
ಕಾರ್ಯಕ್ರಮ ವೈವಿಧ್ಯ:
ಕೆ.ವಿ.ಜಿ. ಸುಳ್ಯ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಿತು. ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಷನ್ ಸಹಯೋಗದಲ್ಲಿ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾಟ, ಶಾಲಾ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡೋತ್ಸವ, ಸಾರ್ವಜನಿಕರಿಗೆ ತಾಲೂಕು ಮಟ್ಟದ ಮುಕ್ತ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ ನಡೆಯಿತು. ತುಳುನಾಡು ಹಾಗೂ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ‘ತುಳುನಾಡ ವೈಭವ’ ಎಂಬ ಮನೋರಂಜನಾ ಕಾರ್ಯಕ್ರಮ ಮನ ಸೆಳೆಯಿತು.