ಬಂಟ್ವಾಳ: ವಿಟ್ಲ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಗಾಳಿ ತೂರಿ ಸಂಚಾರ ಮಾಡುತ್ತಿದ್ದ ವಾಹನಗಳ ಚಾಲಕರಿಗೆ ವಿಟ್ಲ ಎಸೈ ನಾಗರಾಜ್ ನೇತೃತ್ವದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ವಿಟ್ಲ ಪೇಟೆಯಲ್ಲಿ ಕಳೆದ ಹಲವಾರು ಸಮಯಗಳಿಂದ ಸಂಚಾರ ನಿಯಮಗಳನ್ನು ಗಾಳಿ ತೂರಿ ವಾಹನ ಸಂಚಾರ ಮಾಡಲಾಗುತ್ತಿತ್ತು. ಕೆಲಸದ ಒತ್ತಡದಿಂದ ಪೊಲೀಸರು ಕಾರ್ಯಾಚಣೆಗೆ ಇಳಿದಿರಲಿಲ್ಲ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದ ನಾಗರಾಜ್ ಅವರು ಮೊದಲ ದಿನದಿಂದಲೇ ಸಂಚಾರ ನಿಯಮಗಳನ್ನು ಪಾಲನೆ ಮಾಡದವರಿಗೆ ತಕ್ಕ ಪಾಠ ಕಲಿಸಲು ಪ್ರಾರಂಭಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಗಳನ್ನೊಳಗೊಂಡ ತಂಡ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ನಿಂತು ನಿರಂತರವಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ಕಾರ್ಯಾಚರಣೆ ವೇಳೆ ಹೆಲ್ಮಟ್ ಧರಿಸದ, ಕರ್ಕಶ ಶಬ್ದ ಮಾಡುವ ವಾಹನ, ಮೊಬೈಲ್ ಬಳಸುವ, ಪರವಾನಿಗೆ ಹೊಂದದ, ಸಮವಸ್ತ್ರ ಧರಿಸದ ಆಟೋಗಳು ಸೇರಿದಂತೆ ಮೊದಲಾದ ಪ್ರಕರಣಗಳು ಬೆಳಕಿಗೆ ಬಂದಿದೆ. ಮೊದಲ ಹಾಗೂ ಎರಡನೇ ದಿನ 35 ಪ್ರಕರಣ, ಮೂರನೇ ದಿನ 15 ಪ್ರಕರಣ, ಉಳಿದ ದಿನ 25 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 30 ಸಾವಿರಕ್ಕಿಂತಲೂ ಅಧಿಕ ದಂಡ ಸಂಗ್ರಹವಾಗಿದೆ.
ಹೆಲ್ಮಟ್ ಕಂಡ್ಡಾಯವಾದ ದಿನದಿಂದ ವಿಟ್ಲದಲ್ಲಿ ಯಾರೂ ಕೂಡಾ ಹೆಲ್ಮೆಟ್ ಧರಿಸುತ್ತಿರಲಿಲ್ಲ. ಇನ್ನೂ ಕೆಲವು ಬೈಕ್ ಸವಾರರು ಮೂರು ಮಂದಿಯನ್ನು ಕುಳಿತುಕೊಂಡು ತೆರಳುತ್ತಿದ್ದರು. ಆದರೆ ಯಾರೂ ಕೂಡಾ ಪೊಲೀಸರ ಕೈಗೆ ಸಿಗುತ್ತಿರಲಿಲ್ಲ. ನಾಲ್ಕು ಮಾರ್ಗದಲ್ಲಿ ವಾಹನ ದಟ್ಟನೆಗೆ ನಿಂತುಕೊಳ್ಳುತ್ತಿದ್ದ ಹೋಂ ಗಾರ್ಡ್ ಗಳು ವಾಹನಗಳನ್ನು ನಿಲ್ಲಿಸಿದಾಗ ಅವರನ್ನೂ ಕ್ಯಾರೇ ಮಾಡದೇ ತೆರಳುತ್ತಿದ್ದರು. ಅದಲ್ಲದೇ ಕೆಲವು ಆಟೋ ಚಾಲಕರು ಸಂಪೂರ್ಣವಾಗಿ ಸಂಚಾರ ನಿಯಮವನ್ನು ಮರೆತಂತೆ ಕಾಣುತ್ತಿದ್ದು, ಅವರಿಗೂ ಬಿಸಿ ಮುಟ್ಟಿಸಲಾಗಿದೆ. ಇದೇ ರೀತಿಯ ಘಟನೆಗಳು ವಿಟ್ಲದಲ್ಲಿ ಪದೇ ಪದೇ ಸಂಭವಿಸುತ್ತಿತ್ತು. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಾಚಣೆ ಮುಂದುವರೆಸಲಾಗುವುದು ಎಂದು ಎಸೈ ನಾಗರಾಜ್ ತಿಳಿಸಿದ್ದಾರೆ.