ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ಸಂಗ್ರಹಣೆಯಿಂದಾಗಿ ಸಜೀಪ ಮುನ್ನೂರು ಗ್ರಾಮದ ಕರಂದಾಡಿ ಎಂಬಲ್ಲಿ ಎರಡು ಎಕರೆ ವಿಸ್ತೀರ್ಣದ ಭತ್ತದ ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಕೃಷಿ ನಷ್ಟ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಸುಳ್ಳು ಭರವಸೆಯಿಂದಾಗಿ ರೈತರು ಕೃಷಿ ಕಳೆದುಕೊಳಡಿರುವುದರ ಬಗ್ಗೆ ಜಿಲ್ಲಾಡಳಿತ ಹಾಗೂ ಮ.ನ.ಪಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು ಮ.ನ.ಪಾ ಆಯುಕ್ತ ನಝೀರ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಹಾಗೂ ನಷ್ಟ ಅನುಭವಿಸದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಜಿ.ಪಂ.ಸದಸ್ಯರ ಸೂಚನೆಯ ಮೇರೆಗೆ ಕಮಿಷನರ್ ನೀರು ನುಗ್ಗಿರುವ ಜಮೀನು ಪರಿಶೀಲನೆೆ ನಡೆಸಲು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. 5 ಮೀಟರ್ ಮುಳುಗಡೆಯಾಗುವ ಸಂತ್ರಸ್ತ ರೈತರಿಗೆ ಮ.ನ.ಪಾ ನೆಲಬಾಡಿಗೆ ನೀಡಲು ನಿರ್ಧರಿಸಿದ್ದು ನಗರ ಹಾಗೂ ಗ್ರಾಮೀಣ ಎಂದು ವಿಂಗಡಿಸಿ ತಾರತಮ್ಯ ತೋರಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರುವ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಎಲ್ಲಾ ಸಂತ್ರಸ್ತ ರೈತರಿಗೂ ತಾರತಮ್ಯ ಮಾಡದೆ ಏಕರೂಪದಲ್ಲಿಯೇ ನೆಲಬಾಡಿಗೆಯನ್ನು ವಿತರಿಸಬೇಕು. ನಿಜವಾಗಿ ಕೃಷಿ ಭೂಮಿಗೆ ಹೆಚ್ಚಿನ ನೆಲ ಬಾಡಿಗೆ ನೀಡುವ ಬದಲು ಬರಡು ನೆಲಕ್ಕೆ ಅಧಿಕಾರಿಗಳು ಹೆಚ್ಚು ಬಾಡಿಗೆ ನಿಗದಿ ಪಡಿಸಿರುವುದು ಅವೈಜ್ಞಾನಿಕ ಎಂದು ಅವರು ಆರೋಪಿಸಿದ್ದಾರೆ.