ಕಾಸರಗೋಡು: ಬಸ್ಸು ಮತ್ತು ಕೋಳಿ ಸಾಗಾಟ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಮೊಗ್ರಾಲ್ ಕೊಪ್ಪಳ ಬಜಾರ್ ನಲ್ಲಿ ನಡೆದಿದೆ.
ಮೃತಪಟ್ಟವರನ್ನು ವ್ಯಾನ್ ಚಾಲಕ ಪರಪ್ಪ ಪಳ್ಳಂಜಿ ಯ ಉಜ್ವಲ್ ನಾಥ್ (19) ಮತ್ತು ನೌಕರ ಚೆರ್ಕಳ ಬಾಲಡ್ಕ ದ ಮಸೂದ್ ( 21) ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್ ಬೆಂಕಿ ಹತ್ತಿಕೊಂಡು ಸಂಪೂರ್ಣ ಉರಿದಿದ್ದು , ನಿಯಂತ್ರಣ ತಪ್ಪಿದ ಬಸ್ಸು ಸಮೀಪದ ಮನೆಯ ಗೋಡೆಗೆ ಬಡಿದಿದೆ.ಕುಂಬಳೆ ಕಡೆಯಿಂದ ಕಾಸರಗೋಡಿನತ್ತ ಬರುತ್ತಿದ್ದ ಮಾರುತಿ ಇಕೋ ವ್ಯಾನ್ ಮತ್ತು ತಿರುವನಂತಪುರದಿಂದ ಮಣಿಪಾಲಕ್ಕೆ ತೆರಳುತ್ತಿದ್ದ ವೋಲ್ವೋ ಬಸ್ಸು ನಡುವೆ ಅಪಘಾತ ನಡೆದಿದೆ.
ಅಪಘಾತದಿಂದ ಬಸ್ಸು ಚಾಲಕ ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಾನ್ ನಲ್ಲಿದ್ದ ಎಂಟು ಬಾಕ್ಸ್ ಕೋಳಿ ಗಳು ಮೃತಪಟ್ಟಿವೆ. ಸ್ಥಳೀಯರು, ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಬೆಂಕಿ ಯನ್ನು ನಂದಿಸಿ ಇಬ್ಬರನ್ನು ವ್ಯಾನ್ ನ ಬಾಗಿಲು ಒಡೆದು ಹೊರತೆಗೆದರೂ ಆಗಲೇ ಮೃತಪಟ್ಟಿದ್ದರು. ಇಬ್ಬರ ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.