ಸುಳ್ಯ: ಎರಡು ಬಸ್ ಗಳ ಮಧ್ಯೆ ಡಿಕ್ಕಿ ಹೊಡೆದು 20 ಮಂದಿ ಗಾಯಗೊಂಡ ಘಟನೆ ಸುಳ್ಯ ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ನಡೆದಿದೆ. ಕೆಎಸ್ಆರ್ ಟಿಸಿ ಐರಾವತ ಬಸ್ ಮತ್ತು ಖಾಸಗಿ ಬಸ್ ಗಳ ಮಧ್ಯೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಗುರುವಾರ ಮಧ್ಯಾಹ್ನ 2.30ರ ವೇಳೆಗೆ ಅಪಘಾತ ಸಂಭವಿಸಿದ್ದು ಗಾಯಾಳುಗಳಿಗೆ ಸುಳ್ಯ ತಾಲೂಕು ಆಸ್ಪತ್ರೆ ಮತ್ತು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಐರಾವತ ಬಸ್ ಮತ್ತು ಮಡಿಕೇರಿಯಿಂದ ಕಾಸರಗೋಡಿಗೆ ಹೋಗುತ್ತಿದ್ದ ಖಾಸಗಿ ಬಸ್ ಮಧ್ಯ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿಕ್ಟರ್ ಕ್ರಾಸ್ತಾ(42), ವಿಶಾಲ್ ಕುಮಾರ್(36), ಸತೀಶ(27), ಆಯಿಷಾ(31), ರಾಘವ(58), ರಾಜ(28), ಪಾರ್ವತಿ(30), ಹೊನ್ನಪ್ಪ(51), ರಮೇಶ(22), ಪೂಜಾ(23), ಶಂಕರರಾಜ ಭಟ್(45), ಪರ್ವೀಸ್(37), ಜಯತ್(21), ಅಣ್ಣು(52), ವಾಸುದೇವ(46), ಕುಸುಮ(50), ಚಂದ್ರಶೇಖರ(41), ಸಿನಾನ್(10), ಖತೀಜಮ್ಮ(77), ಫೌಝಿಯಾ(37) ಎಂಬವರು ಗಾಯಗೊಂಡಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.